4 Balls 4 Wicket:ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವುದು ಸುಲಭದ ಮಾತಲ್ಲ, ಆದರೆ ಇಲ್ಲೊಬ್ಬ ಬೌಲರ್ ಡಬಲ್ ಹ್ಯಾಟ್ರಿಕ್ ವಿಕೆಟ್ ಪಡೆದು ಚರಿತ್ರೆ ಸೃಷ್ಟಿಸಿದ್ದಾರೆ.
ಹೌದು, ಐಸಿಸಿ ಪುರುಷರ T20 ವಿಶ್ವಕಪ್ ಅಮೆರಿಕ ಸಬ್ ರೀಜಿನಲ್ ಕ್ವಾಲಿಫೈಯರ್ ಪಂದ್ಯದಲ್ಲಿ ಈ ದಾಖಲೆ ನಿರ್ಮಾಣವಾಗಿದೆ. ಸೈಮನ್ ಐಲ್ಯಾಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಅರ್ಜೆಂಟೀನಾದ ಆಟಗಾರ ಹೆರ್ನಾನ್ ಫೆನ್ನೆಲ್ ಡಬಲ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಫೆನೆಲ್ 4 ಎಸೆತಗಳಲ್ಲಿ 4 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದರು. ಅವರು ಓವರ್‌ನ ಮೂರನೇ ಎಸೆತದಲ್ಲಿ ಟ್ರಾಯ್ ಟೇಲರ್ ಅವರನ್ನು ಔಟ್ ಮಾಡಿದರು ನಂತರ ಮುಂದಿನ ಮೂರು ಎಸೆತಗಳಲ್ಲಿ ಅಲೆಸ್ಟೈರ್ ಇಫ್ಲೆ, ರೊನಾಲ್ಡ್ ಎಬ್ಯಾಂಕ್ಸ್ ಮತ್ತು ಅಲೆಜಾಂಡ್ರೊ ಮಾರಿಸ್ ಅವರ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಚರಿತ್ರೆ ಸೃಷ್ಟಿಸಿದ್ದಾರೆ.
ಇದರೊಂದಿಗೆ ಈ ಪಂದ್ಯದಲ್ಲಿ ಫೆನ್ನೆಲ್ ಒಟ್ಟು 5 ವಿಕೆಟ್‌ಗಳನ್ನು ಪಡೆದು ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಅವರು ತಮ್ಮ ವಿಧ್ವಂಸಕ ಬೌಲಿಂಗ್ ಮೂಲಕ ಕೇವಲ 14 ರನ್ ನೀಡಿದರು. ಈ ಮೂಲಕ ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಡಬಲ್ ಹ್ಯಾಟ್ರಿಕ್ಗಳಿಸಿದ ಆರನೇ ಬೌಲರ್ ಎನಿಸಿಕೊಂಡರು. ಲಸಿತ್ ಮಾಲಿಂಗ, ರಶೀದ್ ಖಾನ್, ಕರ್ಟಿಸ್ ಕಾನ್ಫರ್, ಜೇಸನ್ ಹೋಲ್ಡರ್ ಮತ್ತು ವಾಸಿಮ್ ಯಾಕೋಬ್ ಒಳಗೊಂಡಿರುವ ಬೌಲರ್‌ಗಳ ಪಟ್ಟಿಗೆ ಫೆನ್ನೆಲ್ ಸೇರಿದ್ದಾರೆ.