ಕಳೆದ ಕೆಲ ತಿಂಗಳುಗಳಿಂದ ಜಮ್ಮು ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗುತ್ತಿರುವುದು ಕಳವಳವನ್ನುಂಟು ಮಾಡಿದೆ. ಭಯೋತ್ಪಾದಕರ ದಾಳಿಗಳಿಂದ ಯೋಧರು ಸಾವಿಗೀಡಾಗುವುದು ಹೆಚ್ಚಾಗುತ್ತಿದೆ. ಇದರಿಂದ ರಾಜಕೀಯ ವಲಯ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಹೀಗಾಗಿ ಸರ್ಕಾರ ಹಾಗೂ ಭದ್ರತಾ ಪಡೆಗಳು ಭಯೋತ್ಪಾದಕರನ್ನು ಮಟ್ಟ ಹಾಕುವ ಒತ್ತಡದಲ್ಲಿ ಸಿಲುಕಿವೆ.
ಇದೇ ಸಮಯದಲ್ಲಿ ಕಾಶ್ಮೀರ ಕಣಿವೆಯಲ್ಲಿ ಉಗ್ರ ದಾಳಿಗಳು ಕಡಿಮೆ ಆಗಿರುವುದು ಗಮನಾರ್ಹ. ಆದರೆ, ಹಾಗಂತ ಕಣಿವೆಯಲ್ಲಿ ಭಯೋತ್ಪಾದನೆ ಸಂಪೂರ್ಣವಾಗಿ ನಿರ್ನಾಮವಾಗಿದೆ ಎಂದರ್ಥವಲ್ಲ, ಕನಿಷ್ಠ ಅದನ್ನು ತೀರಾ ಕಡಿಮೆ ಮಟ್ಟದಲ್ಲಿ ನಿಯಂತ್ರಿಸಲಾಗಿರುವುದು ವಾಸ್ತವ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಗೆ ದೊಡ್ಡ ಮಟ್ಟದ ಏಟು ಕೊಡದ ಹೊರತು ಅದು ಕಡಿಮೆಯಾಗಲಾರದು. ಇನ್ನು ಎರಡೂ ದೇಶಗಳ ಮಧ್ಯೆ ಈ ವಿಷಯದಲ್ಲಿ ಯಾವುದೇ ಸಾಮಾನ್ಯ ಸಹಮತವಿಲ್ಲದ ಕಾರಣದಿಂದ ಮಾತುಕತೆಗಳು ಕೂಡ ಯಾವುದೇ ಪ್ರಯೋಜನಕ್ಕೆ ಬರಲಾರವು.
ಭಯೋತ್ಪಾದನೆ ಹೆಚ್ಚಿನ ಭದ್ರತೆ ಇರುವ ಪ್ರದೇಶಗಳಿಂದ ಕಡಿಮೆ ಭದ್ರತೆ ಹೊಂದಿರುವ ಪ್ರದೇಶಗಳಿಗೆ ಚಲಿಸುತ್ತದೆ. ಇದು ನೈಸರ್ಗಿಕ ಪ್ರಕ್ರಿಯೆ ಮತ್ತು ಜಮ್ಮು ವಲಯದಲ್ಲಿ ಹೆಚ್ಚಿದ ಭಯೋತ್ಪಾದನೆಗೆ ಇದೂ ಒಂದು ಕಾರಣವಾಗಿದೆ. ಅಲ್ಲದೇ ಭಯೋತ್ಪಾದಕರು ತಮಗೆ ಗರಿಷ್ಠ ಅನುಕೂಲ ನೀಡುವ ಭೂಪ್ರದೇಶವನ್ನು ಸಹ ಆಯ್ಕೆ ಮಾಡುತ್ತಾರೆ.
