ಹೈದರಾಬಾದ್: ಚಾಂಪಿಯನ್ಸ್ ಟ್ರೋಫಿಗೆ ಇನ್ನು 13 ದಿನಗಳು ಮಾತ್ರ ಬಾಕಿ ಉಳಿದಿದ್ದು, ಇದರ ನಡುವೆಯೇ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ದಿಡೀರ್ ನಿವೃತ್ತಿ ಘೋಷಿಸಿ ತಂಡಕ್ಕೆ ಶಾಕ್ ನೀಡಿದ್ದಾರೆ.
ಈ ತಿಂಗಳ ಫೆ.19ರಿಂದ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪ್ರಕಟವಾದ ಆಸ್ಟ್ರೇಲಿಯಾ ತಂಡದಲ್ಲಿ ಸ್ಟೊಯಿನಿಸ್ ಸ್ಥಾನ ಪಡೆದಿದ್ದರು. ಇದೀಗ ಅವರು ಏಕಾಏಕಿ ನಿವೃತ್ತಿ ಘೋಷಣೆ ಮಾಡಿದ್ದು, ಕ್ರೀಡಾಲೋಕದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.
ಈಗಾಗಲೇ ಮಿಚೆಲ್ ಮಾರ್ಷ್ ಮತ್ತು ಜೋಶ್ ಹ್ಯಾಜಲ್‌ವುಡ್‌ರಂತಹ ಸ್ಟಾರ್ ಆಟಗಾರರು ಗಾಯಗಳಿಂದಾಗಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ. ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ಆಡುತ್ತಾರೆಯೇ ಇಲ್ಲವೇ ಎಂಬುದರ ಬಗ್ಗೆಯೂ ಇನ್ನು ಸ್ಪಷ್ಟ ಮಾಹಿತಿ ಇಲ್ಲ. ಇಂತಹ ಸಂಕಷ್ಟದಲ್ಲಿರುವ ಆಸ್ಟ್ರೇಲಿಯಾಗೆ ಸ್ಟೊಯಿನಿಸ್ ಶಾಕ್ ನೀಡಿದ್ದಾರೆ.
ಸ್ಟೊಯಿನಿಸ್ ODI ದಾಖಲೆ: 2015ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಸ್ಟೊಯಿನಿಸ್, ಈವರೆಗೂ 74 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 93.96ಸ್ಟ್ರೈಕ್ ರೇಟ್‌ನಲ್ಲಿ 1495 ರನ್ ಗಳಿಸಿದ್ದಾರೆ. ಈಡನ್ ಗಾರ್ಡನ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಅಜೇಯವಾಗಿ 146 ರನ್ ಗಳಿಸಿದ್ದು, ಏಕದಿನ ಸ್ವರೂಪದಲ್ಲಿ ಅತ್ಯಧಿಕ ಸ್ಕೋರ್ ಆಗಿತ್ತು.
ಜೊತೆಗೆ 74 ಪಂದ್ಯಗಳಲ್ಲಿ 43.12 ಸರಾಸರಿಯಲ್ಲಿ 48 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ನವೆಂಬರ್ 10, 2024 ರಂದು ಪರ್ತ್‌ನಲ್ಲಿ ಪಾಕಿಸ್ತಾನ ವಿರುದ್ಧ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. 2019ರಲ್ಲಿ ಕ್ರಿಕೆಟ್ ಆಸ್ಟ್ರೇಲಿಯ ನೀಡುವ ವರ್ಷದ ಏಕದಿನ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು.
ಮಧ್ಯಮ ಕ್ರಮಾಂಕದಲ್ಲಿ ಬೆಸ್ಟ್ ಬ್ಯಾಟರ್ ಎನಿಸಿಕೊಂಡಿದ್ದ ಇವರು ಅಗತ್ಯವಿದ್ದಾಗ ದೊಡ್ಡ ಹೊಡೆತಗಳ ಮೂಲಕ ಫಿನಿಶರ್ ಪಾತ್ರವನ್ನು ವಹಿಸುತ್ತಿದ್ದರು. ಸ್ಟೊಯಿನಿಸ್ ದಿಢೀರ್ ನಿವೃತ್ತಿ ಆಸ್ಟ್ರೇಲಿಯಾಕ್ಕೆ ಭಾರೀ ಆಘಾತ ಉಂಟುಮಾಡಿದೆ.
ತಮ್ಮ ನಿವೃತ್ತಿ ಕುರಿತು ಪ್ರತಿಕ್ರಿಯೆ ನೀಡಿರುವ ಸ್ಟೊಯಿನಿಸ್, ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದಕ್ಕೆ ಹೆಮ್ಮೆಯಿದೆ. ಹಸಿರು ಮತ್ತು ಹಳದಿ ಜೆರ್ಸಿಯಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದು, ನನಗೆ ಹೆಮ್ಮೆಯ ಸಂಗತಿ. ವಿಶ್ವ ಮಟ್ಟದಲ್ಲಿ ತಂಡವನ್ನು ಪ್ರತಿನಿಧಿಸುವುದು ಸುಲಭದ ಮಾತಲ್ಲ. ಆದರೆ, ಭವಿಷ್ಯದ ದೃಷ್ಟಿಯಿಂದ ನಾನು ಏಕದಿನ ಸ್ವರೂಪದಿಂದ ನಿವೃತ್ತಿ ಪಡೆಯುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: 15 ತಿಂಗಳ ಬಳಿಕ ಏಕದಿನ ಪಂದ್ಯಕ್ಕೆ ಶಮಿ ಎಂಟ್ರಿ: ವಿಶ್ವ ದಾಖಲೆ ಮೇಲೆ ಸ್ಪೀಡ್ಸ್ಟಾರ್ ಕಣ್ಣು!