ಬೆಳಗಾವಿ : ದೇವರು ತಮಗೆ ಮುಕ್ತಿ ನೀಡಲಿ ಎಂದು ಭಕ್ತರು ಪ್ರಾರ್ಥಿಸುವುದು ಸಾಮಾನ್ಯ. ಅಲ್ಲದೇ ದೇವರು ತಮ್ಮನ್ನು ಕಾಪಾಡುತ್ತಾನೆ ಎಂಬ ನಂಬಿಕೆ ಕೂಡ ಇದೆ. ಆದರೆ, ಇಲ್ಲೊಬ್ಬ ದೇವರ ಮಗ ದೇವರನ್ನೇ ಕಾಪಾಡಿ, ಆ ದೇವರಿಗೇ ಮುಕ್ತಿ ಕೊಡಿಸುವ ಕಾಯಕ ಮಾಡುತ್ತಿದ್ದಾರೆ. ಅರೇ ಇದೇನಿದು ದೇವರಿಗೆ ಮುಕ್ತಿನಾ? ಎಂಬ ಪ್ರಶ್ನೆ ಮೂಡುತ್ತಿದೆಯೇ. ಹಾಗಾದರೆ ಈಟಿವಿ ಭಾರತದ ವಿಶೇಷ ವರದಿ ನೋಡಿ.
ಹೌದು, ದೇವಸ್ಥಾನದ ಅರಳಿಕಟ್ಟೆ, ರಸ್ತೆ ಬದಿಯ ಮರಗಳು, ಖಾಲಿ ಜಾಗಗಳು, ನದಿ ದಂಡೆ ಹೀಗೆ ಎಲ್ಲೆಂದರಲ್ಲಿ ದೇವರ ಹಳೆಯ ಫೋಟೋಗಳನ್ನು ಎಸೆದಿರುವುದನ್ನು ನಾವು ಕಾಣುತ್ತೇವೆ. ಹೀಗೆ ಎಲ್ಲೆಂದರಲ್ಲಿ ಎಸೆದ ಫೋಟೋಗಳನ್ನು ಸಂಗ್ರಹಿಸಿ ಅವುಗಳನ್ನು ವಿಧಿ - ವಿಧಾನದ ಪ್ರಕಾರ ವಿಸರ್ಜಿಸುವ ಕೆಲಸವನ್ನು ಬೆಳಗಾವಿಯ ಸರ್ವಲೋಕ ಸೇವಾ ಫೌಂಡೇಶನ್ ಸಂಸ್ಥಾಪಕ ವೀರೇಶ ಹಿರೇಮಠ ಶ್ರದ್ಧೆಯಿಂದ ಮಾಡುವ ಮೂಲಕ ದೇವರ ಮಗನಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಬೆಳಗಾವಿ ತಾಲೂಕಿನ ರಾಜಹಂಸಗಡ ಗ್ರಾಮದ ಮಹಾದೇವಿ ಮತ್ತು ಬಸಯ್ಯ ಹಿರೇಮಠ ದಂಪತಿ ಪುತ್ರ ವೀರೇಶ ಅವರಿಗೆ ಬಾಲ್ಯದಿಂದಲೂ ದೇವರು, ಧರ್ಮ, ಸಂಸ್ಕೃತಿ ಮೇಲೆ ಅಪಾರ ನಿಷ್ಠೆ. ಚಿಕ್ಕವರಿದ್ದಾಗ ಜಾನುವಾರುಗಳನ್ನು ಮೇಯಿಸಲು ಹೋದಾಗ ಹೀಗೆ ಮರದ ಕೆಳಗೆ ಎಸೆದು ಹೋಗಿದ್ದ ದೇವರ ಫೋಟೋಗಳನ್ನು ನೋಡಿದ ವೀರೇಶ ಅವುಗಳ ರಕ್ಷಣೆಗೆ ಮುಂದಾದರು. ದೇವರಿಗೆ ಆಗುತ್ತಿರುವ ಅವಮಾನ ತಡೆಯಬೇಕು ಎಂದು ನಿಶ್ಚಯಿಸಿ, ಅವುಗಳನ್ನು ಸಂಗ್ರಹಿಸಿ, ಶಾಸ್ತ್ರೋಕ್ತವಾಗಿ ನದಿ ದಂಡೆಯ ಮೇಲೆ ವಿಸರ್ಜಿಸಲು ಶುರು ಮಾಡಿದರು. ಅವರೇ ಹೇಳುವಂತೆ ಇಲ್ಲಿಯವರೆಗೆ 50 ಸಾವಿರಕ್ಕೂ ಅಧಿಕ ದೇವರ ಫೋಟೋಗಳಿಗೆ ಮುಕ್ತಿ ನೀಡಿದ್ದಾರೆ.
