ಲಖನೌ (ಉತ್ತರ ಪ್ರದೇಶ) : ಪಾಲಿಟೆಕ್ನಿಕ್ ಕಾಲೇಜುಗಳ ಮುಖ್ಯಸ್ಥರ ಬಡ್ತಿಯಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಬಿಜೆಪಿ ಮಿತ್ರಪಕ್ಷ ಅಪ್ನಾದಳದ ಹಂಗಾಮಿ ಅಧ್ಯಕ್ಷ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಸಂಪುಟದ ಸಚಿವ ಆಶಿಶ್ ಪಟೇಲ್ ಸರ್ಕಾರದ ವಿರುದ್ಧವೇ ಗುಡುಗಿದ್ದಾರೆ.
ತಾಂತ್ರಿಕ ಶಿಕ್ಷಣ ಇಲಾಖೆಯ ಹಗರಣದಲ್ಲಿ ತಮ್ಮ ಪಾತ್ರವನ್ನು ನಿರಾಕರಿಸಿದ ಸಚಿವರು, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ಕಾರ್ಯಪಡೆ (ಎಸ್ಟಿಎಫ್) ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿದೆ. ನಿಮಗೆ ತಾಕತ್ತಿದ್ದರೆ, ನನ್ನ ಎದೆಗೆ ಗುಂಡು ಹಾರಿಸಿ ಎಂದು ಸವಾಲು ಹಾಕಿದ್ದಾರೆ.
ಸೋನೇವಾಲ್ನಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅಪ್ನಾದಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ನನ್ನನ್ನು ಹಗರಣದಲ್ಲಿ ಸಿಲುಕಿಸುವ ಯತ್ನಗಳು ಮಾಡುತ್ತಿದ್ದಾರೆ. ನನ್ನ ವಿರುದ್ಧ ಪತ್ರಿಕೆಗಳು ಮತ್ತು ವಾಹಿನಿಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದೆ. ಇದೆಲ್ಲಕ್ಕೂ ನಾನು ಹೆದರುವುದಿಲ್ಲ ಎಂದು ಗುಡುಗಿದರು.
ಸಿಬಿಐ ತನಿಖೆಗೆ ನೀಡಿ: ಇಲಾಖೆಯಲ್ಲಿ ಹಗರಣ ನಡೆದಿದ್ದರೆ, ಸಿಬಿಐಗೆ ನೀಡಿ ತನಿಖೆ ನಡೆಸಿ ಎಂದು ಸಿಎಂ ಯೋಗಿ ಸರ್ಕಾರಕ್ಕೆ ಸಚಿವ ಆಶಿಶ್ ಸವಾಲು ಹಾಕಿದರು. ಸಾರ್ವಜನಿಕವಾಗಿ ನನ್ನ ಮೇಲೆ ಆಪಾದನೆಗಳು ಕೇಳಿಬರುತ್ತಿವೆ. ನಿಮ್ಮಲ್ಲಿ ಅಧಿಕಾರವಿದ್ದರೆ, ನನ್ನ ಬಳಿ ಪ್ರಜಾಪ್ರಭುತ್ವವಿದೆ. ನಿಮಗೆ ಧೈರ್ಯವಿದ್ದರೆ ಸಿಬಿಐ ತನಿಖೆ ಮಾಡಿಸಿ, ತನಿಖೆಗೆ ಹೆದರುವುದೇಕೆ? ಎಂದಿದ್ದಾರೆ.
ವಿಶೇಷ ಕಾರ್ಯಪಡೆಯ ನೇತೃತ್ವ ವಹಿಸಿರುವ ಅಧಿಕಾರಿ, ನನಗೆ ಪ್ರಾಣ ಬೆದರಿಕೆ ಹಾಕಿದ್ದಾರೆ. ಪ್ರತಿಭಟನೆಯಲ್ಲಿ ಕಾಲಿಗೆ ಗುಂಡಿಕ್ಕಿದ್ದಾರೆ. ಎಸ್ಟಿಎಫ್ಗೆ ನಿಜವಾಗಿಯೂ ಧೈರ್ಯವಿದ್ದರೆ, ನನ್ನ ಎದೆಗೆ ಗುಂಡು ಹಾರಿಸಲಿ. ರಾಜ್ಯದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.
ಆರೋಪವೇನು?: ತಾಂತ್ರಿಕ ಶಿಕ್ಷಣ ಇಲಾಖೆಯ ಅಡಿಗೆ ಬರುವ ಪಾಲಿಟೆಕ್ನಿಕ್ ಕಾಲೇಜುಗಳ ಡೀನ್ಗಳನ್ನು ನೇರ ನೇಮಕಾತಿ ಮೂಲಕ ನೇಮಿಸದೆ ಬಡ್ತಿ ನೀಡಲಾಗಿದೆ. ಇದು ನಿಯಮಗಳ ವಿರುದ್ಧವಾಗಿದೆ. ಲಂಚ ಪಡೆದು ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಮೀಸಲಾತಿ ನಿಯಮಗಳನ್ನು ಪಾಲಿಸಿಲ್ಲ. ಇದರಲ್ಲಿ ಸಚಿವರೂ ಭಾಗಿಯಾಗಿರುವ ಬಗ್ಗೆ ಅಪ್ನಾ ದಳದ ಶಾಸಕಿ ಪಲ್ಲವಿ ಪಟೇಲ್ ಅವರು ಆರೋಪಿಸಿದ್ದರು.
ಇದನ್ನೂ ಓದಿ: '1940 ರಲ್ಲಿ ಆರ್ಎಸ್ಎಸ್ ಶಾಖೆಗೆ ಡಾ. ಬಿ ಆರ್ ಅಂಬೇಡ್ಕರ್ ಭೇಟಿ ನೀಡಿದ್ದರು'