ನವದೆಹಲಿ: ಭಾರತ-ಬಾಂಗ್ಲಾದೇಶ ಗಡಿಯುದ್ದಕ್ಕೂ ಬಹುತೇಕ ಪ್ರದೇಶಗಳಲ್ಲಿನ ಗಡಿ ಬೇಲಿಯು ಹಾಳಾದ ಮತ್ತು ತುಕ್ಕು ಹಿಡಿದ ಸ್ಥಿತಿಯಲ್ಲಿದ್ದು, ಅಗತ್ಯವಿರುವ ಕಡೆಗಳಲ್ಲಿ ಮಣ್ಣು ತುಂಬಿಸಿ ತಕ್ಷಣವೇ ಗಡಿಬೇಲಿಗಳನ್ನು ದುರಸ್ತಿಗೊಳಿಸುವುದು ಅಗತ್ಯವಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್ಎಫ್) ನಡೆಸಿದ ಆಂತರಿಕ ಮೌಲ್ಯಮಾಪನ ಸಮೀಕ್ಷೆ ಹೇಳಿದೆ. ಭಾರತ - ಬಾಂಗ್ಲಾದೇಶ ಮಧ್ಯದ ಸಂಪೂರ್ಣ ಗಡಿಗೆ ಬೇಲಿ ಹಾಕಲು ಕೇಂದ್ರ ಸರ್ಕಾರ ಯತ್ನಿಸುತ್ತಿರುವ ಮಧ್ಯದಲ್ಲೇ ಇಂಥದೊಂದು ವರದಿ ಬಂದಿರುವುದು ಗಮನಾರ್ಹ.
ಗಡಿಯಾಚೆಯಿಂದ ಅಕ್ರಮ ವಲಸೆ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆಗಳು ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ದೃಷ್ಟಿಯಿಂದ ಹಂತ ಹಂತವಾಗಿ ಫ್ಲಡ್ ಲೈಟ್ಗಳೊಂದಿಗೆ ಗಡಿ ಬೇಲಿ ನಿರ್ಮಾಣಕ್ಕೆ ಭಾರತ ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ಭಾರತ-ಬಾಂಗ್ಲಾದೇಶ ಗಡಿಯ ಒಟ್ಟು ಉದ್ದ 4096.7 ಕಿ.ಮೀ ಆಗಿದ್ದು, ಇದರಲ್ಲಿ 3196.705 ಕಿ.ಮೀ ಗಡಿಗೆ ಭೌತಿಕ ಬೇಲಿ ಹಾಕಲಾಗಿದೆ.
"ಹಲವಾರು ಕಡೆಗಳಲ್ಲಿ ಮುಳ್ಳು ತಂತಿ ಸಡಿಲವಾಗಿದ್ದು, ಅನೇಕ ಸ್ಥಳಗಳಲ್ಲಿ ಮುರಿದು ಹೋಗಿದೆ. ಪಿಕೆಟ್, ಸ್ಪೈಕ್ ಗಳು, ಕನ್ಸರ್ಟಿನಾ ಕಾಯಿಲ್, ಮುಳ್ಳು ತಂತಿಯಂತಹ ಬೇಲಿಗಳು ತುಕ್ಕು ಹಿಡಿದಿವೆ ಮತ್ತು ಪಿಕೆಟ್ನ ತಳಭಾಗಕ್ಕೆ ಸರಿಯಾಗಿ ಕಾಂಕ್ರೀಟ್ ಹಾಕಲಾಗಿಲ್ಲ. ಎರಡೂ ಬದಿಗಳ ಕೆಲವು ಭಾಗಗಳಲ್ಲಿ ಮುಳ್ಳು ತಂತಿ ಸಡಿಲವಾಗಿದೆ ಮತ್ತು ಅದನ್ನು ಬಲಪಡಿಸುವ ಅಗತ್ಯವಿದೆ" ಎಂದು ವರದಿ ಹೇಳಿದೆ. ಗೃಹ ಸಚಿವಾಲಯಕ್ಕೆ ಸಲ್ಲಿಸಲಾಗಿರುವ ಈ ವರದಿಯ ಪ್ರತಿ ಈಟಿವಿ ಭಾರತ್ ಗೆ ಲಭ್ಯವಾಗಿದೆ.
