ಹಮೀರ್‌ಪುರ (ಹಿಮಾಚಲಪ್ರದೇಶ) : ವಿವಾಹ ವಂಚನೆಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧು ಹಣ ಮತ್ತು ಆಭರಣಗಳೊಂದಿಗೆ ನಾಪತ್ತೆಯಾಗಿದ್ದಾಳೆ. ಮೋಸ ಹೋದ ವರ ಪೊಲೀಸರಿಗೆ ದೂರು ನೀಡಿದ್ದಾರೆ.
ಹಿಮಾಚಲಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. ಜಿಲ್ಲೆಯ ಸಾಹಿ ಗ್ರಾಮದ ಯುವಕನೊಬ್ಬ ತನಗೆ ವಧು ಮತ್ತು ಮದುವೆ ನಿಶ್ಚಯ ಮಾಡಿಕೊಟ್ಟ ವ್ಯಕ್ತಿ ಮೋಸ ಮಾಡಿದ್ದಾರೆ. ತನಗೆ ಸೇರಿದ ಹಣ ಮತ್ತು ಚಿನ್ನಾಭರಣವನ್ನು ಎಗರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಯುವಕನ ಆರೋಪವೇನು? ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ದೂರುದಾರ ಯುವಕ ಮದುವೆ ನಿಶ್ಚಯಕ್ಕೆ ವ್ಯಕ್ತಿಯೊಬ್ಬರಿಗೆ 1.50 ಲಕ್ಷ ರೂಪಾಯಿ ನೀಡಿದ್ದಾರೆ. ಹರಿಯಾಣದ ಯಮುನಾ ನಗರದಲ್ಲಿರುವ ವಧುವನ್ನು ತಾನು 2024ರ ಡಿಸೆಂಬರ್ 13 ರಂದು ತನ್ನ ಗ್ರಾಮದ ದೇವಸ್ಥಾನದಲ್ಲಿ ಸಕಲ ಶಾಸ್ತ್ರಗಳೊಂದಿಗೆ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದಾಗಿ ವರ ತಿಳಿಸಿದ್ದಾರೆ.
ವಿವಾಹವಾದ ಕೆಲವೇ ಗಂಟೆಗಳಲ್ಲಿ ವಧು ತನ್ನ ತಾಯಿಗೆ ಅನಾರೋಗ್ಯ ಉಂಟಾಗಿದೆ. ಎರಡು ದಿನಗಳಲ್ಲಿ ವಾಪಸ್ ಬರುವುದಾಗಿ ಹೇಳಿ ಹಣ ಮತ್ತು ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಾಳೆ. ಇದಾದ ಬಳಿಕ ಫೋನ್ ಕರೆಗೂ ಸಿಗುತ್ತಿಲ್ಲ. ಆಕೆಯೂ ವಾಪಸ್ ಬಂದಿಲ್ಲ ಎಂದು ದೂರು ನೀಡಿದ್ದಾಗಿ ಪೊಲೀಸರು ಈ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.
ಈ ಮಧ್ಯೆ, ಮದುವೆ ನಿಶ್ಚಯ ಮಾಡಿಕೊಟ್ಟ ಮಧ್ಯವರ್ತಿ ವ್ಯಕ್ತಿಯೂ ವಧುವನ್ನು ವಾಪಸ್ ಕರೆತರುವ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ. ಅವರೂ ಕೂಡ ಯಾವುದೇ ಫೋನ್ ಕರೆಗಳಿಗೆ ಉತ್ತರಿಸುತ್ತಿಲ್ಲ. ಆಭರಣ ಮತ್ತು ಹಣ ವಾಪಸ್ ಕೊಡಿಸುವಂತೆ ಕೇಳಿದರೂ, ನಿರಾಕರಿಸುತ್ತಿದ್ದಾರೆ. ತನಗೆ ಮೋಸವಾಗಿದೆ ಎಂದು ಯುವಕ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣ ದಾಖಲಿಸಿ ತನಿಖೆ : ವಧು ಮತ್ತು ಮಧ್ಯವರ್ತಿ ವ್ಯಕ್ತಿ ಇಬ್ಬರೂ ನಾಪತ್ತೆಯಾದ ಬಳಿಕ ಯುವಕ ತಾನು ಮೋಸ ಹೋದ ಬಗ್ಗೆ ಅರಿತುಕೊಂಡಿದ್ದಾರೆ. ವಿವಾಹ ನಿಶ್ಚಯಕ್ಕಾಗಿ ಮಧ್ಯವರ್ತಿ ವ್ಯಕ್ತಿಗೆ 1.50 ಲಕ್ಷ ರೂಪಾಯಿ ನೀಡಿದ್ದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹಮೀರ್‌ಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಭಗತ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ : 2 ಮದ್ವೆ ಆಗಿರೋ ಮಹಿಳೆಯೊಂದಿಗೆ ವಿವಾಹ ಮಾಡಿಸಿ ₹4 ಲಕ್ಷ ವಂಚನೆ, 7 ಮಂದಿ ವಿರುದ್ಧ ಕೇಸ್