ಮೈಸೂರು: "ಕೆಟ್ಟದ್ದು ಬರೋದೇ ಒಳ್ಳೆಯ ದಾರಿಯಲ್ಲಿ ಕರೆದುಕೊಂಡು ಹೋಗುವುದಕ್ಕೆ, ಒಳ್ಳೆಯ ದಿನಗಳನ್ನು ತೋರಿಸುವುದಕ್ಕೆ. ಏನೇ ನೋವಾಗಿದ್ದರು ಎಲ್ಲರಿಗೂ ನೆಮ್ಮದಿ, ಸಮಾಧಾನ ಸಿಕ್ಕಿದೆ. ಕಾಲಾಯ ತಸ್ಮೈ ನಮಃ, ದೇವರು ನೋಡಿಕೊಳ್ಳುತ್ತಾನೆ. ದರ್ಶನ್ ಆಸ್ಪತ್ರೆಯಿಂದ ಬಂದ ಬಳಿಕ ಅವರನ್ನು ಭೇಟಿ ಮಾಡುತ್ತೇನೆ" ಎಂದು ನಟ ಶ್ರೀಮುರಳಿ ಹೇಳಿದರು.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ಗೆ ಜಾಮೀನು ಸಿಕ್ಕ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು.
ಚಾಮುಂಡೇಶ್ವರಿ ದರ್ಶನ ಪಡೆದ ಶ್ರೀಮುರಳಿ: ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಟ ಶ್ರೀಮುರಳಿ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಶ್ರೀಮುರಳಿಯನ್ನು ನೋಡಿದ ಅಭಿಮಾನಿಗಳು ಹಾಗೂ ಸಾರ್ವಜನಿಕರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದರು. ಕೆಲ ಅಭಿಮಾನಿಗಳು ಶ್ರೀಮುರಳಿ ಜೊತೆ ಫೋಟೋ ತೆಗೆಸಿಕೊಂಡರು.
ನಂತರ ನಟ ಶಿವರಾಜ್ ಕುಮಾರ್ ಹಾಗೂ ಕುಟುಂಬಸ್ಥರು ನಡೆಸುತ್ತಿರುವ ಶಕ್ತಿಧಾಮಕ್ಕೆ ತೆರಳಿ, ಅಲ್ಲಿನ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡರು. ಇದರ ಜೊತೆಗೆ ಅಭಿಮಾನಿಗಳು ಶ್ರೀಮುರಳಿ ಅವರಿಂದ ಕೇಕ್ ಕಟ್ ಮಾಡಿಸಿ, ಹಾರ ಹಾಕಿ ಹುಟ್ಟುಹಬ್ಬ ಆಚರಿಸಿದರು.
ಜೂನ್ ತಿಂಗಳಲ್ಲಿ ನಡೆದಿದ್ದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ನಟಿ ಪವಿತ್ರಾಗೌಡ ಸೇರಿ ಎಲ್ಲಾ ಆರೋಪಿಗಳಿಗೆ ಕಳೆದ ಶುಕ್ರವಾರ (ಡಿ. 15) ರಂದು ಹೈಕೋರ್ಟ್ ಜಾಮೀನು ನೀಡಿತ್ತು. ಇದಕ್ಕೂ ಮುನ್ನ ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್ ಅವರಿಗೆ ಅನಾರೋಗ್ಯ ಸಮಸ್ಯೆ ಕಾಡಿತ್ತು. ಹೀಗಾಗಿ ಅವರು ನ್ಯಾಯಾಲಯದ ಮೊರೆ ಹೋಗಿ, ತನಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ. ಅದಕ್ಕಾಗಿ ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಈ ಮನವಿಯನ್ನು ಪರಿಗಣಿಸಿದ್ದ ಹೈಕೋರ್ಟ್ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿತ್ತು. ದರ್ಶನ್ ಅವರು ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ರೋರಿಂಗ್ ಸ್ಟಾರ್ ಶ್ರೀಮುರಳಿ ಜನ್ಮದಿನಕ್ಕೆ ಹೊಸ ಸಿನಿಮಾ ಅನೌನ್ಸ್: ತೆಲುಗು ಪ್ರೊಡಕ್ಷನ್ ಹೌಸ್ ಜೊತೆ ಕೈಜೋಡಿಸಿದ ತಾರೆ