ಪ್ಯಾರಿಸ್ (ಫ್ರಾನ್ಸ್):ಪ್ಯಾರಿಸ್ ಒಲಿಂಪಿಕ್ಸ್ 2024ರ ಬಾಕ್ಸಿಂಗ್‌ನ ಡ್ರಾ ಪಟ್ಟಿ ಗುರುವಾರ ಬಿಡುಗಡೆಯಾಗಿದೆ. ಭಾರತದ ಮಹಿಳಾ ಬಾಕ್ಸರ್‌ಗಳಾದ ನಿಖತ್ ಜರೀನ್ ಮತ್ತು ಲೊವ್ಲಿನಾ ಬೊರ್ಗೊಹೈನ್ ಅವರಿಗೆ ಕಠಿಣ ಸವಾಲು ಎದುರಾಗಿದೆ. ಮಹಿಳೆಯರ 50 ಕೆಜಿ ವಿಭಾಗದ 32ರ ಸುತ್ತಿನಲ್ಲಿ ನಿಖತ್ ಜರ್ಮನಿಯ ಮ್ಯಾಕ್ಸಿ ಕ್ಲೋಟ್ಜರ್ ಅವರನ್ನು ಎದುರಿಸಲಿದ್ದಾರೆ. ಡ್ರಾದ ಬ್ರಾಕೆಟ್ ಪ್ರಕಾರ, ಎರಡು ಬಾರಿಯ ವಿಶ್ವ ಚಾಂಪಿಯನ್ 16ರ ಸುತ್ತಿನಲ್ಲಿ ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಚೀನಾದ ವು ಯು ಅವರನ್ನು ಎದುರಿಸಬಹುದು.
- ಲೊವ್ಲಿನಾ ಬೊರ್ಗೊಹೈನ್:ಲೊವ್ಲಿನಾಗೆ ಪದಕದ ಹಾದಿಯೂ ಸುಲಭವಲ್ಲ. ಮಹಿಳೆಯರ 75 ಕೆಜಿ ವಿಭಾಗದಲ್ಲಿ ಅವರು ನಾರ್ವೆಯ ಸುನ್ನಿವಾ ಹಾಫ್‌ಸ್ಟಾಡ್ ಅವರನ್ನು ಎದುರಿಸಲಿದ್ದಾರೆ. ಇದರ ನಂತರ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಲಿ ಕಿಯಾನ್ ಅವರನ್ನು ಎದುರಿಸಬಹುದು.
- ನಿಖತ್ ಜರೀನ್:ನಿಖತ್ ಅವರ ಸಂಭಾವ್ಯ ಎದುರಾಳಿ ವು ಯು ಅವರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಬಾಕ್ಸರ್ ಆಗಿದ್ದಾರೆ. ಮತ್ತು 52 ಕೆಜಿಯಲ್ಲಿ ಪ್ರಸ್ತುತ ವಿಶ್ವ ಚಾಂಪಿಯನ್ ಕೂಡ ಆಗಿದ್ದಾರೆ. ನಿಖತ್ ಚೀನಾದ ಸವಾಲನ್ನು ಜಯಿಸಿದರೆ, ಕ್ವಾರ್ಟರ್ ಫೈನಲ್‌ನಲ್ಲಿ ಥಾಯ್ಲೆಂಡ್‌ನ ಚುಥಾಮತ್ ರಕ್ಸತ್ ಅಥವಾ ಉಜ್ಬೇಕಿಸ್ತಾನದ ಸಬಿನಾ ಬೊಬೊಕುಲೋವಾ ಅವರನ್ನು ಎದುರಿಸಲಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಸ್ಟ್ರಾಂಡ್ಜಾ ಫೈನಲ್‌ನಲ್ಲಿ ಬೊಬೊಕುಲೋವಾ ವಿರುದ್ಧ ನಿಖತ್ ಸೋಲು ಒಪ್ಪಿಕೊಂಡಿದ್ದರು. ಅಲ್ಲದೇ, ಕಳೆದ ವರ್ಷ ಏಷ್ಯನ್ ಗೇಮ್ಸ್‌ನ ಸೆಮಿಫೈನಲ್‌ನಲ್ಲಿ ರಕ್ಷತ್ ನಿಖತ್ ಅವರನ್ನು ಸೋಲಿಸಿದ್ದರು.
- ಜಾಸ್ಮಿನ್ ಲಂಬೋರೈ:ಟೋಕಿಯೊ 2020ರ ಬೆಳ್ಳಿ ಪದಕ ವಿಜೇತ ಫಿಲಿಪೈನ್ಸ್‌ನ ನೆಸ್ಟಿ ಪೆಟೆಸಿಯೊ ವಿರುದ್ಧ ಮಹಿಳೆಯರ 57 ಕೆಜಿ ವಿಭಾಗದಲ್ಲಿ ಜಾಸ್ಮಿನ್ ಲಂಬೊರೈ ತನ್ನ ಒಲಿಂಪಿಕ್ ಅಭಿಯಾನ ಪ್ರಾರಂಭಿಸಲಿದ್ದಾರೆ. ಜಾಸ್ಮಿನ್ ಗೆದ್ದರೆ ಮುಂದಿನ ಸುತ್ತಿನಲ್ಲಿ ಮೂರನೇ ಶ್ರೇಯಾಂಕದ ಫ್ರಾನ್ಸ್‌ನ ಅಮಿನಾ ಜಿದಾನಿಯನ್ನು ಎದುರಿಸಲಿದ್ದಾರೆ.
- ಅಮಿತ್ ಪಂಗಲ್ ಮತ್ತು ನಿಶಾಂತ್ ದೇವ್: ಬಿಡುಗಡೆಯಾದ ಡ್ರಾದಲ್ಲಿ, ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಪ್ರೀತಿ ಪವಾರ್ 32 ರ ಸುತ್ತಿನಲ್ಲಿ ವಿಯೆಟ್ನಾಂನ ವೋ ಥಿ ಕಿಮ್ ಅನ್ಹ್ ವಿರುದ್ಧ ಡ್ರಾ ಮಾಡಿಕೊಂಡರು. ಅಮಿತ್ ಪಂಘಲ್ ಮತ್ತು ನಿಶಾಂತ್ ದೇವ್ ತಮ್ಮ ಆರಂಭಿಕ ಪಂದ್ಯಗಳಲ್ಲಿ ಬೈ ಪಡೆದಿದ್ದಾರೆ. ಆದಾಗ್ಯೂ, ಅಮಿತ್ ತಮ್ಮ ಆರಂಭಿಕ ಪಂದ್ಯದಲ್ಲಿ ಜಾಂಬಿಯಾದ ಪ್ಯಾಟ್ರಿಕ್ ಚಿನ್ಯೆಂಬಾ ಅವರನ್ನು ಎದುರಿಸಲಿದ್ದು, ನಿಶಾಂತ್ ದೇವ್ ಈಕ್ವೆಡಾರ್‌ನ ಜೋಸ್ ರೊಡ್ರಿಗಸ್ ಟೆನೊರಿಯೊ ಅವರನ್ನು ಎದುರಿಸಲಿದ್ದಾರೆ.