ಬೆಂಗಳೂರು: ಅವಧಿ ಮೀರಿದರೂ ಅಪಾರ್ಟ್ಮೆಂಟ್ ನಿರ್ಮಾಣ ಪೂರ್ಣಗೊಳಿಸದ ಮತ್ತು ನಿಯಮ ಉಲ್ಲಂಘಿಸುವ ಬಿಲ್ಡರುಗಳ ವಿರುದ್ಧ ಕೆ-ರೇರಾ ದಂಡ ಪ್ರಯೋಗ ಮಾಡಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಇತ್ತ ಬಿಲ್ಡರ್ಗಳಿಂದ ದಂಡ ವಸೂಲಿಯೂ ಆಗುತ್ತಿಲ್ಲ, ಸಂತ್ರಸ್ತ ಗೃಹ ಖರೀದಿದಾರರಿಗೆ ನಿರೀಕ್ಷಿತ ಪರಿಹಾರವೂ ಸಿಗುತ್ತಿಲ್ಲ.
ಗೃಹ ಖರೀದಿದಾರರ ಹಿತರಕ್ಷಣೆಗಾಗಿ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಹಣ ಪಡೆದು ವರ್ಷಾನುಗಟ್ಟಲೆ ಅಪಾರ್ಟ್ಮೆಂಟ್, ಮನೆ ನಿರ್ಮಾಣ ಮಾಡಿಕೊಡದೇ ಸತಾಯಿಸುವ ಬಿಲ್ಡರುಗಳು, ಪ್ರವರ್ತಕರ ಮೇಲೆ ನಿಯಂತ್ರಣ ಹೇರಲು ಈ ಕಾಯ್ದೆ ಜಾರಿಗೆ ತರಲಾಗಿತ್ತು. ರಾಜ್ಯದಲ್ಲೂ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ರಾಜ್ಯದ ಗೃಹ ಖರೀದಿದಾರರ ಹಿತ ಕಾಯ್ದುಕೊಳ್ಳುವ ಉದ್ದೇಶದಿಂದ ಕೆ-ರೇರಾ ಅಸ್ತಿತ್ವಕ್ಕೆ ಬಂದಿದೆ. ಆದರೆ, ಕೆ-ರೇರಾ ಹಲ್ಲಿಲ್ಲದ ಹಾವಿನಂತಾಗಿದೆ ಎಂಬುದು ಸಂತ್ರಸ್ತ ಗೃಹ ಖರೀದಿದಾರರ ಆರೋಪವಾಗಿದೆ.
ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ ಬಿಲ್ಡರ್‌ಗಳು ಮತ್ತು ಪ್ರವರ್ತಕರ ಮೇಲೆ ಕೆ-ರೇರಾ ನ್ಯಾಯಾಧೀಕರಣ ದಂಡ ವಿಧಿಸುತ್ತದೆ. ಅಪಾರ್ಟ್ಮೆಂಟ್ ನಿರ್ಮಾಣ ಪೂರ್ಣ ಮಾಡದೇ ವಿಳಂಬ ಮಾಡುವ ಬಿಲ್ಡರುಗಳ ಮೇಲೆ ಕಾಯ್ದೆಯಂತೆ ದಂಡ ವಿಧಿಸಲಾಗುತ್ತದೆ. ಬಿಲ್ಡರುಗಳಿಂದ ದಂಡ ರಿಕವರಿಗಾಗಿ ರೇರಾ ನ್ಯಾಯಾಧೀಕರಣ ಆದೇಶ ಹೊರಡಿಸುತ್ತದೆ. ಆದರೂ ಬಿಲ್ಡರುಗಳು ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಯೋಜನೆಗಳನ್ನು ಪೂರ್ಣಗೊಳಿಸದೇ ವಿಳಂಬ ನೀತಿ ಅನುಸರಿಸುತ್ತಿರುವುದು ಮುಂದುವರಿದಿದೆ.
