ಬೆಳಗಾವಿ: ಬಹಿರಂಗವಾಗಿ ಪರಸ್ಪರ ಅಸಮಾಧಾನ ವ್ಯಕ್ತಪಡಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖಾಮುಖಿಯಾಗಿ ಕುಶಲೋಪರಿ ವಿಚಾರಿಸಿದ ಪ್ರಸಂಗ ಇಂದು ಸದನದಲ್ಲಿ ನಡೆಯಿತು.
ಭಿನ್ನಮತದ ಹಿನ್ನೆಲೆ ಪರಸ್ಪರ ವೈಮನಸ್ಸು ಹೊಂದಿದ್ದವರು ಸೋಮವಾರ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ವಿಜಯೇಂದ್ರ ಪರಸ್ಪರ ನಮಸ್ಕರಿಸಿ, ಮಾತನಾಡಿಸುವ ಮೂಲಕ ಗಮನ ಸೆಳೆದರು. ನಿನ್ನೆ ಬೆಳಗ್ಗೆ ಸದನದಲ್ಲಿ ಈ ಅಪರೂಪದ ಕ್ಷಣ ಕಂಡುಬಂದಿತ್ತು.
ಸೋಮವಾರ ಸದನದಲ್ಲಿ ತಾವೇ ಖುದ್ದಾಗಿ ಯತ್ನಾಳ್ ಅವರನ್ನು ಮಾತನಾಡಿಸಿದ್ದ ವಿಜಯೇಂದ್ರ, ಶಾಸಕರಿಗಾಗಿ ತಾವು ಆಯೋಜಿಸಿದ್ದ ಔತಣಕೂಟಕ್ಕೆ ಆಹ್ವಾನಿಸಿದ್ದರು. ಯತ್ನಾಳ್ ಅವರನ್ನು ನೋಡಿ ಕೈಮುಗಿದು ಔತಣಕೂಟಕ್ಕೆ ಬರುವಂತೆ ಕೋರಿದ್ದರು. ಸದನದ ವಿಪಕ್ಷಗಳ ಆಸನದ ಮೊದಲ ಸಾಲಿನಲ್ಲಿ ಕುಳಿತಿದ್ದ ಬಿ. ವೈ. ವಿಜಯೇಂದ್ರ ಅವರು ಯತ್ನಾಳ್ ಕಡೆ ತಿರುಗಿ ನಮಸ್ಕರಿಸಿ, ಔತಣಕೂಟಕ್ಕೆ ಬರುವಂತೆ ಆಹ್ವಾನಿಸಿದ್ದರು. ಅದಕ್ಕೆ ನಮಸ್ಕರಿಸಿ, ನಗು ಮೊಗದಲ್ಲಿ ಆಗಲಿ ಅಂತ ಹೇಳಿದ್ದ ಯತ್ನಾಳ್, ಔತಣ ಕೂಟಕ್ಕೆ ಹೋಗಿರಲಿಲ್ಲ.
ಉಭಯ ನಾಯಕರ ಮಧ್ಯೆ ತೀವ್ರ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದರಿಂದಾಗಿ ಹೈಕಮಾಂಡ್ ಮಧ್ಯಪ್ರವೇಶಿಸಿತ್ತು. ಆದರೂ ಕೂಡ ಯಾವುದೇ ಪ್ರಯೋಜನ ಆಗಿರಲಿಲ್ಲ. ಇಬ್ಬರು ನಾಯಕರು ಪರಸ್ಪರ ಮಾತನಾಡಿರಲಿಲ್ಲ. ಇದೀಗ ವಿಜಯೇಂದ್ರ ಅವರು ತಾವೇ ಒಂದು ಹೆಜ್ಜೆ ಮುಂದಿಟ್ಟು ಯತ್ನಾಳ್ ಅವರನ್ನು ಮಾತನಾಡಿಸಿದ್ದಾರೆ.
ಮುಖಾಮುಖಿಯಾಗಿ ನಗು ಮೊಗದೊಂದಿಗೆ ಇಬ್ಬರೂ ನಮಸ್ಕರಿಸಿರುವುದು ಮತ್ತು ಪರಸ್ಪರ ಚುಟುಕು ಮಾತುಕತೆ ಭಿನ್ನರಾಗ ತಣ್ಣಗಾಗುವ ಲಕ್ಷಣವೇ ಎಂಬ ಕುತೂಹಲ ಮೂಡಿಸಿದೆ.
ಇದಕ್ಕೂ ಮುನ್ನ ಡಿಸೆಂಬರ್ 13 ರಂದು ಸ್ಪೀಕರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಕೂಡ ವಿಜಯೇಂದ್ರ ಮತ್ತು ಯತ್ನಾಳ್ ಮುಖಾಮುಖಿಯಾಗಿದ್ದರು. ಈ ವೇಳೆ ಯತ್ನಾಳ್ಗೆ ವಿಜಯೇಂದ್ರ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು.
ಜಮೀರ್-ಯತ್ನಾಳ್ ಜುಗಲ್ ಬಂದಿ!
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸುವರ್ಣಸೌಧ ಕಚೇರಿಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಭೇಟಿ ಮಾಡಿ ಕ್ಷೇತ್ರದ ಅಭಿವೃದ್ಧಿ ಯೋಜನೆ ಕುರಿತು ಚರ್ಚಿಸಿದರು. ಈ ವೇಳೆ ಯತ್ನಾಳ್ ಅವರನ್ನು ಪ್ರೀತಿಯಿಂದಲೇ ಬರಮಾಡಿಕೊಂಡ ಜಮೀರ್, ಕಾಫಿ ಕೊಟ್ಟು ಉಪಚರಿಸಿದರು.
ವಕ್ಫ್ ವಿಚಾರವಾಗಿ ಕಳೆದ ಒಂದು ತಿಂಗಳಿಂದ ಸಚಿವ ಜಮೀರ್ ವಿರುದ್ಧ ಮುಗಿಬೀಳುತ್ತಿರುವ ಯತ್ನಾಳ್ ಇಂದು ಸಚಿವರ ಜೊತೆ ಆಪ್ತತೆಯಿಂದ ಮಾತುಕತೆ ನಡೆಸಿರುವುದು ಗಮನ ಸೆಳೆಯಿತು. ಸದನದ ಒಳಗೆ ಕಳೆದ ವಾರ ವಕ್ಫ್ ವಿಚಾರವಾಗಿ ಯತ್ನಾಳ್ ಅವರು ಸರ್ಕಾರ ಹಾಗೂ ಸಚಿವ ಜಮೀರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
ಇಬ್ಬರೂ ನಾಯಕರೂ ಇಂದು ಭೇಟಿಯಾಗಿ ಮಾತುಕತೆ ನಡೆಸಿರುವ ಫೋಟೋ ಸಾಕಷ್ಟು ಗಮನ ಸೆಳೆದಿದೆ.
ಇದನ್ನೂ ಓದಿ: ಮುಖ್ಯಮಂತ್ರಿಗೆ ಸದನದಲ್ಲಿ ಸವಾಲು ಹಾಕಿದ್ದೇನೆ: ವಿಜಯೇಂದ್ರ