ಪ್ಯಾರಿಸ್(ಫ್ರಾನ್ಸ್):ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇಂದು ಶುಭಾರಂಭ ಮಾಡಿದ್ದಾರೆ.
ಪುರುಷರ ಜಾವೆಲಿನ್ ಥ್ರೋ ಗ್ರೂಪ್-ಬಿ ಅರ್ಹತಾ ಸುತ್ತಿನ ಪಂದ್ಯದಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ 89.34 ಮೀಟರ್ ದೂರ ಅವರು ಭರ್ಜಿ ಎಸೆದರು. ಇದು ಈ ಋತುವಿನ ಅವರ ಅತ್ಯುತ್ತಮ ಎಸೆತ. ಇದರೊಂದಿಗೆ ಅಗ್ರಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆದರು. 84 ಮೀಟರ್ ಫೈನಲ್ ಹಂತದ ಅರ್ಹತಾ ಮಾನದಂಡವಾಗಿತ್ತು.
ಈ ಪಂದ್ಯದಲ್ಲಿ ಟೋಕಿಯೊ ಒಲಿಂಪಿಕ್ಸ್‌ನ ಚಿನ್ನದ ಪದಕ ವಿಜೇತ ನೀರಜ್ ಮೊದಲಿಗರಾಗಿ ಭರ್ಜಿ ಎಸೆಯಲು ಬಂದರು. ಮೊದಲ ಪ್ರಯತ್ನದಲ್ಲೇ ಭರ್ಜರಿ ಪ್ರದರ್ಶನ ತೋರಿ ಅರ್ಹತಾ ಸುತ್ತಿನ ಅತ್ಯುತ್ತಮ ಥ್ರೋ ದಾಖಲಿಸಿದರು. ಫೈನಲ್‌ಗೆ ಅರ್ಹತೆ ಪಡೆದ ಕಾರಣ ಮುಂದಿನ ಎರಡು ಸುತ್ತುಗಳನ್ನು ಅವರು ಆಡಲಿಲ್ಲ.
ಉಳಿದಂತೆ, ಅರ್ಹತಾ ಪಂದ್ಯದಲ್ಲಿ ಎರಡು ಬಾರಿಯ ಮಾಜಿ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ಸ್ 88.63 ಮೀಟರ್ ದೂರಕ್ಕೆ ಭರ್ಜಿ ಎಸೆದು 2ನೇ ಸ್ಥಾನ ಪಡೆದರೆ, ಜರ್ಮನಿಯ ವೆಬರ್ ಜೂಲಿಯನ್ 87.76 ಮೀ ಎಸೆತದೊಂದಿಗೆ 3ನೇ ಸ್ಥಾನ ಪಡೆದರು. ಪಾಕಿಸ್ತಾನದ ಅರ್ಷದ್ ನದೀಮ್ 86.59 ದೂರಕ್ಕೆಸೆದು 4ನೇ ಸ್ಥಾನದಲ್ಲಿದ್ದಾರೆ.
ಇದಕ್ಕೂ ಮೊದಲು, ಎ ಗುಂಪಿನಲ್ಲಿ ಸ್ಫರ್ಧಿಸಿದ್ದ ಭಾರತದ ಮತ್ತೊಬ್ಬ ಕ್ರೀಡಾಪಟು ಕಿಶೋರ್ ಕುಮಾರ್ ಜೆನಾ ಅರ್ಹತಾ ಮಾನದಂಡ ದಾಟಲು ಸಾಧ್ಯವಾಗಲಿಲ್ಲ. ಜೆನಾ 12ನೇ ಸ್ಥಾನ ಪಡೆದು ಮುಂದಿನ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.
ಆಗಸ್ಟ್ 8ರಂದು ಫೈನಲ್:ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್ ಪಂದ್ಯ ಗುರುವಾರ (ಆಗಸ್ಟ್ 8) ಭಾರತೀಯ ಕಾಲಮಾನ ರಾತ್ರಿ 11:55ಕ್ಕೆ ನಡೆಯಲಿದೆ.
ಇದನ್ನೂ ಓದಿ:ಒಲಿಂಪಿಕ್ಸ್ ಕುಸ್ತಿ: ಜಪಾನಿನ ಸೋಲಿಲ್ಲದ ಸರದಾರೆಯ ಮಣಿಸಿ ಕ್ವಾರ್ಟರ್ ಫೈನಲ್ಗೇರಿದ ವಿನೀಶ್ ಫೋಗಟ್ - Vinish Phogat