758 ಕೋಟಿ ರೂ. ದಂಡ ವಸೂಲಿ ಆದೇಶ: ಈಟಿವಿ ಭಾರತಕ್ಕೆ ಲಭ್ಯವಾದ ಅಂಕಿ ಅಂಶದಂತೆ ರೇರಾ ನ್ಯಾಯಾಧೀಕರಣವು 2024 ಅಂತ್ಯದ ವರೆಗೆ ರಾಜ್ಯಾದ್ಯಂತ ನಿಯಮ ಉಲ್ಲಂಘಿಸಿದ ಸುಮಾರು 278 ಬಿಲ್ಡರುಗಳ ಮೇಲೆ 1660 ಪ್ರಕರಣಗಳಲ್ಲಿ 758.85 ಕೋಟಿ ರೂ. ದಂಡ ವಸೂಲಿ ಆದೇಶ ಹೊರಡಿಸಲಾಗಿದೆ.
ರೇರಾ ನ್ಯಾಯಾಧೀಕರಣವು ಕಂದಾಯ ಇಲಾಖೆಗೆ ಬಿಲ್ಡರುಗಳಿಂದ ದಂಡ ವಸೂಲಿಯ ಹೊಣೆಗಾರಿಕೆ ನೀಡುತ್ತದೆ. ತಹಶೀಲ್ದಾರರು ಅಥವಾ ಜಿಲ್ಲಾಧಿಕಾರಿಗಳು ರೇರಾ ನ್ಯಾಯಾಧೀಕರಣದ ರಿಕವರಿ ಆದೇಶ ಕಾರ್ಯಗತಗೊಳಿಸುವ ಜವಾಬ್ದಾರಿ ಹೊಂದಿದ್ದಾರೆ. ಕಳೆದ ವರ್ಷ ಆಗಸ್ಟ್ ತಿಂಗಳವರೆಗೆ ಕೆ-ರೇರಾ ಸುಮಾರು 707 ಕೋಟಿ ರೂ. ದಂಡ ವಸೂಲಿಯ ಆದೇಶ ಹೊರಡಿಸಿತ್ತು. 1,539 ಪ್ರಕರಣಗಳಲ್ಲಿ ದಂಡ ಪ್ರಯೋಗ ಮಾಡಿತ್ತು. ನಿಯಮ ಉಲ್ಲಂಘಿಸಿದ ಸುಮಾರು 257 ಬಿಲ್ಡರುಗಳ ಮೇಲೆ ದಂಡ ವಿಧಿಸಲಾಗಿತ್ತು. ಇದೀಗ 2024 ಡಿಸೆಂಬರ್ ಅಂತ್ಯಕ್ಕೆ ದಂಡ ವಸೂಲಿ ಮೊತ್ತ 758.85 ಕೋಟಿ ರೂ.ಗೆ ತಲುಪಿದೆ ಎಂದು ಕೆ-ರೇರಾ ಅಧಿಕಾರಿಗಳು ತಿಳಿಸಿದ್ದಾರೆ.
ವಸೂಲಿಯಾಗಿದ್ದು ಕೇವಲ 91 ಕೋಟಿ ಮಾತ್ರ: ಕೆ-ರೇರಾ ನ್ಯಾಯಾಧೀಕರಣ ದಂಡ ರಿಕವರಿ ಆದೇಶ ಹೊರಡಿಸಿದರೂ ಬಿಲ್ಡರುಗಳು ಕ್ಯಾರೆ ಎನ್ನುತ್ತಿಲ್ಲ. ಕಂದಾಯ ಇಲಾಖೆಯೂ ರೇರಾ ಆದೇಶ ಕಾರ್ಯಗತಗೊಳಿಸುವತ್ತ ಹೆಚ್ಚಿನ ಗಮನ ಹರಿಸುವಂತೆ ಕಾಣುತ್ತಿಲ್ಲ. 758.85 ಕೋಟಿ ರೂ. ದಂಡ ವಸೂಲಿ ಆದೇಶದ ಪೈಕಿ ಈವರೆಗೆ ಕೇವಲ 91.88 ಕೋಟಿ ರೂ. ಮಾತ್ರ ರಿಕವರಿ ಮಾಡಲಾಗಿದೆ. ಅಂದರೆ ಕೇವಲ 12% ಮಾತ್ರ ವಸೂಲಿ ಮಾಡಲು ಸಾಧ್ಯವಾಗಿದ್ದು, ಸುಮಾರು 1,427 ಪ್ರಕರಣಗಳ 666.97 ಕೋಟಿ ರೂ. ವಸೂಲಿ ಬಾಕಿ ಉಳಿದುಕೊಂಡಿದೆ.