ಹಲವು ಕಂಪನಿಗಳಿಗೆ ಬೇಲಿ ಅಳವಡಿಕೆ ಕಾಮಗಾರಿ ಗುತ್ತಿಗೆ: ಇಂಡೋ-ಬಾಂಗ್ಲಾ ಗಡಿ ಉದ್ದಕ್ಕೂ ವಿವಿಧ ಸ್ಥಳಗಳಲ್ಲಿ ವಿಭಿನ್ನವಾಗಿ ಗಡಿ ಬೇಲಿಗಳನ್ನು ಅಳವಡಿಸಬೇಕಿದೆ. ಬೇಲಿ ಹಾಕುವ ಕಾಮಗಾರಿಗಳನ್ನು ನ್ಯಾಷನಲ್ ಪ್ರಾಜೆಕ್ಟ್ಸ್ ಕನ್ ಸ್ಟ್ರಕ್ಷನ್ ಕಾರ್ಪೊರೇಷನ್ ಲಿಮಿಟೆಡ್ (ಎನ್ಪಿಸಿಸಿ), ನ್ಯಾಷನಲ್ ಬಿಲ್ಡಿಂಗ್ಸ್ ಕನ್ ಸ್ಟ್ರಕ್ಷನ್ ಕಾರ್ಪೊರೇಷನ್ (ಎನ್ಬಿಸಿಸಿ), ಎಂಜಿನಿಯರಿಂಗ್ ಪ್ರಾಜೆಕ್ಟ್ಸ್ (ಇಂಡಿಯಾ) ಲಿಮಿಟೆಡ್ (ಇಪಿಐಎಲ್) ನಂಥ ವಿವಿಧ ಏಜೆನ್ಸಿಗಳಿಗೆ ವಹಿಸಲಾಗಿದೆ.
"ಮಣ್ಣಿನ ಕೆಲಸವನ್ನು ಮರುಹೊಂದಿಸಿದ ನಂತರ ಗಡಿ ಬೇಲಿಯನ್ನು ತಕ್ಷಣ ದುರಸ್ತಿ ಮಾಡಬೇಕಾಗಿದೆ" ಎಂದು ಸಮೀಕ್ಷೆ ಸೂಚಿಸಿದೆ. ಈ ಹಿಂದೆ ಎನ್ಪಿಸಿಸಿಗೆ ವಹಿಸಲಾಗಿದ್ದ 2351/15-ಎಸ್ 2364 / ಎಂ ನಿಂದ 74.580 ಕಿ.ಮೀ ಉದ್ದದ ಬೇಲಿ ಕಾಮಗಾರಿಯನ್ನು ಇತ್ತೀಚೆಗೆ ಎನ್ಬಿಸಿಸಿಗೆ ಹಸ್ತಾಂತರಿಸಲಾಗಿದೆ. ಈ ಕೆಲಸವನ್ನು 2025ರೊಳಗೆ ಮುಗಿಸಬೇಕು ಎಂಬ ಗಡುವು ವಿಧಿಸಲಾಗಿದ್ದರೂ ನಿರ್ಮಾಣ ಸಂಸ್ಥೆಯಿಂದ ಇನ್ನೂ ಕೆಲಸ ಪ್ರಾರಂಭವಾಗಿಲ್ಲ" ಎಂದು ವರದಿ ತಿಳಿಸಿದೆ. "ಕಾಮಗಾರಿಗಳನ್ನು ವಹಿಸುವ ಸಮಯದಲ್ಲಿ ಅಲೈನ್ ಮೆಂಟ್ ಪ್ಲಾನ್ ಯೋಜನೆ ಮತ್ತು ಭೂ ದಾಖಲೆಗಳನ್ನು ನಿರ್ಮಾಣ ಸಂಸ್ಥೆ ಎನ್ಪಿಸಿಸಿ ಇನ್ನೂ ಹಸ್ತಾಂತರಿಸಿಲ್ಲ" ಎಂದು ವರದಿ ತಿಳಿಸಿದೆ.
