ಕೀವ್,ಉಕ್ರೇನ್: ಕ್ರಿಸ್‌ಮಸ್ ಸಂದರ್ಭದಲ್ಲೇ ಉಕ್ರೇನ್ ಮೇಲೆ ರಷ್ಯಾ ಪ್ರತಿಕಾರ ತೀರಿಸಿಕೊಂಡಿದೆ. ರಷ್ಯಾದ ಕಜಾನ್ ಮೇಲೆ ಡ್ರೋನ್ ದಾಳಿ ನಡೆಸಿದ್ದ ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ಉಕ್ರೇನ್‌ನ ಮೂಲ ಸೌಕರ್ಯಗಳನ್ನು ಗುರಿಯಾಗಿಸಿಕೊಂಡು ರಷ್ಯಾ ದಾಳಿ ನಡೆಸಿದೆ. ರಷ್ಯಾದ ಕ್ಷಿಪಣಿ ದಾಳಿಯಿಂದಾಗಿ ಉಕ್ರೇನ್ ಅಪಾರ ಪ್ರಮಾಣದ ಹಾನಿ ಅನುಭವಿಸಿದೆ.
ಈ ನಡುವೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜಪಾನ್ ನೂತನ ಪ್ರಧಾನಿ ಶಿಗೆರು ಇಶಿಬಾ ಅವರೊಂದಿಗೆ ಮಾತನಾಡಿದ್ದಾರೆ. ಜಪಾನ್ ಉಕ್ರೇನ್‌ಗೆ ನಿರಂತರ ಬೆಂಬಲ ನೀಡಿಕ್ಕಾಗಿ ಝೆಲೆನ್ಸ್ಕಿ ಧನ್ಯವಾದ ತಿಳಿಸಿದ್ದಾರೆ. ವಿಶೇಷವಾಗಿ ಮಾನವೀಯ ಮತ್ತು ಆರ್ಥಿಕ ಸಹಾಯದ ರೂಪದಲ್ಲಿ, ಸಾವಿರಾರು ಜೀವಗಳನ್ನು ಉಳಿಸಲು ಸಹಾಯ ಮಾಡಿದ ಜಪಾನಿನ ಪ್ರಧಾನ ಮಂತ್ರಿಗೆ ಅವರು ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.
X ನಲ್ಲಿ ಅವರು ಈ ಬಗ್ಗೆ ಪೋಸ್ಟ್ ಮಾಡಿರುವ ಝೆಲೆನ್ಸ್ಕಿ ಅವರು ಜಪಾನಿನ ನಾಯಕನೊಂದಿಗಿನ ತಮ್ಮ ಸಂಭಾಷಣೆಯ ವಿವರಗಳನ್ನು ಹಂಚಿಕೊಂಡಿದ್ದಾರೆ. ನಾನು ಜಪಾನ್‌ನ ಪ್ರಧಾನಿ ಶಿಗೆರು ಇಶಿಬಾ ಅವರೊಂದಿಗೆ ಮಾತನಾಡಿದ್ದೇನೆ. ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಮತ್ತು ಜಪಾನ್‌ನ ಮಾನವೀಯ ಮತ್ತು ಆರ್ಥಿಕ ಸಹಾಯಕ್ಕಾಗಿ ಧನ್ಯವಾದಗಳು, ಇದು ನಮಗೆ ಸಾವಿರಾರು ಜನರ ಜೀವವನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ಟ್ವೀಟ್ ನಲ್ಲಿ ಅವರು ಹೇಳಿದ್ದಾರೆ.
ಕ್ರಿಸ್‌ಮಸ್ ರಾತ್ರಿ ಉಕ್ರೇನ್ ನ ಮೂಲಸೌಕರ್ಯದ ಮೇಲೆ ರಷ್ಯಾದ ಸಾಮೂಹಿಕ ದಾಳಿಯನ್ನು ನಾನು ಖಂಡಿಸುತ್ತೇನೆ. ಚಳಿಗಾಲದಲ್ಲಿ ಉಕ್ರೇನಿಯನ್ನರಿಗೆ ವಿದ್ಯುತ್ ಇಲ್ಲದಂತೆ ಮಾಡಲು ರಷ್ಯಾ ಪ್ರಯತ್ನಿಸುತ್ತಿರುವುದರಿಂದ ಇಂಧನ ವ್ಯವಸ್ಥೆಗಳನ್ನು ರಕ್ಷಿಸುವುದು ಮತ್ತು ಮರುಸ್ಥಾಪಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಅವರು ಒತ್ತಿ ಹೇಳಿದ್ದರೆ.