ಆಗಸ್ಟ್ ವರೆಗೆ ಕೇವಲ 79.94 ಕೋಟಿ ರೂ. ದಂಡ ವಸೂಲಿ ಮಾಡಲಾಗಿತ್ತು. ಇದೀಗ ಡಿಸೆಂಬರ್ ಅಂತ್ಯದ ವರೆಗೆ ಕೇವಲ 91.88 ಕೋಟಿ ಮಾತ್ರ ವಸೂಲಿ ಮಾಡಲಾಗಿದೆ. ಅಂದರೆ ದೊಡ್ಡ ಪ್ರಮಾಣದಲ್ಲಿ ನಿಯಮ ಉಲ್ಲಂಘಿಸಿದ ಬಿಲ್ಡರುಗಳಿಂದ ವಸೂಲಿ ಮಾಡಲು ಸಾಧ್ಯವಾಗುತ್ತಿಲ್ಲ. ಡಿಸೆಂಬರ್ ವರೆಗೆ 233 ಪ್ರಕರಣಗಳಲ್ಲಿ 91.88 ಕೋಟಿ ರೂ. ಮಾತ್ರ ರಿಕವರಿ ಮಾಡಲಾಗಿದೆ. ಹೀಗಾಗಿ ರೇರಾ ಪ್ರಾಧಿಕಾರದ ರಿಕವರಿ ಆದೇಶಕ್ಕೆ ಬಿಲ್ಡರುಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲವೇ ಎಂಬ ಪ್ರಶ್ನೆ ಹುಟ್ಟಿದೆ.
4 ಡಿಫಾಲ್ಟರ್ಸ್, 2,676 ಯೋಜನೆಗಳು ವಿಳಂಬ: ರಾಜ್ಯದಲ್ಲಿ ಒಟ್ಟು 4 ಬಿಲ್ಡರುಗಳು ಡಿಫಾಲ್ಟರುಗಳಾಗಿದ್ದರೆ, 2,676 ಯೋಜನೆಗಳು ವಿಳಂಬವಾಗಿರುವುದಾಗಿ ಕೆ-ರೇರಾ ತಿಳಿಸಿದೆ. ಕೆ-ರೇರಾ ಡಿಫಾಲ್ಟರ್ಸ್ ಹಾಗೂ ಯೋಜನೆ ವಿಳಂಬವಾಗಿರುವ ಬಿಲ್ಡರುಗಳು, ಪ್ರವರ್ತಕರ ಹೆಸರುಗಳನ್ನು ಬಹಿರಂಗ ಮಾಡುತ್ತೆ. ಆ ಮೂಲಕ ಮನೆ ಖರೀದಿದಾರರು ತಿಳಿದುಕೊಂಡು ತೀರ್ಮಾನ ಕೈಗೊಳ್ಳಲು ಸಹಕಾರಿಯಾಗಿದೆ. ಕೆ-ರೇರಾ ಪಟ್ಟಿ ಮಾಡಿದ 4 ಡಿಫಾಲ್ಟರುಗಳಲ್ಲಿ ಬಿಡಿಎಯ ಕೆಂಪೇಗೌಡ ಬಡಾವಣೆ ಸೇರಿದೆ. ಡಿಫಾಲ್ಟರುಗಳು ಕೆ-ರೇರಾ ಹೊರಡಿಸುವ ನೊಟೀಸ್ಗೂ ಉತ್ತರಿಸದೇ, ಪ್ರಾಧಿಕಾರಕ್ಕೆ ಕಾಮಗಾರಿ ಪ್ರಗತಿಯ ತ್ರೈಮಾಸಿಕ ವರದಿಯನ್ನೂ ಸಲ್ಲಿಸಿಲ್ಲ.
