ಹಾವೇರಿ: ಉತ್ತರ ಕರ್ನಾಟಕದಲ್ಲಿ ಗ್ರಾಮ ದೇವತೆಯ ಜಾತ್ರೆಯನ್ನು ವಿಶಿಷ್ಠವಾಗಿ ಆಚರಿಸಲಾಗುತ್ತದೆ. ಕೆಲ ಗ್ರಾಮಗಳಲ್ಲಿ ವರ್ಷಕ್ಕೊಮ್ಮೆ, ಇನ್ನು ಕೆಲ ಗ್ರಾಮಗಳಲ್ಲಿ ಮೂರು ಅಥವಾ ಐದು ವರ್ಷಕ್ಕೂಮ್ಮೆ ಜಾತ್ರೆ ನಡೆಸಲಾಗುತ್ತದೆ. ಇನ್ನು ಶಿಗ್ಗಾಂವಿ ತಾಲೂಕಿನ ಹೋತನಹಳ್ಳಿ ಗ್ರಾಮದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಗ್ರಾಮದೇವತೆಯ ಜಾತ್ರೆಯನ್ನು ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಜಾತ್ರೆಗೆ ಹೋತನಹಳ್ಳಿ ಗ್ರಾಮದ ಗ್ರಾಮಸ್ಥರು ಐದು ಮಂಗಳವಾರ ಗ್ರಾಮ ತೊರೆಯುವ 'ಹೊರಬೀಡು' ಎಂಬ ಪದ್ದತಿ ಇಲ್ಲಿದೆ.
ಈ ಜಾತ್ರಾ ಮಹೋತ್ಸವದ ವೇಳೆ ದೇವತೆ ಗ್ರಾಮದಲ್ಲಿ ನೆಲೆಸುತ್ತಾಳೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ. ಈ ಐದು ಮಂಗಳವಾರ ದೇವಿ ಗ್ರಾಮದಲ್ಲಿ ನೆಲೆಸಿ ಗ್ರಾಮದಲ್ಲಿರುವ ದುಷ್ಟಶಕ್ತಿಗಳನ್ನು ಸಂಹರಿಸುತ್ತಾಳೆ ಎಂದು ಗ್ರಾಮದ ಜನರು ನಂಬುತ್ತಾರೆ. ಈ ಹಿನ್ನೆಲೆಯಲ್ಲಿ ಜಾತ್ರೆಗೂ ಮುನ್ನ ಬರುವ ಐದು ಮಂಗಳವಾರ ಗ್ರಾಮಸ್ಥರು ಗ್ರಾಮ ತೊರೆಯುತ್ತಾರೆ.
ಈ ವೇಳೆ ಗ್ರಾಮದಲ್ಲಿ ಯಾರೂ ಇರುವುದಿಲ್ಲ. ಗ್ರಾಮಸ್ಥರು ಆ ಸಮಯದಲ್ಲಿ ಹಸು, ಎತ್ತು, ಕುರಿ, ಕೋಳಿ, ನಾಯಿ ಮತ್ತು ಬೆಕ್ಕು ಸೇರಿದಂತೆ ಸಾಕು ಪ್ರಾಣಿಗಳನ್ನು ತಮ್ಮೊಟ್ಟಿಗೆ ಕರೆದೊಯ್ಯುತ್ತಾರೆ. ಸೂರ್ಯ ಉದಯಿಸುವುದಕ್ಕೂ ಮುನ್ನ ಗ್ರಾಮ ತೊರೆಯುವ ಗ್ರಾಮಸ್ಥರು ಸೂರ್ಯಾಸ್ತದ ನಂತರ ಜಮೀನಿನಲ್ಲಿ ಅಡುಗೆ ತಯಾರಿಸಿ ಊಟ ಮಾಡಿ ರಾತ್ರಿ ಮನೆಗೆ ಮರಳುತ್ತಾರೆ.
ಬೇರೆ ಗ್ರಾಮದವರು ಬರುವಂತಿಲ್ಲ: ಗ್ರಾಮ ಸಂಪರ್ಕಿಸುವ ರಸ್ತೆಗಳಲ್ಲಿ ಈ ಕುರಿತಂತೆ ಸೂಚನಾ ಫಲಕ ಹಾಕಿರುತ್ತಾರೆ. ಹೋತನಹಳ್ಳಿ ಗ್ರಾಮಸ್ಥರು ಮಾತ್ರವಲ್ಲದೇ ಬೇರೆ ಗ್ರಾಮದ ಜನ ಸಹ ಗ್ರಾಮ ಪ್ರವೇಶಿಸುವಂತಿಲ್ಲ. ಸಾರಿಗೆ ಬಸ್ ಸೇರಿದಂತೆ ಇತರ ವಾಹನಗಳಿಗೂ ಪ್ರವೇಶ ನಿರ್ಬಂಧಿಸಲಾಗಿರುತ್ತದೆ. ಈ ಐದು ಮಂಗಳವಾರ ಗ್ರಾಮದಲ್ಲಿದ್ದರೆ ಗ್ರಾಮಕ್ಕೆ ಒಳಿತಾಗುವುದಿಲ್ಲ ಎನ್ನುವ ನಂಬಿಕೆ ಇಲ್ಲಿದೆ.