ಈ ಹಿಂದೆ ಎನ್ಪಿಸಿಸಿಗೆ ವಹಿಸಲಾಗಿದ್ದ ಬಿಪಿ 2350/ಎಂಪಿಯಿಂದ 2364/ಎಂಪಿ ನಡುವೆ 20 ಬಿಎನ್ ಬಿಎಸ್ಎಫ್ನ ಎಒಆರ್ ನಲ್ಲಿನ ಕೆಲಸವನ್ನು ಐಬಿಬಿಎಫ್ ಗೆ ವಹಿಸಲಾಗಿದೆ. ಆದಾಗ್ಯೂ, ಈ ಪ್ಯಾಚ್ನಲ್ಲಿ ಐಬಿಬಿಎಫ್ ಕಾಮಗಾರಿ ಆರಂಭಿಸಲು ವಿಫಲವಾದ ಹಿನ್ನೆಲೆಯಲ್ಲಿ ಈ ಕೆಲಸವನ್ನು ಇತ್ತೀಚೆಗೆ ಎಂಎಚ್ಎ ಎನ್ಬಿಸಿಸಿಗೆ ವರ್ಗಾಯಿಸಿದೆ. ಅಷ್ಟಾದರೂ ಕೆಲಸ ಇನ್ನೂ ಪ್ರಾರಂಭವಾಗಿಲ್ಲ ಎಂದು ವರದಿ ಹೇಳಿದೆ.
ಇಂಡೋ-ಬಾಂಗ್ಲಾ ಗಡಿಯಲ್ಲಿ ಬೇಲಿ ಅಳವಡಿಕೆಯ ಸವಾಲುಗಳು: ಭಾರತ-ಬಾಂಗ್ಲಾದೇಶ ಗಡಿಯು ಬೆಟ್ಟಗಳು, ನದಿಗಳು ಮತ್ತು ಕಣಿವೆಗಳಂತಹ ದುರ್ಗಮ ಭೂಪ್ರದೇಶಗಳಿಂದ ಆವೃತ್ತವಾಗಿದೆ. ಅಕ್ರಮ ಗಡಿಯಾಚೆಗಿನ ಚಟುವಟಿಕೆಗಳು ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮ ವಲಸೆಯ ತಪಾಸಣೆಗಾಗಿ ಇಲ್ಲಿ ಬಿಎಸ್ಎಫ್ ನಿಯೋಜಿಸಲಾಗಿದೆ.
"ಒಳನುಸುಳುವಿಕೆ, ಕಾನೂನುಬಾಹಿರ ಚಟುವಟಿಕೆಗಳು, ಮಾದಕವಸ್ತು ವ್ಯವಹಾರವನ್ನು ನಿಗ್ರಹಿಸಲು ಗಡಿ ಬೇಲಿ ಬಹಳ ಅಗತ್ಯವಾಗಿದೆ" ಎಂದು ಬಿಎಸ್ಎಫ್ ವಕ್ತಾರ ಸುಭೇಂದು ಭಾರದ್ವಾಜ್ ಹೇಳಿದರು.
ಇಂಡೋ-ಬಾಂಗ್ಲಾ ಗಡಿಯಲ್ಲಿ ತೇವಾಂಶದ ಮಟ್ಟ ಅಧಿಕ: ವರದಿಯ ಪ್ರಕಾರ, ಮಿಜೋರಾಂನಲ್ಲಿ ವರ್ಷದಲ್ಲಿ ಸುಮಾರು 6 ರಿಂದ 7 ತಿಂಗಳು ಭಾರಿ ಮಳೆಯಾಗುವುದರಿಂದ ದೇಶದ ಈ ಭಾಗದಲ್ಲಿ ತೇವಾಂಶದ ಮಟ್ಟವು ತುಲನಾತ್ಮಕವಾಗಿ ಹೆಚ್ಚಾಗಿದೆ.
"ಈ ಅಂಶಗಳು ಒಟ್ಟಿಗೆ ಸೇರಿ ಬೇಲಿಗೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತವೆ ಮತ್ತು ಅದರ ಜೀವಿತಾವಧಿಯನ್ನು ಕಡಿಮೆ ಮಾಡುತ್ತವೆ. ಅಸ್ತಿತ್ವದಲ್ಲಿರುವ ಮೂರು ಸಾಲಿನ (ಹಳೆಯ ವಿನ್ಯಾಸ) ಬೇಲಿಯನ್ನು ನಿರ್ವಹಿಸುವುದು ದೊಡ್ಡ ಸವಾಲಾಗಿದೆ. ಐಬಿಬಿಎಫ್ ಮತ್ತು ಸುತ್ತಮುತ್ತ ದಟ್ಟವಾದ ಕಾಡು ಬೆಳೆಯುತ್ತದೆ. ತೇವಾಂಶವು ಐಬಿಬಿಎಫ್, ಬಿಎಫ್ಎಲ್ ಧ್ರುವಗಳು ಇತ್ಯಾದಿಗಳನ್ನು ಮತ್ತಷ್ಟು ತುಕ್ಕು ಹಿಡಿಸುತ್ತದೆ" ಎಂದು ವರದಿ ಹೇಳಿದೆ.