ಇನ್ನು ಕೆ-ರೇರಾ ಒಟ್ಟು 2,676 ವಿಳಂಬವಾಗಿರುವ ಯೋಜನೆಗಳೆಂದು ಪಟ್ಟಿ ಮಾಡಿದೆ. ಡೆಡ್ ಲೈನ್ ಮುಗಿದರೂ ಅಪಾರ್ಟ್ಮೆಂಟ್ ನಿರ್ಮಾಣ ಪೂರ್ಣಗೊಳಿಸಲಾಗದೆ ಬಳಿಕ ಅವಧಿ ವಿಸ್ತರಣೆ ಮಾಡದ ಯೋಜನೆಗಳನ್ನು ವಿಳಂಬ ಯೋಜನೆಗಳು ಎಂದು ಪಟ್ಟಿ ಮಾಡಲಾಗುತ್ತದೆ. ಕೆ-ರೇರಾ ವಿಳಂಬ ಯೋಜನೆಗಳ ಬಿಲ್ಡರುಗಳಿಗೆ ನೊಟೀಸ್ ಜಾರಿ ಮಾಡಿ ವಿಳಂಬಕ್ಕೆ ಕಾರಣದ ಬಗ್ಗೆ ಸ್ಪಷ್ಟನೆ ಕೇಳುತ್ತದೆ. ಕೆ-ರೇರಾ ನ್ಯಾಯಾಧೀಕರಣದ ವಿಚಾರಣೆಗೆ ಹಾಜರಾಗಿ ವಿಳಂಬ ಕಾರಣದ ಬಗ್ಗೆ ಸ್ಪಷ್ಟನೆ ನೀಡಿ ಡೆಡ್ ಲೈನ್ ವಿಸ್ತರಣೆಗೆ ಮನವಿ ಮಾಡಬೇಕು ಎಂದು ಕೆ-ರೇರಾ ಅಧಿಕಾರಿಗಳು ತಿಳಿಸಿದ್ದಾರೆ.
ರೇರಾ ಮುಂದೆ 8,746 ಯೋಜನೆ ನೋಂದಣಿಗೆ ಅರ್ಜಿ: ಈಗಾಗಲೇ ಕೆ-ರೇರಾದಲ್ಲಿ ರಾಜ್ಯಾದ್ಯಂತ ಸುಮಾರು 8,746 ಯೋಜನೆಗಳ ನೋಂದಣಿಗೆ ಅರ್ಜಿ ಸಲ್ಲಿಸಲಾಗಿದೆ. ಈ ಪೈಕಿ 7,317 ಅರ್ಜಿಗಳನ್ನು ಅನುಮೋದಿಸಿದೆ. ಸುಮಾರು 853 ಯೋಜನೆಗಳ ಅರ್ಜಿಯನ್ನು ತಿರಸ್ಕರಿಸಲಾಗಿದೆ. 326 ಅರ್ಜಿಗಳು ಇತ್ಯರ್ಥ ಪ್ರಕ್ರಿಯೆಯಲ್ಲಿವೆ. 2,611 ಯೋಜನೆಗಳು ಕಾಮಗಾರಿ ಮುಕ್ತಾಯದ ಅರ್ಜಿ ಸಲ್ಲಿಸಿವೆ. ಇತ್ತ ರಾಜ್ಯಾದ್ಯಂತ ಬಿಲ್ಡರುಗಳ ಮೇಲೆ ಸುಮಾರು 11,131 ದೂರುಗಳು ದಾಖಲಾಗಿವೆ ಎಂದು ಕೆ-ರೇರಾ ಮಾಹಿತಿ ನೀಡಿದೆ.
