ಕೌಲಾಲಂಪುರ್: ಡೋಪಿಂಗ್ ನಿಯಮ ಉಲ್ಲಂಘನೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಭಾರತದ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಪ್ರಮೋದ್ ಭಗತ್ ಅವರನ್ನು 18 ತಿಂಗಳ ಕಾಲ ನಿಷೇಧಿಸಲಾಗಿದೆ ಎಂದು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯೂಎಫ್) ಮಂಗಳವಾರ ಮಾಹಿತಿ ನೀಡಿದೆ.
ಇದರಿಂದಾಗಿ ಭಗತ್ ಮುಂಬರುವ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಿಂದಲೂ ಹೊರಗುಳಿಯಲಿದ್ದಾರೆ. ಭಗತ್ ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಈ ಕುರಿತು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯೂಎಫ್) ಮಾಹಿತಿ ನೀಡಿದ್ದು, "ಟೋಕಿಯೋ 2020 ಪ್ಯಾರಾಲಿಂಪಿಕ್ ಚಾಂಪಿಯನ್ ಪ್ರಮೋದ್ ಭಗತ್ ಡೋಪಿಂಗ್ ವಿರೋಧಿ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ 18 ತಿಂಗಳ ಕಾಲ ಅವರನ್ನು ಅಮಾನತುಗೊಳಿಸಲಾಗಿದೆ. ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲೂ ಅವರು ಭಾಗಿಯಾಗುವುದಿಲ್ಲ" ಎಂದು ತಿಳಿಸಿದೆ.
ಕಳೆದ ಹನ್ನೆರಡು ತಿಂಗಳ ಅವಧಿಯಲ್ಲಿ ಭಗತ್ ತಮ್ಮ ಇರುವಿಕೆಯ ಬಗ್ಗೆ ಮಾಹಿತಿ ನೀಡಲು ಮೂರು ಬಾರಿ ವಿಫಲವಾದ ಕಾರಣ ಬಿಡಬ್ಲ್ಯೂಎಫ್ ಡೋಪಿಂಗ್ ವಿರೋಧಿ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ತಪ್ಪಿತಸ್ಥರೆಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (ಸಿಎಎಸ್) ಹೇಳಿತ್ತು. ಈ ನಿರ್ಧಾರವನ್ನು ವಿರೋಧಿಸಿ ಭಗತ್ ಮೇಲ್ಮನವಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ತನ್ನ ಆದೇಶವನ್ನು ಎತ್ತಿಹಿಡಿದು ಅಮಾನತು ಕ್ರಮವನ್ನು ದೃಢಪಡಿಸಿದೆ.
ಬಿಹಾರದ ಪ್ರಮೋದ್ ಭಗತ್ ಕಳೆದ ವರ್ಷ ಫೆಬ್ರವರಿಯಲ್ಲಿ ಐದನೇ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆಲ್ಲುವ ಮೂಲಕ ಚೀನಾದ ಲಿನ್ ಡಾನ್ ಅವರ ದಾಖಲೆಯನ್ನು ಸರಿಗಟ್ಟಿದ್ದರು.
ಈ ಬಗ್ಗೆ ಪ್ಯಾರಾ ಬ್ಯಾಡ್ಮಿಂಟನ್ ಮುಖ್ಯ ಕೋಚ್ ಗೌರವ್ ಖನ್ನಾ ಪ್ರತಿಕ್ರಿಯಿಸಿ, "ಇದು ಅತ್ಯಂತ ದುಃಖಕರ ಮತ್ತು ದುರದೃಷ್ಟಕರ ಸಂಗತಿ. ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲೂ ಭಗತ್ ಪದಕ ನಿರೀಕ್ಷೆಯಲ್ಲಿದ್ದರು. ಆದಷ್ಟು ಬೇಗ ಅವರ ಬಲಿಷ್ಠವಾಗಿ ಕಮ್ಬ್ಯಾಕ್ ಮಾಡಲಿದ್ದಾರೆ" ಎಂದು ತಿಳಿಸಿದರು.
ಇದನ್ನೂ ಓದಿ:ಮನು ಭಾಕರ್, ನೀರಜ್ ಚೋಪ್ರಾ ಮದುವೆ ಮಾಡಿಕೊಳ್ತಾರಾ?: ಕೊನೆಗೂ ಮೌನ ಮುರಿದು ಶೂಟರ್ ತಂದೆ ಹೇಳಿದ್ದು ಹೀಗೆ - Manu Neeraj Marriage