ಹೈದರಾಬಾದ್: ಪ್ಯಾರಿಸ್ ಒಲಿಂಪಿಕ್ಸ್‌ನ 2024ರ 13ನೇ ದಿನ ಭಾರತದ ಪಾಲಿಗೆ ಕರಾಳ ದಿನವಾಗಿತ್ತು. ಮಹಿಳೆಯರ 50 ಕೆ.ಜಿ ಕುಸ್ತಿ ಪಂದ್ಯದಲ್ಲಿ ಫೈನಲ್ ತಲುಪಿದ್ದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ದೇಹ ತೂಕ ಹೆಚ್ಚಾದ ಕಾರಣ ಅಂತಿಮ ಸುತ್ತಿನಿಂದ ಅನರ್ಹಗೊಂಡಿದ್ದರು. ಇದರಿಂದ ಕುಸ್ತಿಯಲ್ಲಿ ಚಿನ್ನದ ನಿರೀಕ್ಷೆಯಲ್ಲಿದ್ದ ಭಾರತೀಯರ ಕನಸು ನುಚ್ಚುನೂರಾಯಿತು. ಆದರೆ 13ನೇ ದಿನವಾದ ಇಂದು ನೀರಜ್ ಚೋಪ್ರಾ ಮತ್ತು ಭಾರತ ಹಾಕಿ ತಂಡದ ಮೇಲೆ ಪದಕ ನಿರೀಕ್ಷೆಗಳು ಗರಿಗೆದರಿವೆ.
ಭಾರತದ ಸ್ಪರ್ಧೆಗಳ ವೇಳಾಪಟ್ಟಿ:
ಗಾಲ್ಫ್
ಮಹಿಳೆಯರ ಸಿಂಗಲ್ಸ್ ರೌಂಡ್-2 (ಅದಿತಿ ಅಶೋಕ್ ಮತ್ತು ದೀಕ್ಷಾ ದಾಗರ್) - ಮಧ್ಯಾಹ್ನ 12:30ಕ್ಕೆ
ಗಾಲ್ಫ್ ಆಟಗಾರರಾದ ಅದಿತಿ ಅಶೋಕ್ ಮತ್ತು ದೀಕ್ಷಾ ದಾಗರ್ ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ರೌಂಡ್-2 ಈವೆಂಟ್‌ನಲ್ಲಿ ಭಾಗಿಯಾಗಲಿದ್ದಾರೆ. ಈ ಇಬ್ಬರು ಪ್ರತಿಭಾವಂತ ಮಹಿಳಾ ಗಾಲ್ಫ್ ಆಟಗಾರರಿಂದ ಪ್ರಭಾವಶಾಲಿ ಪ್ರದರ್ಶನವನ್ನು ದೇಶ ಎದುರು ನೋಡುತ್ತಿದೆ. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನ ಗಳಿಸಿದ್ದ ಅದಿತಿ, ಈ ಬಾರಿ ಪ್ರಶಸ್ತಿಗೆ ಮುತ್ತಿಡಲಿ ಎನ್ನುವುದು ಕ್ರೀಡಾಭಿಮಾನಿಗಳ ಆಶಯ.
ಅಥ್ಲೆಟಿಕ್ಸ್:
ಮಹಿಳೆಯರ 100 ಮೀಟರ್ ಹರ್ಡಲ್ಸ್ ರಿಪೆಚೇಜ್ ಸುತ್ತು (ಜ್ಯೋತಿ ಯರ್ರಾಜಿ) - ಮಧ್ಯಾಹ್ನ 02:05ಕ್ಕೆ
ಕುಸ್ತಿ
- ಪುರುಷರ ಫ್ರೀಸ್ಟೈಲ್ A ಗುಂಪಿನ 57 ಕೆ.ಜಿ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯ (ಭಾರತ Vs ನಾರ್ತ್ ಮ್ಯಾಸಿಡೋನಿಯಾ) - ಮಧ್ಯಾಹ್ನ 2:30ಕ್ಕೆ
A ಗುಂಪಿನ ಪುರುಷರ ಫ್ರೀಸ್ಟೈಲ್ 57 ಕೆ.ಜಿ ವಿಭಾಗದ ಪ್ರೀ-ಕ್ವಾರ್ಟರ್ ಫೈನಲ್ ಕುಸ್ತಿ ಪಂದ್ಯದಲ್ಲಿ ಭಾರತದ ಅಮನ್ ಅಮನ್ ಮತ್ತು ಮ್ಯಾಸಿಡೋನಿಯಾದ ಎಗೊರೊವ್ ವ್ಲಾಡಿಮಿರ್ ನಡುವೆ ನಡೆಯಲಿದೆ.