ಕೆ-ರೇರಾಗೆ ಹೆಚ್ಚಿನ ಅಧಿಕಾರ ನೀಡಲು ಒತ್ತಾಯ: ಇತ್ತ ಸಂತ್ರಸ್ತ ಗೃಹ ಖರೀದಿದಾರರು ನಿಯಮ ಉಲ್ಲಂಘಿಸುವ ಬಿಲ್ಡರುಗಳಿಂದ ದಂಡ ವಸೂಲಿ ಮಾಡಲು ಕೆ-ರೇರಾಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಸಂತ್ರಸ್ತ ಶಾಂತಕುಮಾರ್ ಎಂಬುವರು ಮಾತನಾಡಿ ಕೆ-ರೇರಾ ದಂಡ ವಸೂಲಿ ಆದೇಶಕ್ಕೂ ಬಿಲ್ಡರುಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ರೇರಾಗೆ ನೇರವಾಗಿ ದಂಡ ವಸೂಲಿ ಅಥವಾ ಮುಟ್ಟುಗೋಲು ಹಾಕುವ ಅಧಿಕಾರ ಇಲ್ಲ. ಅದಕ್ಕೆ ಹೆಚ್ಚಿನ ಅಧಿಕಾರ ನೀಡಿದರೆ ಗೃಹ ಖರೀದಿದಾರರಿಗೆ ಪ್ರಯೋಜನವಾಗಲಿದೆ. ಇಲ್ಲವಾದರೆ ಕೆ-ರೇರಾ ಹಲ್ಲಿಲ್ಲದ ಹಾವಿನಂತೆ ಇರಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇತ್ತ ಕೇಂದ್ರ ಸರ್ಕಾರವೂ ನಿಯಮ ಉಲ್ಲಂಘಿಸುವ ಬಿಲ್ಡರುಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಈಗಾಗಲೇ ತಾಕೀತು ಮಾಡಿದೆ. ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ಈಗಾಗಲೇ ಈ ಸಂಬಂಧ ಎಲ್ಲ ರಾಜ್ಯ ಸರ್ಕಾರಗಳಿಗೆ ಖಡಕ್ ಸೂಚನೆ ನೀಡಿದೆ. ಬಿಲ್ಡರ್ ಮತ್ತು ಪ್ರೊಮೋಟರ್‌ಗಳಿಂದ ಕೋಟ್ಯಂತರ ರೂಪಾಯಿ ದಂಡ ಬಾಕಿ ವಸೂಲಿಗೆ ಆಯಾ ರಾಜ್ಯ ಸರ್ಕಾರಗಳು ಕಾರ್ಯತಂತ್ರ ರೂಪಿಸುವಂತೆ ಸೂಚಿಸಿದೆ. ರೇರಾ ನ್ಯಾಯಾಧೀಕರಣದ ರಿಕವರಿ ಆದೇಶ ಏಕೆ ಕಾರ್ಯಗತಗೊಳ್ಳುತ್ತಿಲ್ಲ ಎಂಬ ಬಗ್ಗೆ ಪರಾಮರ್ಶಿಸುವಂತೆ ರಾಜ್ಯ ಸರ್ಕಾರಗಳಿಗೆ ಗಂಭೀರವಾಗಿ ತಾಕೀತು ಮಾಡಿದೆ.
ನಿಯಮ ಉಲ್ಲಂಘಿಸುವ ಬಿಲ್ಡರುಗಳಿಗೆ ರಿಕವರಿ ಆದೇಶವನ್ನು ಹೊರಡಿಸಲಾಗುತ್ತಿದೆ. ದಂಡ ರಿಕವರಿ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ದಂಡ ಪಾವತಿಸದ ಬಿಲ್ಡರುಗಳ ಆಸ್ತಿ ಮುಟ್ಟುಗೋಲು ಹಾಕುವ ಅವಕಾಶ ಇದೆ. ಆದರೆ, ನಿಧಾನವಾಗಿ ಪರಿಸ್ಥಿತಿ ಸುಧಾರಣೆ ಕಾಣುತ್ತಿದೆ - ರಾಕೇಶ್ ಸಿಂಗ್, ಕೆ-ರೇರಾ ಅಧ್ಯಕ್ಷ
ಇದನ್ನೂ ಓದಿ: ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಿಕೊಳ್ಳುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ
ಇದನ್ನೂ ಓದಿ: ರಾಜ್ಯದಲ್ಲಿ ಹೊಸ ಬಿಯರ್ ನೀತಿ ಜಾರಿ: ಶೇ.25ರ ಸಕ್ಕರೆ ಅಂಶ ಮಿತಿಯಿಂದ ಅಗ್ಗದ ಬಿಯರ್ಗೆ ಬ್ರೇಕ್!