Hardik Pandya: ಭಾರತ ಮತ್ತು ಇಂಗ್ಲೆಂಡ್ ತಂಡದ ನಡುವಿನ ನಾಲ್ಕನೇ T20 ಪಂದ್ಯವು ಶುಕ್ರವಾರ (ನಾಳೆ) ನಡೆಯಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಸಂಜೆ 7 ಗಂಟೆಗೆ ನಡೆಯಲಿದೆ. ಐದು ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಸದ್ಯ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.
ಮೊದಲೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಭಾರತ ಮೂರನೇ ಪಂದ್ಯದಲ್ಲಿ 26 ರನ್ಗಳಿಂದ ಆಂಗ್ಲರ ವಿರುದ್ಧ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಪಡೆ ಸಂಪೂರ್ಣ ವಿಫಲವಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಂಗ್ಲರು 172 ರನ್‌ಗಳ ಗುರಿಯನ್ನು ನೀಡಿದ್ದರು.
ಇದಕ್ಕುತ್ತರವಾಗಿ ಟೀಂ ಇಂಡಿಯಾ 9 ವಿಕೆಟ್ ಕಳೆದುಕೊಂಡು 145 ರನ್ ಗಳಿಸಲಷ್ಟೇ ಶಕ್ತವಾಯಿತು. ಹಾರ್ದಿಕ್ ಪಾಂಡ್ಯ ಬಿಟ್ಟರೆ ಭಾರತದ ಯಾರೊಬ್ಬರೂ 30 ರನ್ ಗಡಿ ಮುಟ್ಟಲು ಸಾಧ್ಯವಾಗಲಿಲ್ಲ. ರಾಜ್‌ಕೋಟ್‌ನಲ್ಲಿ ಟೀಂ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ 35 ಎಸೆತಗಳಲ್ಲಿ 40 ರನ್ ಗಳಿಸಿ ತಂಡದ ಪರ ಹೈಸ್ಕೋರರ್ ಎನಿಸಿಕೊಂಡರು. ಆದರೆ, ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.
ಕೊಹ್ಲಿ ದಾಖಲೆ ಮುರಿಯಲು ಪಾಂಡ್ಯ ಸಜ್ಜು:ಏತನ್ಮಧ್ಯೆ, ನಾಲ್ಕನೇ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ದೊಡ್ಡ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಮೂರನೇ ಪಂದ್ಯದಲ್ಲಿ 40 ರನ್‌ಗಳ ಇನ್ನಿಂಗ್ಸ್‌ನೊಂದಿಗೆ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರ ದಾಖಲೆ ಮುರಿದಿದ್ದ ಹಾರ್ದಿಕ್ ಇದೀಗ ಕೊಹ್ಲಿ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.
ವಾಸ್ತವವಾಗಿ, ಹಾರ್ದಿಕ್ ಪಾಂಡ್ಯ 16 ರಿಂದ 20ನೇ ಓವರ್ ಅಂದರೆ ಡೆತ್ ಓವರ್‌ನಲ್ಲಿ 171.50 ಸ್ಟ್ರೈಕ್ ರೇಟ್‌ನಲ್ಲಿ T20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1029 ರನ್ ಗಳಿಸಿದ್ದಾರೆ. ಈ ಹಿಂದೆ ಎಂಎಸ್ ಧೋನಿ 16 ರಿಂದ 20ನೇ ಓವರ್‌ನಲ್ಲಿ 1014 ರನ್ ಗಳಿಸಿದ್ದರು. ಇದೀಗ ಧೋನಿ ದಾಖಲೆ ಮುರಿದು ಎರಡನೇ ಸ್ಥಾನಕ್ಕೆ ತಲುಪಿರುವ ಪಾಂಡ್ಯ ಕೊಹ್ಲಿಯನ್ನು ಹಿಂದಿಕ್ಕಲು ಸಿದ್ಧತೆ ನಡೆಸಿದ್ದಾರೆ.
ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ 16 ರಿಂದ 20ನೇ ಓವರ್‌ನಲ್ಲಿ 1032 ರನ್ ಗಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾಲ್ಕನೇ ಟಿ-20ಯಲ್ಲಿ ಹಾರ್ದಿಕ್ ಪಾಂಡ್ಯ ಇನ್ನು 4 ರನ್ ಗಳಿಸಿದರೆ ಭಾರತದ ಪರ ಡೆತ್ ಓವರ್‌ನಲ್ಲಿ ಹೆಚ್ಚು ರನ್ ಗಳಿಸಿದ ಭಾರತ ಮೊದಲ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
ಸಂಭಾವ್ಯ ತಂಡಗಳು-ಭಾರತ:ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೇಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಅಕ್ಷರ್ ಪಟೇಲ್, ಧ್ರುವ್ ಜುರೆಲ್, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ.
ಇಂಗ್ಲೆಂಡ್:ಜೋಸ್ ಬಟ್ಲರ್ (ನಾಯಕ), ಫಿಲಿಪ್ ಸಾಲ್ಟ್, ಬೆನ್ ಡಕೆಟ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸ್, ಜೇಮೀ ಸ್ಮಿತ್, ಜಾಕೋಬ್ ಬೆಥೆಲ್, ಆದಿಲ್ ರಶೀದ್, ಜೇಮೀ ಓವರ್ಟನ್, ಸಾಕಿಬ್ ಮಹಮೂದ್, ಲಿಯಾಮ್ ಲಿವಿಂಗ್‌ಸ್ಟೋನ್, ಮಾರ್ಕ್ ವುಡ್, ರೆಹಾನ್ ಅಹ್ಮದ್, ಗಸ್ ಅಟ್ಕಿನ್ಸನ್, ಜೋಫ್ರಾ ಆರ್ಚರ್.
ಇದನ್ನೂ ಓದಿ:ನಾಲ್ಕನೇ T20ಗೂ ಮೊದಲೇ ಭಾರತಕ್ಕೆ ಶುರುವಾಯ್ತು ಆತಂಕ: ಕಾರಣ ಏನು?