ಜಮ್ಮು ವಿಷಯದಲ್ಲಿ ನೋಡುವುದಾದರೆ - ಅಲ್ಲಿನ ದಟ್ಟ ಕಾಡುಗಳು, ಅಡಗುತಾಣಗಳಾಗಿ ಬಳಸಬಹುದಾದ ಗುಹೆಗಳು ಮತ್ತು ಪಾಕಿಸ್ತಾನದ ಗಡಿ ಹತ್ತಿರವಾಗಿರುವುದು ಭಯೋತ್ಪಾದಕರಿಗೆ ಅನುಕೂಲಕರವಾಗಿವೆ. ಇಂಥ ಭೂಪ್ರದೇಶಗಳಲ್ಲಿ ಲೈವ್ ಆಗಿ ಮಾಹಿತಿ ನೀಡಬಲ್ಲ ಡ್ರೋನ್ ತಂತ್ರಜ್ಞಾನವು ಅಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಇದಲ್ಲದೇ ಈ ಪ್ರದೇಶದಲ್ಲಿರಬಹುದಾದ ಭಯೋತ್ಪಾದಕರನ್ನು ಬೆಂಬಲಿಸುವ ಜನ ಇರಬಹುದು. ಹಣಕ್ಕಾಗಿ ಅಥವಾ ಸಿದ್ಧಾಂತಕ್ಕಾಗಿ ಇವರು ಭಯೋತ್ಪಾದಕರನ್ನು ಬೆಂಬಲಿಸುತ್ತಿರಬಹುದು. ಇಂಥ ಬೆಂಬಲಿಗರು ಭದ್ರತಾ ಪಡೆಗಳ ಚಲನೆ, ಲಾಜಿಸ್ಟಿಕ್ಸ್ ಮುಂತಾದ ಮಾಹಿತಿಗಳನ್ನು ಅವರಿಗೆ ನೀಡುತ್ತಿರಬಹುದು. ಇವೆಲ್ಲ ಕಾರಣಗಳಿಂದ ಭಯೋತ್ಪಾದಕರನ್ನು ಪ್ರತ್ಯೇಕಿಸುವುದು ಕಷ್ಟವಾಗುತ್ತದೆ ಮತ್ತು ಭದ್ರತಾ ಪಡೆಗಳ ಕಾರ್ಯಾಚರಣೆಗೆ ಸವಾಲು ಎದುರಾಗುತ್ತವೆ.
ಕೆಲ ಪ್ರದೇಶಗಳಲ್ಲಿ ಜಾರಿಯಲ್ಲಿರುವ ಎಎಫ್ಎಸ್ಪಿಎ (ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ) ತೆಗೆದುಹಾಕಲು ಸರ್ಕಾರ ಯೋಚಿಸುತ್ತಿರುವ ಮಟ್ಟಕ್ಕೆ ಸನ್ನಿವೇಶ ಸುಧಾರಿಸಿದೆ ಎಂಬ ಮಾತುಗಳು ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಗಳ ಸಂದರ್ಭಗಳಲ್ಲಿ ಕೇಳಿ ಬಂದಿದ್ದವು. ಭದ್ರತಾ ಪಡೆಗಳ ಸಂಖ್ಯೆಯನ್ನು ಸೂಕ್ತ ಮಟ್ಟಕ್ಕೆ ತರುವ ನಿಟ್ಟಿನಲ್ಲಿ ರಾಷ್ಟ್ರೀಯ ರೈಫಲ್ ಬೆಟಾಲಿಯನ್ ಗಳಲ್ಲಿನ ಕೆಲ ತುಕಡಿಗಳನ್ನು ಕಡಿಮೆ ಮಾಡಬಹುದು ಎಂಬ ವದಂತಿ ಇತ್ತು. ಆದರೆ ಇವು ಅವಸರದ ಮೌಲ್ಯಮಾಪನಗಳಾಗಿದ್ದವು. ಲಡಾಖ್ನಲ್ಲಿ ಚೀನಾ ಒಳನುಸುಳಿತ್ತು. ಆಗ ಜಮ್ಮು ವಲಯದಲ್ಲಿ ಭಯೋತ್ಪಾದನೆ ಕಡಿಮೆಯಾಗಿದೆ ಎಂಬ ಊಹೆಯ ಮೇಲೆ ಅಲ್ಲಿನ ಯೋಧರನ್ನು ಲಡಾಖ್ಗೆ ನಿಯೋಜನೆ ಮಾಡಲಾಗಿತ್ತು. ಆದರೆ, ಇದು ಅಲ್ಪಾವಧಿಯ ಮೌಲ್ಯಮಾಪನದ ಆಧಾರದ ಮೇಲೆ ಕೈಗೊಂಡ ಅವಸರದ ಕ್ರಮವಾಗಿತ್ತು.