ವೃತ್ತಿಯಲ್ಲಿ ಬೆಳಗಾವಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಪ್ರಚಾರಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ವೀರೇಶ ಹಿರೇಮಠ, ಸರ್ವಲೋಕ ಸೇವಾ ಫೌಂಡೇಶನ್ ಹುಟ್ಟು ಹಾಕಿದ್ದಾರೆ. ಈ ಫೌಂಡೇಶನ್ ಮೂಲಕ ಪರಿಸರ ಜಾಗೃತಿ, ಸತ್ತ ಪ್ರಾಣಿಗಳ ಅಂತ್ಯಸಂಸ್ಕಾರ ಸೇರಿ ಹಲವಾರು ಸಮಾಜೋಧಾರ್ಮಿಕ ಕೆಲಸ ಮಾಡುತ್ತಿದ್ದಾರೆ. ಪ್ರತಿ ಭಾನುವಾರ ತಮ್ಮ ತಂಡದೊಂದಿಗೆ ಒಂದೊಂದು ಸ್ಥಳ ಗುರುತಿಸಿ ದೇವರ ಫೋಟೋಗಳನ್ನು ಸಂಗ್ರಹಿಸಿ, ತಮ್ಮ ಓಮಿನಿ ವಾಹನದಲ್ಲಿ ತುಂಬಿಕೊಂಡು ಹೋಗುತ್ತಾರೆ. ಬೆಳಗಾವಿ ನಗರ, ರಾಜ್ಯದ ವಿವಿಧೆಡೆ ಸೇರಿ ಗೋವಾ - ಮಹಾರಾಷ್ಟ್ರದಲ್ಲಿಯೂ ದೇವರ ಹಳೆಯ ಫೋಟೋಗಳನ್ನು ವಿಸರ್ಜಿಸುವ ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ದೇವಸ್ಥಾನ, ಜಾತ್ರೆಗಳಿಗೆ ಹೋದಾಗ ದೇವರ ಫೋಟೋಗಳನ್ನು ಮನೆಗೆ ತರುವುದು ರೂಢಿ. ಹೀಗೆ ತಂದ ಫೋಟೋಗಳನ್ನು ಕೆಲ ವರ್ಷ ಪೂಜಿಸಿದ ನಂತರ ಅವು ಹಳೆಯದಾಗುತ್ತವೆ. ಒಂದಿಷ್ಟು ಫೋಟೋಗಳು ಹಬ್ಬ- ಹರಿದಿನಗಳ ಸಂದರ್ಭದಲ್ಲಿ ಮನೆ ಸ್ವಚ್ಛಗೊಳಿಸುವಾಗ ಹಾನಿಯಾಗುತ್ತವೆ. ಹಾಗಾಗಿ, ಮುಕ್ಕಾದ ಫೋಟೋಗಳನ್ನು ಪೂಜಿಸಬಾರದು ಎಂಬ ನಂಬಿಕೆಯಿಂದ ಅವುಗಳನ್ನು ಗಿಡದ ಕೆಳಗೋ, ನದಿ ದಂಡೆಯ ಮೇಲೋ ಜನ ಬಿಸಾಕಿ ಬರುವುದು ಸಾಮಾನ್ಯ. ಇಂಥ ಫೋಟೋಗಳಿಗೆ ಕಳೆದ 6 ವರ್ಷಗಳಿಂದ ವೀರೇಶ ಮುಕ್ತಿ ಕೊಡಿಸುತ್ತಿದ್ದಾರೆ.
