ರಾಂಚಿ(ಜಾರ್ಖಂಡ್):ಅಂದುಕೊಂಡಂತೆ ರಾಂಚಿ ಪಿಚ್ ಸ್ಪಿನ್ನರ್ಗಳಿಗೆ ಸಂಪೂರ್ಣ ನೆರವು ನೀಡುತ್ತಿದ್ದು, ಮೂರನೇ ದಿನದಾಟದ ಕೊನೆಯಲ್ಲಿ ಇಂಗ್ಲೆಂಡ್ ತನ್ನ 2ನೇ ಇನಿಂಗ್ಸ್ ಅನ್ನು 145 ರನ್‌ಗಳ ಅತ್ಯಲ್ಪ ಮೊತ್ತಕ್ಕೆ ಮುಗಿಸಿತು. ಅಶ್ವಿನ್, ಕುಲದೀಪ್, ಜಡೇಜಾ ಎಲ್ಲ 10 ವಿಕೆಟ್ಗಳನ್ನು ಪಡೆದರು. ಇದರಿಂದ ಭಾರತಕ್ಕೆ ಗೆಲ್ಲಲು 192 ರನ್ ಗುರಿ ನೀಡಲಾಗಿದೆ.
ಇಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನ ಮೂರನೇ ದಿನದ ಎರಡನೇ ಅವಧಿಯಲ್ಲಿ ಭಾರತವನ್ನು 307 ರನ್ಗೆ ಕಟ್ಟಿಹಾಕಿದ್ದ ಇಂಗ್ಲೆಂಡ್, 46 ರನ್‌ಗಳ ಇನಿಂಗ್ಸ್ ಮುನ್ನಡೆಯೊಂದಿಗೆ ಬೃಹತ್ ಮೊತ್ತದ ಗುರಿ ನೀಡುವ ನಿರೀಕ್ಷೆ ಹೊಂದಿತ್ತು. ಆದರೆ, ಅಶ್ವಿನ್ ಮತ್ತು ಕುಲದೀಪ್ ಯಾದವ್ ಸ್ಪಿನ್ ಅಸ್ತ್ರ ಇದಕ್ಕೆ ತಣ್ಣೀರೆರಚಿತು.
ಸ್ಪಿನ್ ದಾಳಿಯನ್ನು ಎದುರಿಸಲಾಗದೆ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಇಂಗ್ಲೆಂಡ್ 5 ವಿಕೆಟ್‌ಗೆ 120 ರನ್ ಗಳಿಸಿತ್ತು. ಇದಾದ ಬಳಿಕ ಮತ್ತಷ್ಟು ಪ್ರಭಾವಿಯಾದ ಅಶ್ವಿನ್ ಕುಲದೀಪ್ ಉಳಿದ 5 ವಿಕೆಟ್ಗಳನ್ನು 25 ರನ್‌ಗಳ ಅಂತರದಲ್ಲಿ ಕಿತ್ತು ಆಂಗ್ಲರ ಇನಿಂಗ್ಸ್ಗೆ ತೆರೆ ಎಳೆದರು.
ಮೊದಲ ಇನಿಂಗ್ಸ್‌ನಲ್ಲಿ ಕಾಡಿದ್ದ ಆರಂಭಿಕ ಆಟಗಾರ ಜಾಕ್ ಕ್ರಾಲಿ ಬಿರುಸಿನ ಬ್ಯಾಟ್ ಮಾಡಿ 60 ರನ್ ಗಳಿಸಿದರು. ಹಿರಿಯ ಬ್ಯಾಟರ್ ಜಾನಿ ಬೈರ್ಸ್ಟೋವ್ 30, ಬೆನ್ ಫೋಕ್ಸ್ 17, ಬೆನ್ ಡಕೆಟ್ 15 ರನ್ ಗಳಿಸಿದರು.
ಕುಂಬ್ಳೆ ದಾಖಲೆ ಸರಿಗಟ್ಟಿದ ಅಶ್ವಿನ್:ಮೊದಲ ಇನಿಂಗ್ಸ್‌ನಲ್ಲಿ ವಿಕೆಟ್ ಪಡೆಯಲು ಪರದಾಡಿದ್ದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 2ನೇ ಇನಿಂಗ್ಸ್‌ನಲ್ಲಿ ಅಕ್ಷರಶಃ ಮಾರಕವಾದರು. 15.5 ಓವರ್ ಎಸೆದ ಅಶ್ವಿನ್ 5 ವಿಕೆಟ್ ಪಡೆದರು. ಇದು ಟೆಸ್ಟ್ನಲ್ಲಿ 35 ಬಾರಿ 5 ವಿಕೆಟ್ ಗೊಂಚಲು ಪಡೆದರು. ಇದರೊಂದಿಗೆ ಭಾರತದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಸರಿಗಟ್ಟಿದರು. ಕುಂಬ್ಳೆ 132 ಟೆಸ್ಟ್ಗಳಲ್ಲಿ ಈ ಸಾಧನೆ ಮಾಡಿದರೆ, ಅಶ್ವಿನ್ 99 ಪಂದ್ಯಗಳಲ್ಲಿ ಇದನ್ನು ಸಾಧಿಸಿದರು.
ಭರ್ಜರಿ ಓಪನಿಂಗ್:ಇನ್ನು ಗೆಲುವಿಗೆ 192 ರನ್ ಸಾಧಾರಣ ಗುರಿ ಪಡೆದ ಭಾರತ ಭರ್ಜರಿಯಾಗಿ ಇನಿಂಗ್ಸ್ ಆರಂಭಿಸಿತು. ಮೂರನೇ ದಿನದಾಂತ್ಯಕ್ಕೆ 8 ಓವರ್ಗಳಲ್ಲಿ 40 ರನ್ ಗಳಿಸಿದ್ದು, ಇನ್ನೂ 152 ರನ್ ಗಳಿಸಬೇಕಿದೆ. ಆರಂಭಿಕರಾದ ನಾಯಕ ರೋಹಿತ್ ಶರ್ಮಾ 24, ಯಶಸ್ವಿ ಜೈಸ್ವಾಲ್ 16 ರನ್ ಗಳಿಸಿ ನಾಳೆಗೆ ವಿಕೆಟ್ ಕಾಯ್ದುಕೊಂಡಿದ್ದಾರೆ.
ಭಾರತ ಮೊದಲ ಇನಿಂಗ್ಸ್:ಭೋಜನ ವಿರಾಮದ ವೇಳೆಗೆ ಭಾರತ 307 ರನ್‌ಗಳಿಗೆ ಆಲೌಟ್ ಆಗುವ ಮೂಲಕ 46 ರನ್ ಹಿನ್ನಡೆ ಅನುಭವಿಸಿತು. ವಿಕೆಟ್ ಕೀಪರ್ ಧ್ರುವ್ ಜುರೆಲ್ (90) ತಮ್ಮ ಚೊಚ್ಚಲ ಟೆಸ್ಟ್ ಶತಕದಿಂದ 10 ರನ್‌ಗಳ ಅಂತರದಲ್ಲಿ ಮುಗ್ಗರಿಸಿದರು.