ICC Champions Trophy 2025: ಐಸಿಸಿ ಚಾಂಪಿಯನ್ಸ್ ಟ್ರೋಫಿ ನಾಳೆಯಿಂದ ಪ್ರಾರಂಭವಾಗಲಿದೆ. 2017ರ ಬಳಿಕ ಇದೇ ಮೊದಲ ಬಾರಿಗೆ ಈ ಟೂರ್ನಿ ನಡೆಯುತ್ತಿದೆ. ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ನ್ಯೂಜಿಲೆಂಡ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ. ಈಗಾಗಲೇ ಎಲ್ಲ ತಂಡಗಳು ಪಾಕಿಸ್ತಾನಕ್ಕೆ ತಲುಪಿವೆ. ಮತ್ತೊಂದೆಡೆ ಮೂರು ದಿನಕ್ಕೂ ಮುನ್ನವೇ ಭಾರತ ದುಬೈಗೆ ತಲುಪಿದೆ.
ಹೈಬ್ರಿಡ್ ಮಾದರಿ: ಈ ಬಾರಿಯ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿರುವ ಕಾರಣ ಭಾರತ ಅಲ್ಲಿಗೆ ತೆರಳಲು ಹಿಂದೇಟು ಹಾಕಿದ್ದಕ್ಕೆ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ನಡೆಯುತ್ತಿದೆ. ಅಂದರೆ ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಭಾರತ ಫೈನಲ್ ತಲುಪಿದರೆ ಅಂತಿಮ ಪಂದ್ಯವನ್ನೂ ದುಬೈನಲ್ಲೆ ಆಯೋಜಿಸಲಾಗುತ್ತದೆ. ಒಂದು ವೇಳೆ ಫೈನಲ್ ರೇಸ್ನಿಂದ ಹೊರ ಬಿದ್ದರೆ ಪಾಕ್ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಏತನ್ಮಧ್ಯೆ, ಚಾಂಪಿಯನ್ಸ್ ಟ್ರೋಫಿಗಾಗಿ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ವೀಕ್ಷಕ ವಿವರಣೆಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಭಾರತೀಯರು ಸೇರಿ ಒಟ್ಟು 21 ಕಾಮೆಂಟೆಟರ್ಗಳಿದ್ದಾರೆ.
21 ವೀಕ್ಷಕ ವಿವರಣೆಗಾರರು: ಐಸಿಸಿ ಬಿಡುಗಡೆಗೊಳಿಸಿರುವ ಈ ಪಟ್ಟಿಯಲ್ಲಿ ಸುನಿಲ್ ಗವಾಸ್ಕರ್, ರವಿಶಾಸ್ತ್ರಿ, ಡೇಲ್ ಸ್ಟೇನ್, ರಮೀಜ್ ರಾಜಾ, ಆರನ್ ಫಿಂಚ್, ಮ್ಯಾಥ್ಯೂ ಹೇಡನ್, ಇಯಾನ್ ಬಿಷಪ್, ನಾಸರ್ ಹುಸೇನ್, ಇಯಾನ್ ಸ್ಮಿತ್, ಸೈಮನ್ ಡೌಲ್, ದಿನೇಶ್ ಕಾರ್ತಿಕ್, ಮೈಕೆಲ್ ಅಥರ್ಟನ್, ಶಾನ್ ಪೊಲಾಕ್, ಪೊಮ್ಮಿ ಎಂಬಾಂಗ್ವಾ, ಇಯಾನ್ ವಾರ್ಡ್, ವಾಸಿಮ್ ಅಕ್ರಮ್, ಕಾಸ್ ನಾಯ್ಡು, ಅಥರ್ ಅಲಿ ಖಾನ್, ಮೆಲ್ ಜೋನ್ಸ್, ಕೇಟಿ ಮಾರ್ಟಿನ್ ಮತ್ತು ಬಾಜಿದ್ ಖಾನ್ ಇದ್ದಾರೆ.
ಮೂವರು ಭಾರತೀಯರು: ಐಸಿಸಿ ಪ್ರಕಟಿಸಿದ ಇಂಗ್ಲಿಷ್ ವೀಕ್ಷಕ ವಿವರಣೆಗಾರರ ಪಟ್ಟಿಯಲ್ಲಿ ಭಾರತದ ಮಾಜಿ ಕ್ರಿಕೆಟರ್ಗಳಾದ ರವಿ ಶಾಸ್ತ್ರಿ, ಸುನಿಲ್ ಗಾವಸ್ಕರ್, ದಿನೇಶ್ ಕಾರ್ತಿಕ್ ಹೆಸರು ಸೇರಿವೆ. ಅಲ್ಲದೇ ಐಸಿಸಿ ಸೂಚಿಸಿದರೆ ಈ ಮೂವರು ಆಟಗಾರರು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆಯೂ ಇದೆ. ಒಂದು ವೇಳೆ ಸೂಚಿಸದಿದ್ದರೆ, ಭಾರತದ ಪಂದ್ಯಗಳಿಗೆ ವೀಕ್ಷಕ ವಿವರಣೆಗಾರರಾಗಿರಲಿದ್ದಾರೆ.
NZ vs PAK: ನಾಳೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಫೆ.20ಕ್ಕೆ ಭಾರತ ತನ್ನ ಮೊದಲ ಪಂದ್ಯ ಆಡಲಿದೆ. ಇದರಲ್ಲಿ ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ.
ಇದನ್ನೂ ಓದಿ: ನಾಳೆಯಿಂದ ಚಾಂಪಿಯನ್ಸ್ ಟ್ರೋಫಿ ಪ್ರಾರಂಭ: ಪಂದ್ಯಗಳು ಉಚಿತವಾಗಿ ವೀಕ್ಷಿಸಬಹುದೆ?