ವೀರೇಶ ಹಿರೇಮಠ ಹೇಳಿದ್ದೇನು? : ''ಮೊದಲಿಗೆ ಫೋಟೋ ಫ್ರೇಂ, ಭಾವಚಿತ್ರ ಹಾಗೂ ಗ್ಲಾಸ್ ಬೇರೆ ಬೇರೆ ಮಾಡಿ ವಿಂಗಡಿಸಬೇಕು. ಗಾಜನ್ನು ಮರು ಬಳಕೆಗಾಗಿ ಪಾಲಿಕೆಯ ತ್ಯಾಜ್ಯ ಘಟಕಕ್ಕೆ ನೀಡುತ್ತೇವೆ. ದೇವರ ಭಾವಚಿತ್ರಗಳನ್ನು ಸಮೀಪದ ನದಿ ದಂಡೆಯ ಮೇಲೆ ಕೂಡಿ ಹಾಕಿ ಅರ್ಚಕರ ಸಮ್ಮುಖದಲ್ಲಿ ಅಗ್ನಿ ಯಜ್ಞ ಮಾಡಿ, ಹಿಂದೂ ವಿಧಿ ವಿಧಾನದ ಪ್ರಕಾರ ಶಾಸ್ತ್ರೋಕ್ತವಾಗಿ ಪೂಜಿಸಲಾಗುತ್ತದೆ. ನಂತರ ವಿಸರ್ಜನೆ ಮಾಡಿ ಅಗ್ನಿಸ್ಪರ್ಶ ಮಾಡಲಾಗುತ್ತದೆ. ಬಳಿಕ ಆ ಭಸ್ಮವನ್ನು ಅರಳಿಮರ, ಆಲದಮರ, ತುಳಸಿಗಿಡ, ಪತ್ರಿ ಗಿಡಗಳ ಬುಡಕ್ಕೆ ಹಾಕಿ, ಹೀಗೆ ಮನೆಯಿಂದ ತಂದು ದೇವರ ಫೋಟೋಗಳನ್ನು ಬಿಸಾಕಿದವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸುತ್ತೇವೆ'' ಎಂದು ವೀರೇಶ ಹಿರೇಮಠ ಈಟಿವಿ ಭಾರತಕ್ಕೆ ವಿವರಿಸಿದರು.
ಶಾಸ್ತ್ರೋಕ್ತವಾಗಿ ವಿಸರ್ಜನೆ ನೆರವೇರಿಸುತ್ತೇವೆ: ಇಲ್ಲಿಯವರೆಗೆ 50 ಸಾವಿರಕ್ಕೂ ಅಧಿಕ ದೇವರ ಫೋಟೋಗಳನ್ನು ವಿಸರ್ಜಿಸಿದ್ದೇವೆ. ನನಗೆ ಹಲವಾರು ಮಠಾಧೀಶರು, ಶಾಸ್ತ್ರಿಗಳು, ಅರ್ಚಕರು, ಸಮಾಜಸೇವಕರು ಹಾಗೂ ನಾಗರಿಕರು ಸಹಕಾರ ಕೊಡುತ್ತಿದ್ದಾರೆ. ಅಲ್ಲದೇ ಫೋಟೋಗಳನ್ನು ಎಲ್ಲೆಂದರಲ್ಲಿ ಇಟ್ಟು ದೇವರಿಗೆ ಅಪಮಾನ ಮಾಡಬೇಡಿ ಎಂದು ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದೇವೆ. ತಮಗೆ ದೇವರ ಫೋಟೋ ವಿಸರ್ಜಿಸಲು ಆಗದಿದ್ದರೆ ನಮ್ಮನ್ನು ಸಂಪರ್ಕಿಸಿದರೆ ನಾವು ಶಾಸ್ತ್ರೋಕ್ತವಾಗಿ ವಿಸರ್ಜನೆ ನೆರವೇರಿಸುತ್ತೇವೆ ಎಂದು ಹೇಳಿದರು.