ಕಾಶ್ಮೀರ ಭಯೋತ್ಪಾದನೆ ವಿಶಾಲ ದೃಷ್ಟಿಯಿಂದ ನೋಡಬೇಕಾಗಿದೆ:ಯೋಧರನ್ನು ಸ್ಥಳಾಂತರಿಸಿದ್ದು ಜಮ್ಮು ಭಾಗದಲ್ಲಿ ಭದ್ರತಾ ವಿಷಯದಲ್ಲಿ ಒಂದು ರೀತಿಯ ಖಾಲಿತನ ಉಂಟಾಗುವಂತಾಯಿತು. ಬಹುಶಃ ಉಗ್ರಗಾಮಿಗಳು ಇದೇ ಅವಕಾಶವನ್ನು ಬಳಸಿಕೊಂಡರು. ಸ್ಥಳಾಂತರಗೊಂಡ ಯೋಧರನ್ನು ಮರಳಿ ಕರೆತರಲಿಲ್ಲವಾದರೂ, ಅಲ್ಲಿ ಈಗ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ವಿಶಾಲ ದೃಷ್ಟಿಕೋನದಿಂದ ನೋಡುವ ಅಗತ್ಯವೂ ಇದೆ. ಸನ್ನಿವೇಶಗಳು ಕೆಟ್ಟದಾಗಿವೆ ಮತ್ತು ಹಳೆಯ ಪರಿಸ್ಥಿತಿಗಳು ಮರುಕಳಿಸುತ್ತಿವೆ. ಆದಾಗ್ಯೂ ಇಲ್ಲಿ ಏನೇ ಮಾಡಿದರೂ ತಾಳ್ಮೆಯಿಂದ ಮಾಡಬೇಕಾಗುತ್ತದೆ. ಅವಸರದಿಂದ ಏನನ್ನೂ ಮಾಡಲು ಸಾಧ್ಯವಿಲ್ಲ ಮತ್ತು ಮಾಡಕೂಡದು. ಪರಿಸ್ಥಿತಿಗಳು ನಿಧಾನವಾಗಿ ಸುಧಾರಿಸಬಹುದಾದರೂ, ಆ ಅವಧಿಯಲ್ಲಿ ಯೋಧರು ಸಾವು ನೋವು ಎದುರಿಸಬೇಕಾಗುತ್ತದೆ. ಯೋಧರ ಸಂಖ್ಯೆಯನ್ನು ಹೆಚ್ಚಿಸುವುದರಿಂದ ಮಾತ್ರವೇ ಭಯೋತ್ಪಾದನೆಯನ್ನು ಪರಿಹರಿಸಲಾಗುವುದಿಲ್ಲ.
