Team India Next Capatian: ಟೀಮ್ ಇಂಡಿಯಾದ ಮುಂದಿನ ನಾಯಕ ಯಾರು? ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಬಗ್ಗೆ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ.
ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಬಳಿಕ ರೋಹಿತ್ ಶರ್ಮಾ ನಿವೃತ್ತಿ ಬಗ್ಗೆ ಚರ್ಚೆಗಳು ನಡೆದಿದೆ. ಈಗಾಗಲೇ ಟಿ20ಗೆ ವಿದಾಯ ಹೇಳಿರುವ ಹಿಟ್ಮ್ಯಾನ್ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಈ ಹಿನ್ನಲೆ ಟೆಸ್ಟ್‌ನಿಂದಲೂ ಹಿಂದೆ ಸರಿಯಲಿದ್ದಾರೆ ಎಂಬ ವರದಿಗಳು ಕೇಳಿ ಬಂದಿದ್ದವು. ಆದರೆ ಇದನ್ನು ತಳ್ಳಿಹಾಕಿರುವ ರೋಹಿತ್ ಇನ್ನು ಕೆಲ ಸಮಯ ದೀರ್ಘ ಸ್ವರೂಪದಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ.
ಅಲ್ಲದೇ ತಂಡಕ್ಕೆ ಹೊಸ ನಾಯಕನ ಆಯ್ಕೆ ಮಾಡುವವರೆಗೆ ರೋಹಿತ್ ನಾಯಕನಾಗಿ ಮುಂದುವರಿಯಲಿದ್ದಾರೆ ಎಂದು ವರದಿಯಾಗಿದೆ. ಇದರೊಂದಿಗೆ ರೋಹಿತ್ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಪ್ರಸ್ತುತ ಟೀಂ ಇಂಡಿಯಾದ ಉಪನಾಯಕರಾಗಿರುವ ಜಸ್ಪ್ರೀತ್ ಬುಮ್ರಾ ಅವರ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ಗೆ ರೋಹಿತ್ ಲಭ್ಯವಾಗಿದ್ದಾಗ, ಬುಮ್ರಾ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು.
ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತ್ತು. ಆದರೆ ಬುಮ್ರಾ ಅವರ ಫಿಟ್ನೆಸ್ ಮತ್ತು ಟೆಸ್ಟ್ ವೃತ್ತಿಜೀವನವನ್ನು ಎಷ್ಟು ಕಾಲ ವಿಸ್ತರಿಸಬಹುದು ಎಂಬುದರ ಬಗ್ಗೆ ಅನುಮಾನಗಳಿವೆ. ಈ ಕಾರಣದಿಂದಾಗಿ, ಆಯ್ಕೆದಾರರು ಮತ್ತು ಕೋಚ್ ಬುಮ್ರಾಗೆ ನಾಯಕನ ಜವಾಬ್ದಾರಿಯನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗಗಳತ್ತ ಗಮನಹರಿಸಲಾಗುತ್ತಿದೆ.