ಪ್ಯಾರಿಸ್ (ಫ್ರಾನ್ಸ್): ಬುಧವಾರ ರಾತ್ರಿ ನಡೆದ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಭಾರತದ ಸ್ಟಾರ್ ಷಟ್ಲರ್ ಎಚ್.ಎಸ್.ಪ್ರಣಯ್ 16-21, 21-11, 21-12 ಅಂತರದಿಂದ ವಿಯೆಟ್ನಾಂನ್ ಲೆ ಡಕ್ ಫಾಟ್ ವಿರುದ್ಧ ಗೆಲುವು ಸಾಧಿಸಿದರು. ಈ ಗೆಲುವಿನೊಂದಿಗೆ ಪ್ರೀ-ಕ್ವಾರ್ಟರ್ ಫೈನಲ್ಗೂ ಪ್ರವೇಶಿಸಿದರು. ಇದೀಗ ಅವರು 16ನೆ ಸುತ್ತಿನಲ್ಲಿ ಭಾರತದ ಲಕ್ಷ್ಯ ಸೇನ್ ಅವರನ್ನು ಎದುರಿಸಲಿದ್ದಾರೆ, ಈ ಪಂದ್ಯ ಇಂದು ಸಂಜೆ 5:40ಕ್ಕೆ ನಡೆಯಲಿದೆ.
ನಿನ್ನೆ ರಾತ್ರಿ ಲಾ ಚಾಪೆಲ್ಲೆ ಅರೆನಾದಲ್ಲಿ ನಡೆದ ಪಂದ್ಯದಲ್ಲಿ 13ನೇ ಶ್ರೇಯಾಂಕಿತ ಆಟಗಾರ ಪ್ರಣಯ್, 62 ನಿಮಿಷಗಳಲ್ಲಿ ಶ್ರೇಯಾಂಕ ರಹಿತ ವಿಯೆಟ್ನಾಂ ಎದುರಾಳಿಯನ್ನು ಸುಲಭವಾಗಿ ಮಣಿಸಿದರು. ಕಳೆದ ವರ್ಷ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದ 32ರ ಹರೆಯದ ಭಾರತದ ಷಟ್ಲರ್ ಒಲಿಂಪಿಕ್ಸ್ನ ಮೊದಲ ಪಂದ್ಯದಲ್ಲಿ ಅನಿರೀಕ್ಷಿತ ಸೋಲು ಎದುರಿಸಬೇಕಾಯಿತು. ಆದಾಗ್ಯೂ, ಪ್ರಣಯ್ ಬಲವಾದ ಪುನರಾಗಮನ ಮಾಡಿ ಎರಡು ಮತ್ತು ಮೂರನೇ ಪಂದ್ಯಗಳಲ್ಲಿ ಗೆಲುವು ಸಾಧಿಸಿದರು.
ಪ್ರಣಯ್ Vs ಲಕ್ಷ್ಯ ಫೈಟ್:ಮತ್ತೊಂದೆಡೆ ಬುಧವಾರ ನಡೆದ ಪಂದ್ಯದಲ್ಲಿ ಭಾರತದ ಯುವ ಶಟ್ಲರ್ ಲಕ್ಷ್ಯ ಸೇನ್ ಕೂಡ 21-18, 21-12 ಅಂತರದಿಂದ ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ ಅವರನ್ನು ಸೋಲಿಸಿ ಪ್ರೀ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. ಇದೀಗ ಇಂದು ನಡೆಯಲಿರುವ 16ರ ಘಟ್ಟದ ಪಂದ್ಯದಲ್ಲಿ ಭಾರತದ ಈ ಇಬ್ಬರು ಸ್ಟಾರ್ ಷಟ್ಲರ್‌ಗಳು ಮುಖಾಮುಖಿಯಾಗಲಿದ್ದಾರೆ. ಈ ಪಂದ್ಯದಲ್ಲಿ ಯಾರೇ ಸೋತರು ಅವರ ಒಲಿಂಪಿಕ್ ಅಭಿಯಾನ ಕೊನೆಗೊಳ್ಳಲಿದೆ.