ದುರ್ಗ್ (ಛತ್ತೀಸ್‌ಗಢ): ಇಲ್ಲಿನ ಜಿಲ್ಲಾ ಆಸ್ಪತ್ರೆಯೊಂದರಲ್ಲಿ ಎರಡು ನವಜಾತ ಶಿಶುಗಳು ಅದಲಿ ಬದಲಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಶಬಾನಾ ಎಂಬ ಮಹಿಳೆಗೆ ಸಿಸೇರಿಯನ್ ಮೂಲಕ ಮಗುವಾಗಿದೆ. ಹೆರಿಗೆಯ ನಂತರ ಮಗುವಿನೊಂದಿಗೆ ಮನೆಗೆ ಬಂದ ಆಕೆಗೆ ಅಚ್ಚರಿ ಕಾದಿತ್ತು. ಮಗುವಿನ ಕೈಯಲ್ಲಿದ್ದ ಬ್ಯಾಂಡ್ನಲ್ಲಿ ತಾಯಿಯ ಹೆಸರು ಸಾಧನ ಎಂದು ಬರೆಯಲಾಗಿತ್ತು. ತಕ್ಷಣವೇ ಶಬಾನಾ ಕುಟುಂಬ ದುರ್ಗ್ನ ಜಿಲ್ಲಾಸ್ಪತ್ರೆಗೆ ಧಾವಿಸಿ ವಿಚಾರವನ್ನು ಆಸ್ಪತ್ರೆ ಆಡಳಿತ ಮಂಡಳಿಗೆ ತಿಳಿಸಲಾಗಿದೆ.
ಬಳಿಕ ಮಗುವಿನ ಕೈಗೆ ಬ್ಯಾಂಡ್ನಲ್ಲಿ ಹೆಸರು ಬರೆದಿದ್ದ ಸಾಧನಾ ಎಂಬ ಮಹಿಳೆಯ ಕುಟುಂಬವನ್ನು ಆಸ್ಪತ್ರೆಗೆ ಕರೆ ತರಲಾಯಿತು. ಆದರೆ ಇದನ್ನು ಸಾಧನಾ ನಂಬಲಿಲ್ಲ. ಇಬ್ಬರೂ ಕುಟುಂಬದವರು ಆಸ್ಪತ್ರೆ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದ ನಂತರ ಜಿಲ್ಲಾಧಿಕಾರಿ ಮೂವರು ಸದಸ್ಯರ ತನಿಖಾ ತಂಡವನ್ನು ರಚಿಸಿದರು. ತಂಡದಿಂದ ಬಂದಿರುವ ವರದಿ ಆಧರಿಸಿ ನವಜಾತ ಶಿಶುಗಳ ಎರಡೂ ಡಿಎನ್‌ಎ ಮಾಡಿಸಲು ನಿರ್ಧರಿಸಲಾಗಿದೆ.
ಡಿಎನ್‌ಎ ಪರೀಕ್ಷೆ : ಈ ಬಗ್ಗೆ ಜಿಲ್ಲಾಧಿಕಾರಿ ರಿಚಾ ಪ್ರಕಾಶ್ ಚೌಧರಿ ಮಾತನಾಡಿ, "ದುರ್ಗ್ ಜಿಲ್ಲಾ ಆಸ್ಪತ್ರೆಯಲ್ಲಿ ಮೂರು ದಿನಗಳ ಹಿಂದೆ ವಿಚಾರ ಬೆಳಕಿಗೆ ಬಂದಿದೆ. ಒಂದು ವಾರದ ಹಿಂದೆ ಎರಡು ಮಕ್ಕಳು ಜನಿಸಿದರು ಎಂದು ಹೇಳಲಾಗಿದೆ. ನಮ್ಮ ಸಹಾಯಕ ಜಿಲ್ಲಾಧಿಕಾರಿ, ಜಿಲ್ಲಾ ಆಸ್ಪತ್ರೆಯ ನೋಡಲ್ ವೈದ್ಯರು ಮತ್ತು ಆರೋಗ್ಯಾಧಿಕಾರಿಗಳ ತಂಡ ಈ ಕುರಿತು ತನಿಖೆ ನಡೆಸಿದೆ. ಆರಂಭದಲ್ಲಿ ಆಸ್ಪತ್ರೆಯ ಒಟಿಯಲ್ಲಿ ತಂತ್ರಜ್ಞರಿಂದ ಮಕ್ಕಳ ವಿನಿಮಯ ನಡೆದಿರುವುದು ಕಂಡುಬಂದಿದೆ. CWC ಮುಂದೆ ಮಕ್ಕಳನ್ನು ಹಾಜರುಪಡಿಸಲಾಗುತ್ತಿದೆ. ಸಿಡಬ್ಲ್ಯೂಸಿಯ ನಿರ್ಧಾರದ ಪ್ರಕಾರ ಮಕ್ಕಳ ಮತ್ತು ಪೋಷಕರ ಡಿಎನ್ಎ ಪರೀಕ್ಷೆಯನ್ನು ಮಾಡಿದ ನಂತರ, ಸರಿಯಾದ ಮಗುವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು. ಈ ಸಮಸ್ಯೆ ಬಗೆಹರಿದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ತಿಳಿಸಿದರು.
ಇದನ್ನೂ ಓದಿ: ತವರಿಗೆ ಬಂದ ಮಗಳನ್ನು ಸರಪಳಿಯಿಂದ ಕಟ್ಟಿಹಾಕಿದ್ದ ಪೋಷಕರು; ಗೃಹಬಂಧನಲ್ಲಿದ್ದ ಮಹಿಳೆಯ ರಕ್ಷಣೆ