ತಲತಲಾಂತರದಿಂದ ಈ ಸಂಪ್ರದಾಯ ಗ್ರಾಮದಲ್ಲಿದ್ದು, ಧರ್ಮ ಭೇದವಿಲ್ಲದೆ ಹಿಂದೂ ಮತ್ತು ಮುಸ್ಲಿಂ ಸೇರಿ ಈ ಆಚರಣೆಯನ್ನು ಮಾಡುತ್ತಿರುವುದು ವಿಶೇಷ. ಐದು ಮಂಗಳವಾರ ಮುಗಿದ ಮೇಲೆ ಗ್ರಾಮದಲ್ಲಿ ಅದ್ಧೂರಿಯಾಗಿ ಗ್ರಾಮದೇವತೆ ಜಾತ್ರೆ ನಡೆಯುತ್ತದೆ. ಶತಶತಮಾನಗಳಿಂದ ಗ್ರಾಮದಲ್ಲಿ ಈ ಸಂಪ್ರದಾಯ ಆಚರಣೆಯಲ್ಲಿತ್ತು. ಆದರೆ ಕೆಲ ವರ್ಷಗಳಿಂದ ಸಂಪ್ರದಾಯ ನಿಂತಿತ್ತು. ಗ್ರಾಮದಲ್ಲಿ ಮತ್ತೆ ಸಮಸ್ಯೆಗಳು ತಲೆದೂರಿದ್ದರಿಂದ ಕಳೆದ 12 ವರ್ಷಗಳಿಂದ ಮತ್ತೆ ಹೊರಬೀಡು ಸಂಪ್ರದಾಯ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಗ್ರಾಮಸ್ಥ ಮಾರ್ತಾಂಡಪ್ಪ ಮಾತನಾಡಿ, "ಐದು ಮಂಗಳವಾರ ಮನೆಯಲ್ಲಿ ಸಾಕು ಪ್ರಾಣಿಗಳು ಸೇರಿದಂತೆ ಪ್ರತಿಯೊಬ್ಬರು ಗ್ರಾಮ ತೊರೆದು ಹೊರಬೀಡು ಎಂಬ ಸಂಪ್ರದಾಯವನ್ನು ಆಚರಣೆ ಮಾಡುತ್ತೇವೆ. ಆರ್ಚಕರು ಐದು ಮಂಗಳವಾರ ಹೊರಬೀಡು ಆಚರಿಸಬೇಕು ಎಂದು ಹೇಳಿದ್ದಾರೆ. ಈಗ ನಾವು ಮೂರನೇ ಮಂಗಳವಾರ(ನಿನ್ನೆ) ಹೊರಬೀಡು ಆಚರಿಸಿದ್ದೇವೆ. ಇನ್ನು ಎರಡು ಮಂಗಳವಾರ ಹೊರಬೀಡು ಆಚರಿಸಬೇಕಿದೆ. ಈ ಸಮಯದಲ್ಲಿ ಯಾರು ಗ್ರಾಮದೊಳಗೆ ಪ್ರವೇಶ ಮಾಡಬಾರದು ಎಂದು ಸೂಚನಾ ಫಲಕವನ್ನು ಅಳವಡಿಸಿದ್ದೇವೆ" ಎಂದು ತಿಳಿಸಿದರು.
ಗ್ರಾಮಸ್ಥರಾದ ದಾನೇಶ್ವರಿ ಮಾತನಾಡಿ, "ನಾವು ಮೂರು ಹೊರಬೀಡು ಆಚರಿಸಿದ್ದೇವೆ. ಬೆಳಗ್ಗೆ 3 ಗಂಟೆಗೆ ಎದ್ದು ದೇವರ ಪೂಜೆ ಮಾಡಿ ಮನೆಗೆ ಬೀಗ ಹಾಕಿ ಬರುತ್ತೇವೆ. ಬೆಳಗ್ಗೆ ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತವಾಗುವ ವರೆಗೆ ಜಮೀನಿನಲ್ಲೇ ಇರುತ್ತೇವೆ. ಇಲ್ಲೇ ಅಡುಗೆ ತಯಾರಿಸಿ ಊಟ ಮಾಡಿಕೊಂಡು ಸೂರ್ಯಾಸ್ತದ ನಂತರ ಮನೆಗೆ ಹೋಗುತ್ತೇವೆ" ಎಂದರು.
ಇದನ್ನೂ ಓದಿ: ಈ ಹಬ್ಬದ ದಿನ ಪ್ರಯಾಣ ಬೆಳೆಸಬಾರದೆಂದು ಹಿರಿಯರು ಹೇಳುವುದೇಕೆ?: ಇದರ ಹಿಂದಿದೆ ಅಚ್ಚರಿಯ ಕಥೆ!
ಇದನ್ನೂ ಓದಿ: ಶರಾವತಿ ಹಿನ್ನೀರಿನ ಅಧಿದೇವತೆ ಸಿಗಂದೂರು ಚೌಡೇಶ್ವರಿ ಜಾತ್ರಾ ಮಹೋತ್ಸವ: ಹರಿದು ಬಂದ ಭಕ್ತರ ದಂಡು