ರಷ್ಯಾ ದಾಳಿ ಖಂಡಿಸಿದ ಜಪಾನ್: ಜಪಾನ್ ಪ್ರಧಾನ ಮಂತ್ರಿ ಇಶಿಬಾ ರಷ್ಯಾದ ಆಕ್ರಮಣದಲ್ಲಿ ಉತ್ತರ ಕೊರಿಯಾದ ಒಳಗೊಳ್ಳುವಿಕೆಯನ್ನು ಖಂಡಿಸಿದ್ದಾರೆ, ಇದು ಗಂಭೀರ ಕಳವಳವನ್ನುಂಟು ಮಾಡಿದೆ. ಇಂಡೋ-ಪೆಸಿಫಿಕ್ ಭದ್ರತೆಗೆ ಬೆದರಿಕೆ ಆಗಿದೆ ಎಂದು ಇಶಿಬಾ ಕಳವಳ ವ್ಯಕ್ತಪಡಿಸಿದ್ದಾರೆ. ಆಕ್ರಮಣಕಾರರ ಮೇಲೆ ನಿರ್ಬಂಧಗಳನ್ನು ಹೆಚ್ಚಿಸಲು ಜಪಾನ್ ಸಿದ್ಧವಾಗಿದೆ ಎಂದು ಹೇಳಿದ್ದಾರೆ ಎಂಬುದು ಝೆಲೆನ್ಸ್ಕಿ ಅವರ ಎಕ್ಸ್ ಹ್ಯಾಂಡಲ್ ಪೋಸ್ಟ್ ನಲ್ಲಿ ಹೇಳಲಾಗಿದೆ.
ರಷ್ಯಾ ವಿರುದ್ಧ ಆಕ್ರೋಶ ಹೊರ ಹಾಕಿದ ಝೆಲೆನ್ಸ್ಕಿ: ಝೆಲೆನ್ಸ್ಕಿ ರಷ್ಯಾದ ಬೃಹತ್ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ಖಂಡಿಸಿದ್ದಾರೆ. ಇದು ಉಕ್ರೇನ್‌ನ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿದ್ದರಿಂದ ಇದೊಂದು ಅಮಾನವೀಯ ಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ನಮ್ಮ ರಕ್ಷಣಾ ಪಡೆಗಳು ರಷ್ಯಾದ 50 ಕ್ಕೂ ಹೆಚ್ಚು ಕ್ಷಿಪಣಿಗಳು ಮತ್ತು ಗಮನಾರ್ಹ ಸಂಖ್ಯೆಯ ಡ್ರೋನ್‌ಗಳನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ದುರದೃಷ್ಟವಶಾತ್, ಭಾರಿ ಹಾನಿ ಸಂಭವಿಸಿದೆ. ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಲು ಪವರ್ ಎಂಜಿನಿಯರ್‌ಗಳು ಕೆಲಸ ಮಾಡುತ್ತಿದ್ದಾರೆ. ಆದಷ್ಟು ಬೇಗ ಎಲ್ಲವೂ ಸರಿಯಾಗಲಿದೆ ಎಂದು ಅವರು ತಮ್ಮ ಎಕ್ಸ್ ಹ್ಯಾಂಡಲ್ ಪೋಸ್ಟ್ ನಲ್ಲಿ ವಿವರಿಸಿದ್ದಾರೆ.
ರಷ್ಯಾದ ಕ್ಷಿಪಣಿ ದಾಳಿಯಿಂದ ದಕ್ಷಿಣ ಉಕ್ರೇನ್‌ನಲ್ಲಿ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ, ಇದು ದೇಶಾದ್ಯಂತ ಇಂಧನ ಮೂಲಸೌಕರ್ಯವನ್ನು ಹಾನಿಗೊಳಿಸಿದೆ ಎಂದು ಅಲ್ ಜಜೀರಾ ವರದಿ ಹೇಳಿದೆ.
ಇದನ್ನು ಓದಿ:ಕಝಾಕಿಸ್ತಾನದಲ್ಲಿ ಅಜರ್ಬೈಜಾನ್ ವಿಮಾನ ಪತನ; ಪವಾಡದಂತೆ 25 ಮಂದಿ ಪಾರು, 40ಕ್ಕೂ ಹೆಚ್ಚು ಸಾವು ಶಂಕೆ- ಭಯಾನಕ ವಿಡಿಯೋ