ನವದೆಹಲಿ: ಎಲ್ಗಾರ್ ಪರಿಷತ್ ಮತ್ತು ಮಾವೋವಾದಿಗಳ ನಂಟು ಪ್ರಕರಣದಲ್ಲಿ ಬಂಧಿತರಾಗಿರುವ ವಕೀಲ ಸುರೇಂದ್ರ ಗದ್ಲಿಂಗ್ ಮತ್ತು ಸಾಮಾಜಿಕ ಕಾರ್ಯಕರ್ತೆ ಜ್ಯೋತಿ ಜಗತಾಪ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ.
ಅಲ್ಲದೆ ಸಾಮಾಜಿಕ ಕಾರ್ಯಕರ್ತ ಮಹೇಶ್ ರಾವತ್ ಅವರಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಮತ್ತು ರಾಜೇಶ್ ಬಿಂದಾಲ್ ಅವರ ನ್ಯಾಯಪೀಠ ಇದರ ವಿಚಾರಣೆಯನ್ನು ಕೂಡ ಮುಂದೂಡಿದೆ.
ರಾವತ್ಗೆ ಈ ಮುನ್ನ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ಈ ತೀರ್ಪನ್ನು ಪ್ರಶ್ನಿಸಲು ಸಮಯ ನೀಡುವಂತೆ ಎನ್ಐಎ ಮಾಡಿದ ಮನವಿಯನ್ನು ಪುರಸ್ಕರಿಸಿದ್ದ ಸುಪ್ರೀಂ ಕೋರ್ಟ್ ಇದಕ್ಕೆ ತಡೆಯಾಜ್ಞೆ ನೀಡಿತ್ತು.
ಗದ್ಲಿಂಗ್ ಪರವಾಗಿ ಹಾಜರಾದ ಹಿರಿಯ ವಕೀಲ ಆನಂದ್ ಗ್ರೋವರ್, ಆರೋಪಿಯು ವಿಚಾರಣೆಯನ್ನು ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪಗಳನ್ನು ನಿರಾಕರಿಸಿದರು ಮತ್ತು ದಾಖಲೆಗಳನ್ನು ಹಾಜರುಪಡಿಸಲು ಸಮಯ ಕೋರಿದರು. ಜಗತಾಪ್ ಮತ್ತು ರಾವತ್ ಅವರ ಪರವಾಗಿ ಹಾಜರಾದ ಹಿರಿಯ ವಕೀಲ ಮಿಹಿರ್ ದೇಸಾಯಿ ಅವರು ಈ ಪ್ರಕರಣದ ವಿಚಾರಣೆಯನ್ನು ಆದಷ್ಟು ಬೇಗನೆ ಆರಂಭಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಎನ್ಐಎ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, ರಾವತ್ ಅವರಿಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್ ಆದೇಶವು ಸಂಪೂರ್ಣವಾಗಿ ತಪ್ಪಾಗಿದೆ ಎಂದು ಹೇಳಿದರು. ಎಲ್ಲಾ ಅರ್ಜಿಗಳ ವಿಚಾರಣೆಯನ್ನು ಒಟ್ಟಾಗಿ ನಡೆಸುವುದಾಗಿ ತಿಳಿಸಿದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಮುಂದೂಡಿದೆ.
ಗದ್ಲಿಂಗ್ ಮಾವೋವಾದಿಗಳಿಗೆ ನೆರವು ನೀಡಿದ ಮತ್ತು ಪ್ರಕರಣದಲ್ಲಿ ತಲೆಮರೆಸಿಕೊಂಡಿರುವವರು ಸೇರಿದಂತೆ ವಿವಿಧ ಸಹ ಆರೋಪಿಗಳೊಂದಿಗೆ ಪಿತೂರಿ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಗದ್ಲಿಂಗ್ ಭೂಗತ ಮಾವೋವಾದಿ ಬಂಡುಕೋರರಿಗೆ ಸರ್ಕಾರಿ ಚಟುವಟಿಕೆಗಳು ಮತ್ತು ಕೆಲ ಪ್ರದೇಶಗಳ ನಕ್ಷೆಗಳ ಬಗ್ಗೆ ರಹಸ್ಯ ಮಾಹಿತಿಯನ್ನು ಒದಗಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ಹೇಳಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ ಮತ್ತು ಐಪಿಸಿಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸುರ್ಜಾಘರ್ ಗಣಿಗಾರಿಕೆಯನ್ನು ವಿರೋಧಿಸುವಂತೆ ಅವರು ಮಾವೋವಾದಿಗಳಿಗೆ ಕೇಳಿಕೊಂಡಿದ್ದರು ಮತ್ತು ಮಾವೋವಾದಿಗಳೊಂದಿಗೆ ಸೇರಿಕೊಳ್ಳುವಂತೆ ಹಲವಾರು ಸ್ಥಳೀಯರನ್ನು ಪ್ರಚೋದಿಸಿದ್ದರು ಎಂದು ವರದಿಯಾಗಿದೆ.
ಡಿಸೆಂಬರ್ 31, 2017 ರಂದು ಪುಣೆಯಲ್ಲಿ ನಡೆದ ಎಲ್ಗಾರ್ ಪರಿಷತ್ ಸಮಾವೇಶದಲ್ಲಿ ಮಾಡಿದ ಪ್ರಚೋದನಕಾರಿ ಭಾಷಣಗಳಿಗೆ ಸಂಬಂಧಿಸಿದ ಎಲ್ಗಾರ್ ಪರಿಷತ್ ಮಾವೋವಾದಿಗಳೊಂದಿಗೆ ನಂಟು ಹೊಂದಿರುವ ಬಗ್ಗೆ ಗದ್ಲಿಂಗ್ ವಿಚಾರಣೆ ಎದುರಿಸುತ್ತಿದ್ದಾರೆ. ಪುಣೆ ಜಿಲ್ಲೆಯ ಕೋರೆಗಾಂವ್-ಭೀಮಾ ಯುದ್ಧ ಸ್ಮಾರಕದ ಬಳಿ ಮರುದಿನ ಈ ಭಾಷಣಗಳು ಹಿಂಸಾಚಾರಕ್ಕೆ ಪ್ರಚೋದನೆ ನೀಡಿವೆ ಎಂದು ಪೊಲೀಸರು ಹೇಳಿದ್ದಾರೆ.