ವಿಶಾಖಪಟ್ಟಣ: ಇಲ್ಲಿನ ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಹಂತಿಮ ಘಟ್ಟಕ್ಕೆ ಬಂದು ತಲುಪಿದೆ. 4ನೇ ದಿನ ಇನ್ನಿಂಗ್ಸ್ ಆರಂಭಿಸಿದ ಪ್ರವಾಸಿ ಇಂಗ್ಲೆಂಡ್ ತಂಡ, ಬಲಿಷ್ಠ ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿದೆ.
ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ ತಂಡ 42.4 ಓವರ್ಗೆ 6 ವಿಕೆಟ್ ಕಳೆದುಕೊಂಡು 194 ರನ್ ಗಳಿಸಿದೆ. ಗೆಲುವಿಗೆ ಇನ್ನೂ 205 ರನ್ ಬಾಕಿ ಉಳಿದಿದೆ. ಆದರೆ, ಭಾರತ ಗೆಲ್ಲಲು 4 ವಿಕೆಟ್ ಅವಶ್ಯಕತೆ ಇದೆ. ಭಾರತ 2ನೇ ಇನ್ನಿಂಗ್ಸ್ ಅಂತ್ಯದ ವೇಳೆಗೆ 255 ರನ್ ಗಳಿಸುವ ಮೂಲಕ ಇಂಗ್ಲೆಂಡ್ ತಂಡಕ್ಕೆ 399 ರನ್ ಗಳ ಬೃಹತ್ ಮೊತ್ತದ ಗೆಲುವಿನ ಗುರಿ ನೀಡಿತ್ತು. ಈ ಬೃಹತ್ ಮೊತ್ತ ಬೆನ್ನತ್ತಿರುವ ಆಂಗ್ಲರು, 3ನೇ ದಿನದಾಟದ ಅಂತ್ಯಕ್ಕೆ 14 ಓವರ್ಗೆ 1 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿತ್ತು. ನಾಲ್ಕನೇ ದಿನದಾಟ ನಡೆಯುತ್ತಿದ್ದು, ರೋಚಕಘಟ್ಟ ತಲುಪಿದೆ.
ಇದಕ್ಕೂ ಮುನ್ನ ಶನಿವಾರದ ದಿನದ ಅಂತ್ಯಕ್ಕೆ ಭಾರತವು ಎರಡನೇ ಇನ್ನಿಂಗ್ಸ್ನಲ್ಲಿ ವಿಕೆಟ್ ನಷ್ಟವಿಲ್ಲದೇ 28 ರನ್ ಗಳಿಸಿತ್ತು. ಬ್ಯಾಟಿಂಗ್ ಕಾಯ್ದುಕೊಂಡಿದ್ದ ಆರಂಭಿಕ ಆಟಗಾರರಾದ ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಭಾನುವಾರ ಮತ್ತೆ ತಮ್ಮ ಆಟವನ್ನು ಮುಂದುವರೆಸಿದ್ದರು. ಆದರೆ, ಆಂಗ್ಲ ವೇಗಿ ಜೇಮ್ಸ್ ಆ್ಯಂಡರ್ಸನ್ ಅವರ ಬೌಲಿಂಗ್ ದಾಳಿಯಿಂದ ಆಘಾತ ಎದುರಿಸಿದ ಭಾರತಕ್ಕೆ ಶುಭಮನ್ ಗಿಲ್ ಆಸರೆಯಾದರು. ಅವರ ಆಕರ್ಷಕ ಶತಕದ (104 ರನ್, 147 ಎಸೆತ) ಸಹಾಯದಿಂದ ಭಾರತ ತಂಡ ಇಂಗ್ಲೆಂಡ್ ತಂಡಕ್ಕೆ 399 ರನ್ಗಳ ಗೆಲುವಿನ ಕಠಿಣ ಸವಾಲು ಒಡ್ಡಿತು. ಈ ದೊಡ್ಡ ಮೊತ್ತ ಕಟ್ಟುವಲ್ಲಿ ಶ್ರೇಯಸ್ ಅಯ್ಯರ್ (29), ಅಕ್ಸರ್ ಪಟೇಲ್ (45) ಮತ್ತು ಆರ್ ಅಶ್ವಿನ್ (29) ಕೂಡ ತಮ್ಮ ಅಲ್ಪ ಕಾಣಿಕೆ ನೀಡಿದರು. ಎರಡನೇ ಇನ್ನಿಂಗ್ಸ್ ದಿನದ ಆಟಕ್ಕೆ 255ಕ್ಕೆ ಭಾರತ ತನ್ನ ಎಲ್ಲ ವಿಕೆಟ್ ಕಳೆದುಕೊಂಡಿತು.