ರಾಮನಗರ : ಬೆಂಗಳೂರಿನಿಂದ ರಾಮನಗರಕ್ಕೆ ಹೋಗುತ್ತಿದ್ದ ಸ್ಕಾರ್ಪಿಯೋ ಕಾರೊಂದು ಚಲಿಸುತ್ತಿದ್ದಾಗಲೇ ಹೊತ್ತಿ ಉರಿದ ಘಟನೆ ಬಿಡದಿ ಸಂಮೀಪ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಇಂದು ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರು ಮಕ್ಕಳು ಸೇರಿದಂತೆ 10 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಮನಗರದ ನಿವಾಸಿಗಳಾದ ಮುಸ್ಲಿಂ ಕುಟುಂಬದ ಮೂವರು ಮಕ್ಕಳು ಸೇರಿ 10 ಮಂದಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಇಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಕಾರು ನಿಲ್ಲಿಸಿ ಲಗೇಜ್ ಬ್ಯಾಗ್ ಸಹಿತ ಎಲ್ಲರೂ ಕೆಳಗಿಳಿದಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಇನ್ನು ಘಟನೆಯಲ್ಲಿ ಸುಟ್ಟುಹೋದ ಸ್ಕಾರ್ಪಿಯೋ ಕಾರು ಹಳೆಯದಾಗಿದ್ದು, ಅದು ರಾಮನಗರ ಮೂಲದ ಕುಟುಂಬವೊಂದಕ್ಕೆ ಸೇರಿದೆ ಎಂದು ವರದಿಯಾಗಿದೆ.
ಕಾರು ಚಲಿಸುತ್ತಿದ್ದ ವೇಳೆ ದಿಢೀರ್ ಕಾಣಿಸಿಕೊಂಡ ಬೆಂಕಿಯಿಂದಾಗಿ ಎಚ್ಚೆತ್ತ ಕಾರಿನ ಚಾಲಕ ರಸ್ತೆಬದಿಗೆ ಕಾರು ನಿಲ್ಲಿಸಿದ್ದರಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವೇಳೆ ಕೆಲಕಾಲ ಸ್ಥಳದಲ್ಲಿ ಆತಂಕ ಮನೆ ಮಾಡಿತ್ತು. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದು, ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಹಸೀನಾ ಭಾಷಣಕ್ಕೆ ಆಕ್ರೋಶ; ಬಾಂಗ್ಲಾ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಮನೆಗೆ ಬೆಂಕಿ ಹಚ್ಚಿ ಧ್ವಂಸ