ನವದೆಹಲಿ:ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ನ ಪಂದ್ಯದಲ್ಲಿ ಗೆಲುವಿನ ಹೊಸ್ತಿಲಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮಹಿಳಾ ತಂಡ ಕೊನೆಯಲ್ಲಿ ಮಾಡಿಕೊಂಡ ಎಡವಟ್ಟಿನಿಂದ ಡೆಲ್ಲಿ ಕ್ಯಾಪಿಟಲ್ಸ್ ವನಿತೆಯರ ವಿರುದ್ಧ 1 ರನ್ನಿಂದ ವೀರೋಚಿತ ಸೋಲು ಅನುಭವಿಸಿತು. ಗೆದ್ದ ಡೆಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಮುಂಬೈ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿತು.
ಕೊನೆಯ ಓವರ್ನಲ್ಲಿ ಗೆಲ್ಲಲು 17 ರನ್ ಅಗತ್ಯವಿದ್ದಾಗ ರಿಚಾ ಘೋಷ್ ಆಕರ್ಷಕ ಬ್ಯಾಟ್ ಮಾಡಿದರೂ, ಕೊನೆಯಲ್ಲಿ 2 ರನ್ ಇದ್ದಾಗ ಔಟಾದದ್ದು ತಂಡವನ್ನು ಸೋಲಿನಲ್ಲಿ ಮುಳುಗಿಸಿತು. ಮಹತ್ವದ ಪಂದ್ಯವನ್ನು ಕೈಚೆಲ್ಲಿದ್ದರಿಂದ ಪ್ಲೇಆಫ್ ಹಾದಿ ಮತ್ತಷ್ಟು ಕಠಿಣವಾಯಿತು.
ರೋಚಕ ಫೈನಲ್ ಓವರ್:ಡೆಲ್ಲಿ ಕ್ಯಾಪಿಟಲ್ಸ್ ವನಿತೆಯರು ನೀಡಿದ್ದ 181 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ ಮಹಿಳೆಯರು ಗೆಲುವಿನ ದಡಕ್ಕೆ ಬಂದಿದ್ದರು. ಆದರೆ, ಅದೃಷ್ಟ ಕೈಕೊಟ್ಟಿತು. ಕೊನೆಯ ಓವರ್ನಲ್ಲಿ 17 ರನ್ ಬೇಕಿತ್ತು. ಜೆಸ್ ಜೆನಾಸನ್ ಬೌಲಿಂಗ್ನ ಮೊದಲ ಎಸೆತವನ್ನು ರಿಚಾ ಘೋಷ್ ಸಿಕ್ಸರ್ ಬಾರಿಸಿದರು. ಎರಡನೇ ಎಸೆತದಲ್ಲಿ ರನ್ ಬರಲಿಲ್ಲ. ಮೂರನೇ ಎಸೆತದಲ್ಲಿ ರನ್ಗಾಗಿ ಓಡಿದ ದಿಶಾ ಕಸತ್ ರನೌಟ್ ಆದರು.
ಮುಂದಿನ ಎಸೆತದಲ್ಲಿ 2 ರನ್ ಬಂತು. ಐದನೇ ಎಸೆತವನ್ನು ರಿಚಾ ಸಿಕ್ಸರ್ಗೆ ಅಟ್ಟಿದರು. ಇದರಿಂದ ಆರ್ಸಿಬಿ ಪಾಳಯದಲ್ಲಿ ಗೆಲುವಿನ ನಗೆ ಮೂಡಿತು. ಕೊನೆಯ ಎಸೆತದಲ್ಲಿ 2 ರನ್ ಬೇಕಿದ್ದಾಗ ರಿಚಾ ಓಡಿದರೂ, ಜೆನಾಸನ್ ಶೆಫಾಲಿ ಅವರ ಮಿಂಚಿನ ಫೀಲ್ಡಿಂಗ್ನಿಂದಾಗಿ ರನೌಟ್ ಆದರು. ಇದು ಆರ್ಸಿಬಿಯ ಅಭಿಮಾನಿಗಳ ಎದೆ ಧಸಕ್ ಎನ್ನುವಂತೆ ಮಾಡಿತು. ರಿಚಾ ಮೈದಾನದಲ್ಲೇ ಕಣ್ಣೀರು ಹಾಕಿದರೆ, ಡಗೌಟ್ನಲ್ಲಿ ಆಟಗಾರರು ತಲೆ ಮೇಲೆ ಕೈಹೊತ್ತು ಕೂತಿದ್ದರು.