ಜುಪಾಂಗ್ಬರಿ (ಕಾಮೃಪ್): ಅಸ್ಸಾಂನ ಕಮ್ರೂಪ್ ಜಿಲ್ಲೆಯ ಜುಪಾಂಗ್ಬರಿ ಗ್ರಾಮವು ಹೇರಳವಾಗಿ ಸಿಗುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು, ಬಿದಿರಿನ ಆಭರಣಗಳು ಮತ್ತು ಅಲಂಕಾರಿಕ ವಸ್ತುಗಳನ್ನ ಉತ್ಪಾದಿಸುವ ಕೇಂದ್ರವಾಗಿ ಮಾರ್ಪಟ್ಟಿದೆ.
ಹಳ್ಳಿಯ ಜನರು, ವಿಶೇಷವಾಗಿ ಮಹಿಳೆಯರು, ಸಾಂಪ್ರದಾಯಿಕ ಪ್ಲಾಸ್ಟಿಕ್ ಅಥವಾ ಗಾಜಿನ ಆಭರಣಗಳಿಗಿಂತ ಭಿನ್ನವಾಗಿ ಸುಸ್ಥಿರ ಮತ್ತು ಪರಿಸರ ಸ್ನೇಹಿಯಾಗಿರುವ ಹತ್ತಿರದ ಕಾಡುಗಳ ಬಿದಿರು ಮತ್ತು ಮರಗಳ ಬೀಜಗಳನ್ನು ಬಳಸಿ ಕೃತಕ ಆಭರಣ ಕ್ಷೇತ್ರದಲ್ಲಿ ಆಭರಣ ತಯಾರಿಕೆಯಲ್ಲಿ ತೊಡಗಿದ್ದಾರೆ. ಬಹುತೇಕ ಅಲ್ಪ ಕೃಷಿಕ ಕುಟುಂಬಗಳಿಗೆ ಸೇರಿದ ಈ ಹಳ್ಳಿಯ ಮಹಿಳೆಯರು ಈಗ ತಮಗೊಂದು ಗುರುತನ್ನು ಸೃಷ್ಟಿಸಿಕೊಳ್ಳುವುದರ ಜೊತೆಗೆ ಕುಟುಂಬದ ಆದಾಯ ಗಳಿಸುತ್ತಿದ್ದಾರೆ.
ಜುಪಾಂಗ್ಬರಿ ಗ್ರಾಮದ ಒಟ್ಟು 65 ಕುಟುಂಬಗಳ ಕನಿಷ್ಠ 15 ಮಹಿಳೆಯರು ಈಗ ಈ ಕೃತಕ ಆಭರಣಗಳು ಮತ್ತು ಅಲಂಕಾರಿಕ ವಸ್ತುಗಳನ್ನ ತಯಾರಿಸುವಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರು ತಾವು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಗುವಾಹಟಿ ಮತ್ತು ಇತರ ಸ್ಥಳಗಳಲ್ಲಿ ಮಾರುಕಟ್ಟೆಯನ್ನೂ ಕಂಡುಕೊಂಡಿದ್ದಾರೆ.
ಬಿದಿರು ಆಭರಣಗಳನ್ನು ತಯಾರಿಸುವ ತರಬೇತಿ ಪಡೆದು ಸಣ್ಣ ಉದ್ಯಮ: ಈ ಬಗ್ಗೆ ಗ್ರಾಮದ ಮಹಿಳೆ ಜುನ್ಮೋನಿ ರಾಭಾ ಅವರು ಮಾತನಾಡಿ,"ನಾವು ಮೂಲತಃ ಕೃಷಿಕರು. ನನ್ನ ಪತಿ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಾರೆ. ನಾನು ನನ್ನ ಪತಿಗೆ ಗದ್ದೆಯಲ್ಲಿ ಸಹಾಯ ಮಾಡುತ್ತಿದ್ದೆ. ಎರಡು ವರ್ಷಗಳ ಹಿಂದೆ ನಾನು ಬಿದಿರು ಆಭರಣಗಳನ್ನು ತಯಾರಿಸುವ ತರಬೇತಿ ಪಡೆದೆ. ಅಂದಿನಿಂದ ನಾನು ಮನೆ ಕೆಲಸ ಮತ್ತು ಬಿದಿರಿನ ಆಭರಣಗಳನ್ನು ತಯಾರಿಸುವಲ್ಲಿ ತೊಡಗಿಕೊಂಡಿದ್ದೇನೆ ”ಎಂದು ಹೇಳಿದ್ದಾರೆ.
