ಬೆಳಗಾವಿ: ಸಿಎಂ ಸಿದ್ದರಾಮಯ್ಯ ಹೊಡೆತಕ್ಕೆ ಬಿಜೆಪಿಯವರು ಶೇಕ್ ಆಗುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಕುಗ್ಗಿಸಲು ಕೇಸ್ ಹಾಕುತ್ತಿದ್ದಾರೆ. ಇವೆಲ್ಲ ಕೇಸ್‌ಗೆ ನಾವು ಹೆದರಲ್ಲ. ಕಾಂಗ್ರೆಸ್ ನವರು ಬ್ರಿಟಿಷರನ್ನು ಭಾರತದಿಂದ ಒದ್ದೊಡಿಸಿದವರು, ಬಿಜೆಪಿಯವರು ಯಾವ ಲೆಕ್ಕ ನಮಗೆ ಎಂದು ಸಚಿವ ಶಿವರಾಜ ತಂಗಡಗಿ ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣ ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಡಿ. 10ಕ್ಕೆ ನಿಗದಿಯಾಗಿರುವ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಇದು ರಾಜಕೀಯ ಪ್ರೇರಿತ ಕೇಸ್. ಸಿಎಂ ಸಿದ್ದರಾಮಯ್ಯ ಈ ರಾಜ್ಯಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಅದನ್ನು ಸಹಿಸಿಕೊಳ್ಳಲಾಗದೇ ಪ್ರಕರಣದ ತನಿಖೆ ಸಿಬಿಐಗೆ ವಹಿಸಲು ಪ್ರಯತ್ನಿಸುತ್ತಿದ್ದಾರೆ. ಇಂತಹದ್ದಕ್ಕೆಲ್ಲ ನಾವು ಹೆದರಲ್ಲ. ರಾಜಕೀಯ ಪ್ರೇರಿತ ಕೇಸ್ ಹಾಕಿದ್ದಕ್ಕೆ, ಈಗಾಗಲೇ ಮೂರು ಉಪಚುನಾವಣೆ ಗೆಲ್ಲುವ ಮೂಲಕ ರಾಜಕೀಯವಾಗಿ ಉತ್ತರ ಕೊಟ್ಟಿದ್ದೇವೆ. ಬಿಜೆಪಿ, ಜೆಡಿಎಸ್‌ಗೆ ಜನರು ಯಾರ ಪರ ಇದ್ದಾರೆ ಎಂಬ ಸ್ಪಷ್ಟ ಸಂದೇಶ ರವಾನೆಯಾಗಿದೆ ಎಂದರು.
ಸಿಎಂ ವಿರುದ್ಧ ಕೇಸ್ ಹಾಕಿದ್ದಕ್ಕೆ ಇವರ ವಿರುದ್ಧ ರಾಜ್ಯದ ಜನ ರೊಚ್ಚಿಗೆ ಎದ್ದಿದ್ದಾರೆ ಎಂದು ಸ್ಪಷ್ಟವಾಗಿದೆ. ನಮ್ಮ ಮೇಲೆ ಎಂತಹ ಕೇಸ್ ಹಾಕಿದರೂ ರಾಜಕೀಯವಾಗಿ ಜನ ನಿರ್ಧರಿಸುತ್ತಾರೆ. ಮೈಸೂರು ಭಾಗ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಮೂರು ಭಾಗಗಳಲ್ಲಿ ಗೆದ್ದಿದ್ದೇವೆ. ಜನರೇ ತೀರ್ಪು ಕೊಟ್ಟ ಮೇಲೆ ಇವರ ಪರಿಸ್ಥಿತಿ ಏನಾಗಿದೆ?. ಇನ್ಮೇಲಾದರೂ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ, ಜೆಡಿಎಸ್ ಎಚ್ಚರಿಕೆ ಹೆಜ್ಜೆ ಇಡಲಿ. ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿ ಎಂದು ಹೇಳಿದರು.