ಜನರ ಕಾಲಿಗೆ ಗಾಯ ಆಗುತ್ತಿತ್ತು : ಆಂಜನೇಯ ನಗರ ನಿವಾಸಿ ಜಿ. ಡಿ ನರಸಣ್ಣವರ್ ಮಾತನಾಡಿ, ''ವೀರೇಶ ಹಿರೇಮಠ ಅವರು ಕಳೆದ 6 ತಿಂಗಳಿನಿಂದ ನಮ್ಮ ಏರಿಯಾಗೆ ಬಂದು ದೇವರ ಹಳೆಯ ಫೋಟೋಗಳನ್ನು ಸಂಗ್ರಹಿಸುತ್ತಿದ್ದಾರೆ. ಇದರಿಂದ ದೇವರಿಗೆ ಆಗುತ್ತಿದ್ದ ಅಪಮಾನ ತಪ್ಪಿದೆ. ಅಲ್ಲದೇ ಫೋಟೋ ಗ್ಲಾಸ್ ಚುಚ್ಚಿ ಇಲ್ಲಿ ಓಡಾಡುವ ಜನರ ಕಾಲಿಗೆ ಗಾಯ ಕೂಡ ಆಗುತ್ತಿತ್ತು. ಈ ಬಗ್ಗೆ ಜನರೂ ಸಹ ಜಾಗೃತಿ ವಹಿಸಬೇಕು'' ಎಂದು ಹೇಳಿದ್ದಾರೆ.
ಸ್ಥಳೀಯರಾದ ಬಸವರಾಜ ಆರೇರ ಅವರು ಮಾತನಾಡಿ, ''ಜನರಿಗೆ ದೇವರ ಫೋಟೋಗಳನ್ನು ಹೊಸದಾಗಿ ತಂದಾಗ ಇರುವ ಭಕ್ತಿ ಅವು ಹಳೆಯದಾದಾಗ ಇರುವುದಿಲ್ಲ. ಎಲ್ಲೆಂದರಲ್ಲಿ ಬಿಸಾಕಿ ಹೋಗುತ್ತಾರೆ. ದೇವರು ನಮಗೆ ಮುಕ್ತಿ ಕೊಡಲಿ ಎಂದು ಕೇಳಿಕೊಳ್ಳುತ್ತೇವೆ. ಆದರೆ, ಅಂಥ ದೇವರಿಗೆ ವೀರೇಶ ಹಿರೇಮಠ ಅವರು ಮುಕ್ತಿ ಕೊಡಿಸುತ್ತಿದ್ದಾರೆ. ಅವರ ಸೇವೆ ಬಹಳ ದೊಡ್ಡದು. ದೇವರು ಅವರಿಗೆ ಒಳ್ಳೆಯದು ಮಾಡಲಿ'' ಎಂದು ಹಾರೈಸಿದರು.
ದೇವರ ಫೋಟೋಗಳ ವಿಸರ್ಜನೆ ಕುರಿತು ಯಾರಿಗಾದರೂ ಮಾಹಿತಿ ಬೇಕಿದ್ದರೆ ವೀರೇಶ ಹಿರೇಮಠ ಅವರ ಮೊ.ನಂ.9481404055 ಸಂಪರ್ಕಿಸಬಹುದು.
ಇದನ್ನೂ ಓದಿ : ದೇಶಿ ಬೀಜಗಳ ಸಂರಕ್ಷಣೆಗೆ ಪಣ, 18 ತಳಿಗಳ ಜೋಳ ಬೆಳೆದ ರೈತ: ಇವರು ಜವಾರಿ ಜೋಳದ ಕಲ್ಲಪ್ಪಣ್ಣ ಅಂತಾನೇ ಫೇಮಸ್ಸು!! - FARMER SUCCESS STORY