ನವದೆಹಲಿ: ಇತ್ತೀಚೆಗೆ 12 ವರ್ಷಗಳ ನಂತರ ರಣಜಿ ಪಂದ್ಯವನ್ನು ಆಡಿದ್ದ ವಿರಾಟ್ ಕೊಹ್ಲಿಗೆ ಕಹಿ ಅನುಭವವಾಗಿತ್ತು. ರೈಲ್ವೇಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ದೆಹಲಿ ಪರ ಕಣಕ್ಕಿಳಿದಿದ್ದ ಕೊಹ್ಲಿ, ಹಿಮಾಂಶು ಸಾಂಗ್ವಾನ್ ಎಸೆದ ಬೌಲಿಂಗ್ನಲ್ಲಿ ಕ್ಲೀನ್ ಬೋಲ್ಡ್ ಆಗಿದ್ದರು. ಇದರೊಂದಿಗೆ ಕೇವಲ 6 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡಿದ್ದರು. ಕೊಹ್ಲಿ ವಿಕೆಟ್ ಪಡೆಯುತ್ತಿದ್ದಂತೆ ಹಿಮಾಂಶು ಸಾಂಗ್ವಾನ್ ಕುರಿತು ಭಾರೀ ಚರ್ಚೆಯಾಗಿದ್ದವು. ವಿಶ್ವದ ಶ್ರೇಷ್ಠ ಬ್ಯಾಟರ್ನನ್ನೇ ಔಟ್ ಮಾಡಿದ ಹಿಮಾಂಶು ಸಾಂಗ್ವಾನ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು.
ಇದೀಗ ಸ್ವತಃ ಸಾಂಗ್ವಾನ್, ವಿರಾಟ್ ಕೊಹ್ಲಿ ವಿಕೆಟ್ ಕುರಿತು ಕೆಲ ಆಸಕ್ತಿಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ರಣಜಿ ಪಂದ್ಯ ಆರಂಭಕ್ಕೂ ಮುನ್ನವೇ ದೆಹಲಿ ಪರ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಆಡುತ್ತಿದ್ದಾರೆ ಎಂದು ನಮ್ಮ ತಂಡಕ್ಕೆ ತಿಳಿಸಲಾಗಿತ್ತು. ಆದರೆ ಈ ಪಂದ್ಯವನ್ನು ನೇರ ಪ್ರಸಾರ ಮಾಡಲಾಗುತ್ತಿದೆ ಎಂಬುದು ಮೊದಲಿಗೆ ನಮಗ್ಯಾರಿಗೂ ಗೊತ್ತಿರಲಿಲ್ಲ. ಬಳಿಕ ಈ ಬಗ್ಗೆಯೂ ನಮಗೆ ತಿಳಿಸಲಾಯಿತು.
ಈ ವೇಳೆ ನನ್ನ ಸಹ ಆಟಗಾರರು ಕೊಹ್ಲಿ ಅವರ ವಿಕೆಟ್ ಪಡೆಯುವ ಜವಾಬ್ದಾರಿ ನಿನ್ನ ಮೇಲಿದೆ. ಹೇಗಾದರೂ ಮಾಡಿ ಅವರನ್ನು ಔಟ್ ಮಾಡಬೇಕು ಎಂದು ಹೇಳಿದರು. ಅಲ್ಲದೆ ಅವರ ವಿಕೆಟ್ ಪಡೆಯುವುದು ಹೇಗೆ ಎಂದು ತಂಡದ ಸದಸ್ಯರೆಲ್ಲ ಚರ್ಚಿಸಿದೆವು.