ಮೊದಲು ಬಿಜೆಪಿಯವರ ವಿರುದ್ಧ ತನಿಖೆ ಆಗಲಿ: ಬಿಜೆಪಿ ಒಡೆದ ಮನೆಯಾಗಿದೆ, ಮನೆಯೊಂದು ಮೂರು ಬಾಗಿಲಾಗಿದೆ. ಬಸನಗೌಡ ಪಾಟೀಲ ಯತ್ನಾಳ್, ಬಿ.ವೈ.ವಿಜಯೇಂದ್ರ, ಬಸವರಾಜ ಬೊಮ್ಮಾಯಿ ಅವರ ಮೇಲೆ ಇ.ಡಿ. ತನಿಖೆ ಆಗಬೇಕು. ಯತ್ನಾಳ್ ಸ್ಪಷ್ಟವಾಗಿ ಹೇಳಿದ್ದರು. ಸಿಎಂ ಆಗಲು ಬಿಜೆಪಿಯಲ್ಲಿ 2 ಸಾವಿರ ಕೋಟಿ ಕೊಡಬೇಕು ಎಂದಿದ್ದರು. ಹಾಗಾಗಿ, ಬೊಮ್ಮಾಯಿ ಸಿಎಂ ಆಗಲು ಎಷ್ಟು ದುಡ್ಡು ಕೊಟ್ಟಿದ್ದಾರೆ?. ಎಲ್ಲರಿಗಿಂತ ಜ್ಯೂನಿಯರ್ ಆಗಿರುವ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ ಎಂದರೆ ಎಷ್ಟು ದುಡ್ಡು ಕೊಟ್ಟಿದ್ದಾರೆ?. ಬಿಜೆಪಿಯಲ್ಲಿ ಪ್ರತಿಯೊಂದು ಹುದ್ದೆಯೂ ಮಾರಾಟಕ್ಕಿದೆ. ಇದನ್ನ ಕಾಂಗ್ರೆಸ್ ನವರು ಹೇಳಿಲ್ಲ ಬಿಜೆಪಿಯವರೇ ಹೇಳಿದ್ದಾರೆ. ವಿಜಯೇಂದ್ರ ದುಡ್ಡು ಕೊಟ್ಟು ಅಧ್ಯಕ್ಷರಾಗಿದ್ದಾರೆ ಅಂತಾ ಯತ್ನಾಳ್ ಹೇಳಿದ್ದಾರೆ. ಮೊದಲು ಬಿಜೆಪಿಯವರ ವಿರುದ್ಧ ತನಿಖೆ ಆಗಲಿ ಎಂದು ಒತ್ತಾಯಿಸಿದರು.
ವಕ್ಫ್ ಬಗ್ಗೆ ಮಾತನಾಡುವ ಇವರು 2019-20ನೇ ಸಾಲಿನಲ್ಲಿ ಎಷ್ಟು ಜನರಿಗೆ ನೋಟಿಸ್ ನೀಡಿದ್ದಾರೆ ಎಂಬುದಕ್ಕೆ ನನ್ನ ಹತ್ತಿರ ದಾಖಲೆ ಇದೆ. ವಕ್ಫ್ ನೋಟಿಸ್ ಕೊಟ್ಟವರು ಯಾರು?, ರೈತರನ್ನು ಒಕ್ಕಲೆಬ್ಬಿಸಿದ್ಯಾರು?. ಬಿಜೆಪಿಯವರೇ. ಈಗ ರೈತರ ವಿಚಾರದಲ್ಲಿ ಕೇಸರಿ ಟವಲ್ ಹಾಕಿ ಊರೂರು ಅಡ್ಡಾಡಿದರೆ ಜನಕ್ಕೆ ಗೊತ್ತಾಗಲ್ಲವೇ? ಇವರದ್ದು ನಾಟಕ ಕಂಪನಿ ಎಂದು ಟೀಕಿಸಿದರು.
ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ: ಕಲಾವಿದರಿಗೆ ಪ್ರೋತ್ಸಾಹ ಧನ ನೀಡುವಲ್ಲಿ ಹಾಗೂ ಸಾಹಿತಿ, ಕಲಾವಿದರಿಗೆ ಮಾಸಾಶನ ಕೊಡಲು ತಮ್ಮ ಇಲಾಖೆ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪದ ಪ್ರತಿಕ್ರಿಯಿಸಿ, ನನಗೆ ಇಂತಹ ದೂರು ಎರಡು ಕಡೆ ಗಮನಕ್ಕೆ ಬಂದಿದೆ. ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಕೆಲಸ ಮಾಡುತ್ತೇನೆ. ಆ ಅಧಿಕಾರಿಗಳಿಗೆ ಈಗಾಗಲೇ ಎಚ್ಚರಿಕೆ ಕೊಟ್ಟಿದ್ದೇನೆ. ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂತ್ರಿಯಾದ ಬಳಿಕ ಅಂತಹದ್ದಕ್ಕೆಲ್ಲ ಅವಕಾಶ ಕೊಡುತ್ತಿಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಉಪ ಚುನಾವಣೆ ಫಲಿತಾಂಶ ರಾಜ್ಯ ಸರ್ಕಾರಕ್ಕೆ ಜನಾದೇಶವಲ್ಲ: ಬಸವರಾಜ ಬೊಮ್ಮಾಯಿ