ಹೈದರಾಬಾದ್: ಚಾಂಪಿಯನ್ಸ್ ಟ್ರೋಫಿಗೆ ದಿನಗಣನೆ ಪ್ರಾರಂಭವಾಗಿದ್ದು ಇನ್ನು 22 ದಿನಗಳು ಮಾತ್ರ ಬಾಕಿ ಉಳಿದಿದೆ. ಈಗಿನಿಂದಲೇ ಎಲ್ಲಾ ತಂಡಗಳು ಸಕಲ ಸಿದ್ಧತೆ ನಡೆಸಿವೆ.
ಭಾರತ ಸೇರಿ ಒಟ್ಟು 8 ತಂಡಗಳು ಸರಣಿಯಲ್ಲಿ ಭಾಗಿಯಾಗುತ್ತಿದ್ದು ಫೆ.19 ರಿಂದ ಪಂದ್ಯಾವಳಿ ಪ್ರಾರಂಭವಾಗಲಿದೆ. ಎ ಗುಂಪಿನಲ್ಲಿ ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ಬಾಂಗ್ಲಾದೇಶ ತಂಡಗಳು ಇವೆ. ಬಿ ಗುಂಪಿನಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡಗಳು ಸೇರಿವೆ.
ಏತನ್ಮಧ್ಯೆ, ಚಾಂಪಿಯನ್ಸ್ ಟ್ರೋಫಿಗೂ ಮೊದಲೆ ದಕ್ಷಿಣ ಆಫ್ರಿಕಾ ತಂಡಕ್ಕೆ ದೊಡ್ಡ ಆಘಾತಕ್ಕೊಳಗಾಗಿದೆ. ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ ಗಾಯಕ್ಕೆ ತುತ್ತಾಗಿದ್ದಾರೆ. ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಡರ್ಬನ್ ಸೂಪರ್‌ಜೈಂಟ್ಸ್ ವಿರುದ್ಧದ ಪಂದ್ಯದ ವೇಳೆ ಮಿಲ್ಲರ್ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ. ಪಾರ್ಲ್ ರಾಯಲ್ಸ್ ತಂಡದ ನಾಯಕನಾಗಿರುವ ಮಿಲ್ಲರ್, ಡರ್ಬನ್ ಬ್ಯಾಟ್ಸ್‌ಮನ್ ಮಾರ್ಕಸ್ ಸ್ಟೊಯಿನಿಸ್ ಹೊಡೆತ ಚೆಂಡನ್ನು ಬೌಂಡರಿಗೆ ಹೋಗದಂರೆ ತಡೆಯುವಾಗ ಗಾಯಗೊಂಡಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ವೈದ್ಯಕೀಯ ತಂಡ ಮಿಲ್ಲರ್ಗೆ ಪ್ರಥಮ ಚಿಕಿತ್ಸೆ ನೀಡಿತಾದರೂ ಕೆಲ ಸಮಯದ ಬಳಿಕ ಪಂದ್ಯದ ಅರ್ಧದಲ್ಲೆ ಮಿಲ್ಲರ್ ಮೈದಾನ ತೊರೆದರು. ಚಾಂಪಿಯನ್ಸ್ ಟ್ರೋಫಿಗೂ ಮೊದಲೆ ಮಿಲ್ಲರ್ ಗಾಯಗೊಂಡಿರುವುದು ತಂಡಕ್ಕೆ ಚಿಂತೆಗೀಡುಮಾಡಿದೆ. ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾದ 15 ಸದಸ್ಯರ ತಂಡದಲ್ಲಿ ಮಿಲ್ಲರ್ ಕೂಡ ಸ್ಥಾನ ಪಡೆದಿದ್ದಾರೆ.
ಒಂದು ವೇಳೆ ಗಾಯದ ಪರಿಣಾಮ ತೀವ್ರವಾಗಿ ಮಿಲ್ಲರ್ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದರೆ ಹರಿಣ ಪಡೆಗೆ ದೊಡ್ಡ ಹಿನ್ನಡೆಯಾಗಲಿದೆ. ಕಾರಣ ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದಲ್ಲಿ ಸ್ಟಾರ್ ಬ್ಯಾಟರ್ ಆಗಿದ್ದಾರೆ. ಏಕಾಂಗಿಯಾಗಿ ಪಂದ್ಯಗಳನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ.
ಸದ್ಯ, ವೈದ್ಯಕೀಯ ತಂಡವು ಮಿಲ್ಲರ್ ಗಾಯದ ತೀವ್ರತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ವರದಿ ಯಾಗಿವೆ. ಒಂದು ವೇಳೆ ಗಾಯ ತೀವ್ರವಾಗಿದ್ದರೆ, ಎಸ್ಎ ಟಿ20 ಲೀಗ್ನ ಉಳಿದ ಪಂದ್ಯಗಳಿಂದಲೂ ಹೊರಗುಳಿಯಲಿದ್ದಾರೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಲುಂಗಿ ಎನ್‌ಗಿಡಿ ಕೂಡ ತೊಡೆಸಂದು ಗಾಯದಿಂದ ಬಳಲುತ್ತಿದ್ದಾರೆ.
ಪಾರ್ಲ್ ರಾಯಲ್ಸ್ ತಂಡವನ್ನು ಪ್ರತಿನಿಧಿಸುವ ಎನ್‌ಗಿಡಿ, ಗಾಯಕ್ಕೆ ತುತ್ತಾಗಿ ಕಳೆದ ನಾಲ್ಕು ಪಂದ್ಯಗಳಿಂದ ಹೊರಗುಳಿದಿದ್ದರು. ಕಳೆದ ವರ್ಷ ರಾಷ್ಟ್ರೀಯ ತಂಡದಿಂದ ದೂರವಿದ್ದ ಎನ್‌ಗಿಡಿ ಇತ್ತೀಚೆಗೆ ಕ್ರಿಕೆಟ್ ಮೈದಾನಕ್ಕೆ ಮರಳಿದ್ದರು. ಏತನ್ಮಧ್ಯೆ, ಈ ಸ್ಟಾರ್ ವೇಗದ ಬೌಲರ್ ಮತ್ತೆ ಗಾಯಗೊಂಡಿದ್ದಾರೆ. ಇವರೂ ಕೂಡ ಚಾಂಪಿಯನ್ಸ್ ಟ್ರೋಫಿ ತಂಡದ ಭಾಗವಾಗಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಇನ್ನು 22 ದಿನ ಬಾಕಿ ಇರುವ ಕಾರಣ, ಈ ಇಬ್ಬರೂ ಆಟಗಾರರು ಸಂಪೂರ್ಣ ಫಿಟ್ನೆಸ್ ಸಾಧಿಸುತ್ತಾರೆ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಫೆಬ್ರವರಿ 19 ರಿಂದ ಚಾಂಪಿಯನ್ಸ್ ಟ್ರೋಫಿ ಪ್ರಾರಂಭವಾಗಲಿದೆ. ಫೆಬ್ರವರಿ 21 ರಂದು ಕರಾಚಿಯಲ್ಲಿ ದಕ್ಷಿಣ ಆಫ್ರಿಕಾ ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ.
ಇದನ್ನೂ ಓದಿ: 437 ದಿನಗಳ ಬಳಿಕ ಟೀಂ ಇಂಡಿಯಾಗೆ ಎಂಟ್ರಿಕೊಟ್ಟ ಮಾರಕ ಬೌಲರ್