Rohit Shrama: ಬಾರ್ಡರ್ ಗವಾಸ್ಕರ್ ಟ್ರೋಫಿ ಭಾಗವಾಗಿ ನಾಳೆ ಸಿಡ್ನಿಯಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಿಂದ ಹೊರಗುಳಿಯಲು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಈ ಸರಣಿಯಲ್ಲಿ ಸತತ ಕಳಪೆ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಹೊರೆಯಾಗಿ ಪರಿಣಮಿಸಿರುವ ರೋಹಿತ್ ಶರ್ಮಾ ಅಂತಿಮ ಟೆಸ್ಟ್ನಿಂದ ಹೊರಗುಳಿಯಲು ನಿರ್ಧರಿಸಿರುವುದಾಗಿ ತಂಡದ ಮ್ಯಾನೇಜ್‌ಮೆಂಟ್‌ಗೆ ತಿಳಿಸಿದ್ದಾರೆ. ಇದಕ್ಕೆ ಆಡಳಿತ ಮಂಡಳಿಯೂ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ.
ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಹಿಟ್ಮ್ಯಾನ್, ಎರಡನೇ ಟೆಸ್ಟ್‌ಗಾಗಿ ತಂಡ ಸೇರಿಕೊಂಡಿದ್ದರು. ರೋಹಿತ್ ತಂಡ ಕೂಡಿಕೊಳ್ಳುತ್ತಿದ್ದಂತೆ ಭಾರತದ ಬ್ಯಾಟಿಂಗ್ ವಿಭಾಗವು ಬಲಿಷ್ಠವಾಗುತ್ತದೆ ಮತ್ತು ಅವರ ನಾಯಕತ್ವವು ತಂಡಕ್ಕೆ ಪ್ರಯೋಜನವಾಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ರೋಹಿತ್ ಆಗಮನದ ನಂತರ ಆಡಿದ ಮೂರು ಟೆಸ್ಟ್‌ಗಳಲ್ಲಿ ಭಾರತ ಎರಡರಲ್ಲಿ ಸೋಲನುಭವಿಸಿ ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.
ರೋಹಿತ್ ನಾಯಕತ್ವದಲ್ಲಿ ಮಾತ್ರವಲ್ಲದೇ ಬ್ಯಾಟಿಂಗ್ನಲ್ಲೂ ವಿಫಲರಾಗಿದ್ದಾರೆ. ಐದು ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿದ ಅವರು ಗಳಿಸಿದ್ದು ಕೇವಲ 31 ರನ್ ಮಾತ್ರ. ರೋಹಿತ್ ಬ್ಯಾಟಿಂಗ್ಗೆ ಬಂದ ಪ್ರತಿ ಕ್ಷಣವೂ ಕ್ರೀಸ್‌ನಲ್ಲಿ ಉಳಿಯಲು ಹರಸಾಹಸ ಪಡುತ್ತಿದ್ದರು. ಅಲ್ಲದೇ ಅವರಲ್ಲಿ ಆತ್ಮವಿಶ್ವಾಸದ ಕೊರತೆ ಕಾಣತೊಡಗಿತ್ತು. ಮೇಲಾಗಿ ನಾಯಕನಾಗಿಯೂ ತಂಡದ ಗೆಲುವಿಗಾಗಿ ಬೇಕಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬ ಟೀಕೆಗಳೂ ಕೇಳಿ ಬಂದಿದ್ದವು. ಇಂತಹ ಪರಿಸ್ಥಿತಿಯಲ್ಲಿ ತಂಡವನ್ನು ತೊರೆಯುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿರುವಂತೆ ಕಾಣಿಸುತ್ತಿದೆ.
ಬುಮ್ರಾ ಅಥವಾ ಕೊಹ್ಲಿಗೆ ನಾಯಕ ಪಟ್ಟ: 5ನೇ ಮತ್ತು ಅಂತಿಮ ಟೆಸ್ಟ್ನಿಂದ ರೋಹಿತ್ ಶರ್ಮಾ ಹೊರಗುಳಿದರೆ, ಅವರ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವದ ಜವಾಬ್ದಾರಿಯನ್ನು ತಂಡದ ಉಪ ನಾಯಕನಾಗಿರುವ ಜಸ್ಪ್ರೀತ್ ಬುಮ್ರಾ ಅವರಿಗೆ ನೀಡಲಾಗುತ್ತದೆ ಅಥವಾ ಹಿರಿಯ ಮತ್ತು ಅನುಭವಿ ಆಟಗಾರ ವಿರಾಟ್ ಕೊಹ್ಲಿಗೆ ನಾಯಕತ್ವದ ಜವಾಬ್ದಾರಿ ವಹಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಪಂದ್ಯದಲ್ಲಿ ಬುಮ್ರಾ ಅವರ ನಾಯಕತ್ವದಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿತ್ತು. ಈ ಹಿನ್ನೆಲೆ ಮತ್ತೊಮ್ಮೆ ಅವರಿಗೆ ನೀಡುವ ಸಾಧ್ಯತೆ ಇದೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ಹೆಸರು ಮುಂಚೂಣಿಯಲ್ಲಿದೆ. ಕಾರಣ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಅತೀ ಹೆಚ್ಚು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ ಹೀಗಾಗಿ ಇವರು ಕೂಡು ನಾಯಕತ್ವದ ರೇಸ್ನಲ್ಲಿದ್ದಾರೆ.
ಕನ್ನಡಿಗ ರಾಹುಲ್ಗೆ ತಂಡದಲ್ಲಿ ಮಹತ್ವದ ಜವಾಬ್ದಾರಿ: ಸದ್ಯ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ಸರಣಿಯಲ್ಲಿ ಹೆಚ್ಚು ರನ್ ಗಳಿಸಿದ ಮೂರನೇ ಭಾರತೀಯ ಬ್ಯಾಟರ್ ಆಗಿದ್ದಾರೆ. ಈವರೆಗೂ 4 ಪಂದ್ಯಗಳನ್ನು ಆಡಿರುವ ರಾಹುಲ್ 8 ಇನ್ನಿಂಗ್ಸ್‌ಗಳಲ್ಲಿ 37ರ ಸರಾಸರಿಯಲ್ಲಿ 259 ರನ್ ಕಲೆಹಾಕಿದ್ದಾರೆ. ಇದರಲ್ಲಿ 84 ಅವರ ಹೈಸ್ಕೋರ್ ಆಗಿದೆ. ಇದೀಗ ರೋಹಿತ್ ಶರ್ಮಾ ಅಂತಿಮ ಪಂದ್ಯದಿಂದ ಹೊರಗುಳಿದರೇ, ರಾಹುಲ್ ಆರಂಭಿಕ ಬ್ಯಾಟರ್ ಆಗಿ ಜೈಸ್ವಾಲ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಇದನ್ನೂ ಓದಿ: ಸಿಕ್ಸರ್ ಸಿಡಿಸಿ ಸಂಭ್ರಮಿಸುತ್ತಿರುವಾಗಲೇ ಹೃದಯಾಘಾತದಿಂದ ಕ್ರಿಕೆಟರ್ ಸಾವು: ಭಯಾನಕ ವಿಡಿಯೋ ವೈರಲ್