ಈ ಮಹಿಳೆಯರಲ್ಲಿ ಹೆಚ್ಚಿನವರು ರೈತ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಮತ್ತು ಆಭರಣ ತಯಾರಿಕೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿಕೆಯು ಅವರಿಗೆ ಪರ್ಯಾಯ ಆದಾಯವನ್ನು ಉತ್ಪಾದಿಸುವ ಕಾರ್ಯವಿಧಾನವಾಗಿದೆ. ಇತ್ತೀಚಿನ ದಿನಗಳಲ್ಲಿ ಹಲವಾರು ಕಾರಣಗಳಿಂದಾಗಿ ಕೃಷಿಯು ಹೆಚ್ಚು ಲಾಭದಾಯಕವಾಗಿಲ್ಲದ ಕಾರಣ ಈ ಕುಟುಂಬಗಳು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿವೆ. ಹೀಗಾಗಿ ಆಭರಣ ತಯಾರಿಕೆಯಲ್ಲಿ ತೊಡಗಿದ್ದಾರೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಎಂಟರ್‌ಪ್ರೆನ್ಯೂರ್‌ಶಿಪ್: ಈ ಕುರಿತು ಗ್ರಾಮಸ್ಥರಾದ ಪಲ್ಲವ್ ರಭಾ ಅವರು ಮಾತನಾಡಿ, ''ಕೆಲವು ವರ್ಷಗಳ ಹಿಂದೆ ಗುವಾಹಟಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಎಂಟರ್‌ಪ್ರೆನ್ಯೂರ್‌ಶಿಪ್ (IIE) ನಲ್ಲಿ ಆಭರಣ ತಯಾರಿಕೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿಕೆಯ ತರಬೇತಿಯನ್ನು ಪಡೆದೆ. ಕೆಲವು ತಿಂಗಳುಗಳ ಕಾಲ ಮನೆಯಲ್ಲಿ ಆಭರಣಗಳು ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸಿದೆ. ನಂತರ ಗ್ರಾಮದ ಮಹಿಳೆಯರಿಗೆ ಇದರ ಕುರಿತು ತರಬೇತಿ ನೀಡಲು ಯೋಚಿಸಿದೆ. ಇದು ನನಗೆ ಒಂದು ಗುರುತನ್ನು ನೀಡಿರುವುದಲ್ಲದೇ, ಆರ್ಥಿಕವಾಗಿ ಸ್ವತಂತ್ರರಾಗುವ ಸಾಧನವಾಗಿದೆ'' ಎಂದು ತಿಳಿಸಿದ್ದಾರೆ.
ಅಲಂಕಾರಿಕ ವಸ್ತುಗಳ ತಯಾರಿಕೆಯ ಕೌಶಲ್ಯ ಕಲಿಸಿದ್ದೇನೆ: "ನಾನು ತಯಾರಿಸಿದ ಕೆಲವು ಉತ್ಪನ್ನಗಳನ್ನು ಗ್ರಾಮದ ಮಹಿಳೆಯರಿಗೆ ತೋರಿಸಿದೆ. ನಂತರ ತರಬೇತಿ ನೀಡುವುದಾಗಿ ಅವರಿಗೆ ಮನವರಿಕೆ ಮಾಡಿದೆ. ಆರಂಭದಲ್ಲಿ ಅವರನ್ನು ತರಬೇತಿಗೆ ಕರೆತರುವುದು ಕಷ್ಟಕರವಾಗಿದ್ದರೂ, ಕ್ರಮೇಣ ಪರಿಸ್ಥಿತಿ ಸುಧಾರಿಸಿತು. ಈಗ ನಾನು 15 ಮಹಿಳೆಯರಿಗೆ ತರಬೇತಿ ನೀಡುತ್ತಿದ್ದೇನೆ. ಬಿದಿರು ಮತ್ತು ಮರಗಳ ಇತರ ಬೀಜಗಳು ಮತ್ತು ಅರಣ್ಯ ಉತ್ಪನ್ನಗಳಿಂದ ನಾನು ಅವರಿಗೆ ಅಲಂಕಾರಿಕ ವಸ್ತುಗಳ ತಯಾರಿಕೆಯ ಕೌಶಲ್ಯಗಳನ್ನು ಕಲಿಸಿದ್ದೇನೆ'' ಎಂದು ಹೇಳಿದ್ದಾರೆ.
ಮಕ್ಕಳ ಶಾಲಾ ಶುಲ್ಕ ಪಾವತಿಸಲು ಸಹಾಯವಾಯಿತು: ಈ ಕುರಿತು ಸ್ಥಳೀಯರಾದ ಜುನ್ಮೋನಿ ಅವರು ಮಾತನಾಡಿ, "ಕಳೆದ ಎರಡು ವರ್ಷಗಳಿಂದ ನಾನು ಆಭರಣಗಳನ್ನು ತಯಾರಿಸುತ್ತಿದ್ದೇನೆ. ನಾನು ತಯಾರಿಸಿರುವ ಆಭರಣಗಳಿಗೆ 500 ರಿಂದ 1500 ರೂ ಬೆಲೆ ಇದೆ. ನಾನು ಗ್ರಾಮಕ್ಕೆ ಹತ್ತಿರವಿರುವ ಚಂದುಬಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇವುಗಳನ್ನ ಮಾರಾಟ ಮಾಡಿದ್ದೇನೆ. ಅವರ ಪ್ರತಿಕ್ರಿಯೆ ಉತ್ತಮವಾಗಿದೆ. ನಾನು ಗಳಿಸುವ ಹಣವು ನನ್ನ ಮಕ್ಕಳ ಶಾಲಾ ಶುಲ್ಕವನ್ನು ಭರಿಸಲು ನನಗೆ ಸಹಾಯ ಮಾಡಿತು" ಎಂದು ತಿಳಿಸಿದ್ದಾರೆ.