- ಮಹಿಳೆಯರ ಫ್ರೀಸ್ಟೈಲ್ B ಗುಂಪಿನ 57 ಕೆ.ಜಿ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯ (ಭಾರತ Vs ಯುಎಸ್ಎ) - ಮಧ್ಯಾಹ್ನ 2:30ಕ್ಕೆ
B ಗುಂಪಿನ ಮಹಿಳಾ ಫ್ರೀಸ್ಟೈಲ್ 57 ಕೆ.ಜಿ ವಿಭಾಗದ ಪ್ರೀ-ಕ್ವಾರ್ಟರ್ ಫೈನಲ್ ಕುಸ್ತಿ ಪಂದ್ಯದಲ್ಲಿ ಭಾರತದ ಅನ್ಶು ಮತ್ತು ಯುಎಸ್ನ ಹೆಲೆನ್ ಲೂಯಿಸ್ ಮರೂಲಿಸ್ ಮುಖಾಮುಖಿಯಾಗಲಿದ್ದಾರೆ.
ಹಾಕಿ
- ಪುರುಷರ ಹಾಕಿ ಕಂಚಿನ ಪದಕ ಪಂದ್ಯ (ಭಾರತ Vs ಸ್ಪೇನ್): ಸಂಜೆ 5:30ಕ್ಕೆ
ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದಲ್ಲಿ ಭಾರತ ಹಾಕಿ ತಂಡ ಜರ್ಮನಿ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಮಂಗಳವಾರ ಸೋಲನುಭವಿಸಿತ್ತು. ಇದರಿಂದಾಗಿ ಫೈನಲ್ಗೇರಲು ಸಾಧ್ಯವಾಗದ ಕಾರಣ ಚಿನ್ನ ಮತ್ತು ಬೆಳ್ಳಿ ಪದಕಗಳು ಕೈತಪ್ಪಿವೆ. ಇದೀಗ ಕಂಚು ಗೆಲ್ಲುವ ಅವಕಾಶವಿದೆ.
ಜಾವೆಲಿನ್ ಥ್ರೋ
- ಪುರುಷರ ಜಾವೆಲಿನ್ ಥ್ರೋ ಫೈನಲ್ ಪಂದ್ಯ (ನೀರಜ್ ಚೋಪ್ರಾ): ರಾತ್ರಿ 11:55ಕ್ಕೆ
ಪುರುಷರ ಜಾವೆಲಿನ್ ಥ್ರೋ ಗ್ರೂಪ್-ಬಿ ಅರ್ಹತಾ ಸುತ್ತಿನ ಪಂದ್ಯದಲ್ಲಿ ನೀರಜ್ ಚೋಪ್ರಾ 89.34 ಮೀಟರ್ ದೂರ ಭರ್ಜಿ ಎಸೆದು ಫೈನಲ್ಗೆ ಅರ್ಹತೆ ಪಡೆದಿದ್ದು, ಚಿನ್ನದ ನಿರೀಕ್ಷೆ ಮೂಡಿಸಿದ್ದಾರೆ.
ಇದನ್ನೂ ಓದಿ:ಟೇಬಲ್ ಟೆನ್ನಿಸ್: ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡಕ್ಕೆ ಸೋಲು - Olympics Womens Table Tennis