Ab de villiers: ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಕೂಡ ಒಬ್ಬರು. ತಮ್ಮ ಸ್ಫೋಟಕ ಬ್ಯಾಟಿಂಗ್ನಿಂದಲೇ ಹೆಸರು ವಾಸಿಯಾಗಿರುವ ಎಬಿಡಿ ಕ್ರಿಕೆಟ್ ನಿಂದ ದೂರ ಉಳಿದ 4 ವರ್ಷಗಳೆ ಕಳೆದಿವೆ. ಇದೀಗ ಮತ್ತೆ ಮೈದಾನಕ್ಕೆ ಮರಳಲು ಸಜ್ಜಾಗಿದ್ದಾರೆ. ಆದರೆ ಈ ಬಾರಿ ಕೇವಲ ಬ್ಯಾಟರ್ ಆಗಿ ಅಲ್ಲ ಬದಲಿಗೆ ನಾಯಕನಾಗಿಯೂ ಎಬಿಡಿ ಎಂಟ್ರಿ ಕೊಡಲಿದ್ದಾರೆ.
ಹೌದು, ಜುಲೈ ತಿಂಗಳಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ (WCL) ಪಂದ್ಯಾವಳಿಯಲ್ಲಿ ಸ್ಪರ್ಧಿಸುವುದಾಗಿ ಎಬಿಡಿ ತಿಳಿಸಿದ್ದಾರೆ. ಜೊತೆಗೆ ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿಯೂ ಜವಾಬ್ದಾರಿ ವಹಿಸಿಕೊಂಡಿರುವುದಾಗಿ ಹೇಳಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಡಿವಿಲಿಯರ್ಸ್, ' ಜುಲೈ ತಿಂಗಳಲ್ಲಿ ಆರಂಭವಾಗಲಿರುವ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ 2025ರಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ನಾನು ಕಣಕ್ಕಿಳಿಯುತ್ತಿದ್ದೇನೆ. ಜುಲೈ 18 ರಿಂದ ಆಗಸ್ಟ್ 2 ರವರೆಗೆ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಐದು ದೇಶಗಳ ಸ್ಟಾರ್ ಆಟಗಾರರು ಭಾಗಿಯಾಗುತ್ತಿದ್ದಾರೆ. ಅವರೊಂದಿಗೆ ಆಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. ಮಿಸ್ಟರ್ 360 ರೀ ಎಂಟ್ರಿ ಘೋಷಿಸುತ್ತಿದ್ದಂತೆ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
2021ರಲ್ಲಿ ನಿವೃತ್ತಿ: ಎಬಿ ಡಿವಿಲಿಯರ್ಸ್ 2004ರಲ್ಲಿ ದಕ್ಷಿಣ ಆಫ್ರಿಕಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. 2018ರಲ್ಲಿ ನಿವೃತ್ತಿ ಘೋಷಿಸಿದ್ದರು. 34ನೇ ವಯಸ್ಸಿನಲ್ಲೇ ಕ್ರಿಕೆಟ್ಗೆ ವಿದಾಯ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ನಂತರ ಎರಡು ವರ್ಷಗಳ ಕಾಲ ಐಪಿಎಲ್, ಬಿಗ್ ಬ್ಯಾಷ್ ಕೆರೆಬಿಯನ್ ಲೀಗ್ಗಳಲ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರೆಸಿದರು. 2021 ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು.
ಕ್ರಿಕೆಟ್ ವೃತ್ತಿಜೀವನ: ಡಿವಿಲಿರ್ಸ್ ತಮ್ಮವೃತ್ತಿ ಜೀವನದಲ್ಲಿ 114 ಟೆಸ್ಟ್ ಪಂದ್ಯಗಳಲ್ಲಿ 8765 ರನ್, 228 ಏಕದಿನ ಸ್ವರೂಪದಲ್ಲಿ 9,577 ರನ್ ಮತ್ತು 78 T20 ಪಂದ್ಯಗಳಲ್ಲಿ 1672 ರನ್ ಗಳಿಸಿದ್ದಾರೆ. ಟೆಸ್ಟ್ನಲ್ಲಿ 22 ಶತಕ ಮತ್ತು ಏಕದಿನದಲ್ಲಿ 25 ಶತಕಗಳನ್ನು ಬಾರಿಸಿದ್ದಾರೆ. IPLನಲ್ಲಿ ಹೆಚ್ಚಿನ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರತಿನಿಧಿಸಿದ ಎಬಿಡಿ ತಂಡದ ಆಪತ್ಬಾಂಧವ ಎನಿಸಿಕೊಂಡಿದ್ದರು. ಐಪಿಎಲ್ನಲ್ಲಿ ಒಟ್ಟು 184 ಪಂದ್ಯಗಳನ್ನು ಆಡಿರುವ ಎಬಿಡಿ 170 ಇನ್ನಿಂಗ್ಸ್ಗಳಲ್ಲಿ 5162 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ ಮತ್ತು 40 ಅರ್ಧಶತಕ ಸೇರಿವೆ.
ಇದನ್ನೂ ಓದಿ: ಫ್ರೀ ಫ್ರೀ ಫ್ರೀ.! ಕೊಹ್ಲಿ ಫ್ಯಾನ್ಸ್ಗೆ ಬಂಪರ್ ಆಫರ್: 10 ಸಾವಿರ ಜನರಿಗೆ ಉಚಿತ ಪ್ರವೇಶ!