ಗುಪ್ತಚರ ಗ್ರಿಡ್ ಸ್ಥಾಪಿಸುವುದು, ಭೂಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸುವುದು ಮತ್ತು ನಿರಂತರ ಕಾರ್ಯಾಚರಣೆಯಿಂದ ಪರಿಸ್ಥಿತಿಗಳನ್ನು ಹತೋಟಿಗೆ ತರಬಹುದು. ಈ ಪ್ರದೇಶದಲ್ಲಿ ನಿಯೋಜನೆಗೊಂಡ ಪಡೆಗಳಿಗೆ ತರಬೇತಿ ನೀಡಲು ಮತ್ತು ಆ ಪ್ರದೇಶಗಳ ಬಗ್ಗೆ ಅವರು ಪರಿಚಿತರಾಗಲು ಸಮಯ ಬೇಕಾಗುತ್ತದೆ. ಇದರಿಂದ ಸಾವುನೋವುಗಳು ಅತ್ಯಂತ ಕನಿಷ್ಠ ಮಟ್ಟದಲ್ಲಿರುವುದನ್ನು ಖಚಿತಪಡಿಸಿಕೊಳ್ಳಬಹುದು. ಗುಪ್ತಚರ ಗ್ರಿಡ್ಗಳನ್ನು ಪುನಃ ಸಕ್ರಿಯಗೊಳಿಸಬೇಕಾಗಿದೆ. ಭೂಪ್ರದೇಶ ಮತ್ತು ಕಾರ್ಯಾಚರಣೆಯ ನಿರೀಕ್ಷಿತ ಸ್ವರೂಪದ ಬಗ್ಗೆ ಸಾಕಷ್ಟು ಪರಿಚಿತವಾಗಿರುವ ವಿಶೇಷ ಪಡೆಗಳ ನಿಯೋಜನೆಯನ್ನು ವರದಿಗಳು ಉಲ್ಲೇಖಿಸುತ್ತವೆ. ಅವು ಬಲ-ಗುಣಕಗಳಾಗಿರುತ್ತವೆ. ಸಂಭಾವ್ಯ ಅಡಗುತಾಣಗಳು ಸೇರಿದಂತೆ ಭೂಪ್ರದೇಶದ ಬಗ್ಗೆ ಚೆನ್ನಾಗಿ ತಿಳಿದಿರುವ ಸ್ಥಳೀಯ ಗ್ರಾಮ ರಕ್ಷಣಾ ಕಾವಲುಗಾರರನ್ನು ಸಂಯೋಜಿಸಲಾಗುತ್ತಿದೆ.
ಭಯೋತ್ಪಾದಕರು ಹೊಸ ತಂತ್ರಜ್ಞಾನಗಳನ್ನು ಬಳಸುತ್ತಿದ್ದರೂ, ಎಲೆಕ್ಟ್ರಾನಿಕ್ ಮೇಲ್ವಿಚಾರಣೆ ಪ್ರಯೋಜನಕಾರಿಯಾಗಿದೆ. ಸಂಭಾವ್ಯ ಒಳನುಸುಳುವಿಕೆ ಪ್ರಯತ್ನಗಳನ್ನು ಕಡಿಮೆ ಮಾಡಲು ಭಯೋತ್ಪಾದನಾ ವಿರೋಧಿ ಗ್ರಿಡ್ ಅನ್ನು ಬಲಪಡಿಸಬೇಕಿದೆ. ಇದರಿಂದ ಭಯೋತ್ಪಾದಕರ ಬೆಂಬಲಿಗರನ್ನು ಕೂಡ ದೂರ ಮಾಡಬಹುದು. ಆಡಳಿತದ ಎಲ್ಲಾ ಅಂಶಗಳನ್ನು ಒಳಗೊಂಡ ಯೋಜನೆಯ ಆಧಾರದ ಮೇಲೆ ಕಾರ್ಯಾಚರಣೆಗಳನ್ನು ಕಾರ್ಯಗತಗೊಳಿಸಲಾಗುವುದು ಎಂಬುದನ್ನು ಇದರಿಂದ ಖಚಿತಪಡಿಸಿಕೊಳ್ಳಬಹುದು. ಅದೇ ಸಮಯದಲ್ಲಿ ನಮ್ಮ ನಾಗರಿಕರು ಬಲಿಯಾಗದಂತೆ ಕೂಡ ನೋಡಿಕೊಳ್ಳುವ ಅವಶ್ಯಕತೆಯಿದೆ.