ದಾವಣಗೆರೆ : ಬಿಜೆಪಿಯಲ್ಲಿ ಒಡಕು ಇರುವುದು ನಿಜ, ಸರಿಪಡಿಸಿ ಮುಂದಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಮಾಡ್ತೇವೆ ಎಂದು ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ದಾವಣಗೆರೆಗೆ ಬರುತ್ತೇನೆ. ಯಾರು ಮಾಜಿ ಶಾಸಕರಿದ್ದೀರಿ, ಅವರೆಲ್ಲ ಗೆದ್ದು ಮುಂದಿನ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರೋಣ ಎಂದು ಹೇಳಿದ್ದೇನೆ. ರಾಜ್ಯದಲ್ಲಿ ವಾತಾವರಣ ಚೆನ್ನಾಗಿದೆ. ರಾಜ್ಯ ಸುತ್ತಿ ಪಕ್ಷವನ್ನು ಬಲಪಡಿಸುವ ಕೆಲಸ ಮಾಡಬೇಕಾಗಿದೆ. ಈ ರಾಜ್ಯದ ಜನ ನಮ್ಮೊಂದಿಗೆ ಗಟ್ಟಿಯಾಗಿ ನಿಂತುಕೊಳ್ಳಬೇಕು. ಈ ಸರ್ಕಾರದ ಪೊಳ್ಳು ಭರವಸೆಗಳನ್ನು ನಂಬದೇ, ಮೋದಿ ಅವರ ಬಿಜೆಪಿ ಪಕ್ಷದೊಂದಿಗೆ ಪ್ರತಿಯೊಬ್ಬರು ಕೈ ಬಲಪಡಿಸಬೇಕಾಗಿದೆ ಎಂದು ಜನರಲ್ಲಿ ಮನವಿ ಮಾಡಿದರು.
ಭಿನ್ನಮತದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲಿ ಒಡಕು ಇರುವುದು ನಿಜ, ಇದು ಕೇಂದ್ರದ ನಾಯಕರ ಗಮನಕ್ಕೂ ಬಂದಿದೆ. ಕೆಲವೇ ದಿನಗಳಲ್ಲಿ ಸರಿ ಹೋಗಲಿದೆ. ಒಟ್ಟಾಗಿ ಪಕ್ಷ ಕಟ್ಟುವ ಕೆಲಸ ಮಾಡ್ತೇವೆ. ಯಾರು ಭಿನ್ನಾಭಿಪ್ರಾಯಗಳನ್ನಿಟ್ಟುಕೊಂಡು ಈ ರೀತಿ ಕೆಲಸಗಳನ್ನು ಮಾಡುತ್ತಿದ್ದಾರೆ, ಅವರಲ್ಲಿ ವಿನಂತಿ ಮಾಡುವೆ. ಬನ್ನಿ ಚರ್ಚೆ ಮಾಡೋಣ. ಎಲ್ಲವನ್ನು ಸರಿಪಡಿಸೋಣ. ಏನಾದರೂ ಕೊರತೆಗಳಿದ್ದರೆ ಅವುಗಳನ್ನು ಸರಿಪಡಿಸಿಕೊಂಡು ಪಕ್ಷವನ್ನು ಬಲಪಡಿಸೋಣ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ : ಬಿಜೆಪಿ - ಜೆಡಿಎಸ್ ಎರಡು ಪಕ್ಷದವರು ಮುಂದಿನ ದಿನಗಳಲ್ಲಿ ಒಂದಾಗಿ ಹೋಗುತ್ತೇವೆ. ಒಟ್ಟಾಗಿ ಬಿಜೆಪಿ - ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡ್ತೇವೆ. ಹೆಚ್. ಡಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಇಬ್ಬರು ಒಗ್ಗಟ್ಟಾಗಿ ಹೋಗುವುದರಿಂದ ಅಧಿಕಾರಕ್ಕೆ ಬರುವುದು ದೊಡ್ಡ ಮಾತಲ್ಲ, ಕಾಂಗ್ರೆಸ್ನವರು ಜೆಡಿಎಸ್ ಶಾಸಕರನ್ನು ಸೆಳೆಯುವ ಪ್ರಯತ್ನ ಫಲ ನೀಡುವುದಿಲ್ಲ, ಕೆಲವರು ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡ್ತಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ : ಮೂರು ಉಪ ಚುನಾವಣೆಗಳಲ್ಲಿ ನಿರೀಕ್ಷೆ ಮೀರಿ ನಮಗೆ ಹಿನ್ನಡೆಯಾಗಿದೆ: ಬಿ ಎಸ್ ಯಡಿಯೂರಪ್ಪ