ಅಂಡರ್-ಕಮಾಂಡ್ ಘಟಕಗಳು ಸಂಗ್ರಹಿಸಿದ ವರದಿಯ ಪ್ರಕಾರ, ಸುಮಾರು 50 ಪ್ರತಿಶತದಷ್ಟು ಗಡಿ ಬೇಲಿಯನ್ನು ದುರಸ್ತಿಗೊಳಿಸುವ ಮತ್ತು ಬದಲಾಯಿಸುವ ಅಗತ್ಯವಿದೆ. ಬೇಲಿಯನ್ನು ಹೊಸ ವಿನ್ಯಾಸದ ಸಿಂಗಲ್ ಲೈನ್ ಮಾಡ್ಯುಲರ್ ಬೇಲಿಯೊಂದಿಗೆ ಬದಲಾಯಿಸಬಹುದು ಎಂದು ಅದು ಸೂಚಿಸಿದೆ. ಐಬಿಬಿಎಫ್ ಜೋಡಣೆ ಇಲ್ಲಿ ದೊಡ್ಡ ಸಮಸ್ಯೆಯಾಗಿದೆ ಎಂದು ವರದಿ ಹೇಳಿದೆ. ಐಬಿಬಿಎಫ್ ಅನ್ನು ಸಾಮಾನ್ಯವಾಗಿ ಐಬಿಯ ಜೋಡಣೆಗೆ ಸಮಾನಾಂತರವಾಗಿ ನಿರ್ಮಿಸಲಾಗಿದೆ.
ನಿರ್ಮಾಣ ಸಂಸ್ಥೆಗಳಿಂದ ಹಿತಾಸಕ್ತಿ ಸಾಧನೆ: ಐಬಿಬಿಎಫ್ನ ಜೋಡಣೆಯ ಕಾರ್ಯತಂತ್ರದ ಪ್ರಾಮುಖ್ಯತೆಗಿಂತ ನಿರ್ಮಾಣ ಸಂಸ್ಥೆಗಳು ತಮ್ಮ ಅನುಕೂಲತೆಯನ್ನೇ ನೋಡುತ್ತಿವೆ ಎಂದು ವರದಿ ಹೇಳಿದೆ. ಅನೇಕ ಸ್ಥಳಗಳಲ್ಲಿ ಎತ್ತರದ ಮೈದಾನಗಳು ಮತ್ತು ಬೆಟ್ಟಗಳು ಬೇಲಿಗಿಂತ ಎತ್ತರವಾಗಿವೆ. ಹೀಗಾಗಿ ಯಾವುದೇ ರಾಷ್ಟ್ರ ವಿರೋಧಿ ವ್ಯಕ್ತಿಗಳು ಬಾಂಗ್ಲಾದೇಶದ ಕಡೆಯಿಂದ ಸುಲಭವಾಗಿ ನುಸುಳಬಹುದು ಎಂದು ವರದಿ ಎಚ್ಚರಿಸಿದೆ. ಗಡಿ ಬೇಲಿಯ ಭೂ ದಾಖಲೆಗಳನ್ನು ನಿರ್ಮಾಣ ಸಂಸ್ಥೆಗಳು ಇನ್ನೂ ಬಿಎಸ್ಎಫ್ಗೆ ಹಸ್ತಾಂತರಿಸಿಲ್ಲ ಎಂದು ಸಮೀಕ್ಷೆಯು ಗಮನಸೆಳೆದಿದೆ.
ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿರುವ ಐದು ಈಶಾನ್ಯ ರಾಜ್ಯಗಳು: ಭಾರತ-ಬಾಂಗ್ಲಾದೇಶ ಗಡಿಯ ಭಾರತದ ಭಾಗವು ಪಶ್ಚಿಮ ಬಂಗಾಳ (2216.7 ಕಿ.ಮೀ), ಅಸ್ಸಾಂ (263 ಕಿ.ಮೀ), ಮೇಘಾಲಯ (443 ಕಿ.ಮೀ), ತ್ರಿಪುರಾ (856 ಕಿ.ಮೀ) ಮತ್ತು ಮಿಜೋರಾಂ (318 ಕಿ.ಮೀ) ಅನ್ನು ಸಂಪರ್ಕಿಸುತ್ತದೆ. ಇಡೀ ವಲಯವು ಬಯಲು ಪ್ರದೇಶಗಳು, ನದಿ ತೀರಗಳು, ಬೆಟ್ಟಗಳು ಮತ್ತು ಕಾಡುಗಳನ್ನು ಒಳಗೊಂಡಿದೆ. ಈ ಪ್ರದೇಶವು ಅತ್ಯಧಿಕ ಜನಸಂಖ್ಯೆಯನ್ನು ಹೊಂದಿದೆ ಮತ್ತು ಗಡಿಯ ಅಂಚಿನವರೆಗೂ ಕೃಷಿ ಭೂಮಿಗಳಿವೆ.
ಬಾರ್ಡರ್ ಔಟ್ ಪೋಸ್ಟ್ಗಳು (ಬಿಒಪಿಗಳು) ಗಡಿಯುದ್ದಕ್ಕೂ ಬಿಎಸ್ಎಫ್ನ ಮುಖ್ಯ ನಿಯಂತ್ರಕ ಸ್ಥಳಗಳಾಗಿವೆ. ಇವು ಸ್ವಯಂ-ನಿಯಂತ್ರಿತ ರಕ್ಷಣಾ ಹೊರಠಾಣೆಗಳಾಗಿದ್ದು, ಭೂ ಗಡಿಗಳ ಸಂಪೂರ್ಣ ಮುಂದುವರಿಕೆಯಲ್ಲಿ ನಿರ್ದಿಷ್ಟ ಜವಾಬ್ದಾರಿಯ ಪ್ರದೇಶವನ್ನು ನಿಗದಿ ಪಡಿಸಲಾಗಿದೆ.
ಗಡಿಯಾಚೆಗಿನ ಅಪರಾಧಿಗಳು, ಒಳನುಸುಳುವವರು ಮತ್ತು ಪ್ರತಿಕೂಲ ವ್ಯಕ್ತಿಗಳ ಒಳನುಸುಳುವಿಕೆ / ಅತಿಕ್ರಮಣ ಮತ್ತು ಗಡಿ ಉಲ್ಲಂಘನೆಯ ಚಟುವಟಿಕೆಗಳಲ್ಲಿ ತೊಡಗುವುದನ್ನು ತಡೆಯುವುದು ಬಾರ್ಡರ್ ಔಟ್ ಪೋಸ್ಟ್ಗಳ ಮುಖ್ಯ ಕೆಲಸವಾಗಿದೆ. ಪ್ರತಿ ಬಿಒಪಿಗೆ ವಸತಿ, ಲಾಜಿಸ್ಟಿಕ್ ಬೆಂಬಲ ಮತ್ತು ಯುದ್ಧ ಕಾರ್ಯಗಳಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಪ್ರಸ್ತುತ, ಐಬಿಬಿ ಉದ್ದಕ್ಕೂ ಬಿಎಸ್ಎಫ್ನ 1113 ಬಿಒಪಿಗಳಿವೆ.
ಭಾರತ-ಪಾಕಿಸ್ತಾನ ಮತ್ತು ಭಾರತ-ಬಾಂಗ್ಲಾದೇಶ ಗಡಿಗಳಲ್ಲಿ 509 ಸಂಯೋಜಿತ ಬಿಒಪಿಗಳ ನಿರ್ಮಾಣಕ್ಕೆ ಭಾರತ ಸರ್ಕಾರ ಅನುಮೋದನೆ ನೀಡಿದೆ. 509 ಸಂಯೋಜಿತ ಬಿಒಪಿಗಳಲ್ಲಿ 383 ಸಂಯೋಜಿತ ಬಿಒಪಿಗಳನ್ನು ಭಾರತ-ಬಾಂಗ್ಲಾದೇಶ ಗಡಿಯಲ್ಲಿ ನಿರ್ಮಿಸಲಾಗುವುದು.
ಲೇಖನ: ಗೌತಮ್ ದೆಬ್ರಾಯ್, ಈಟಿವಿ ಭಾರತ್
ಇದನ್ನೂ ಓದಿ : ಸಮಗ್ರ ವಿಪತ್ತು ಎಚ್ಚರಿಕೆ ವ್ಯವಸ್ಥೆ 'ಕವಚಮ್' ಜಾರಿಗೊಳಿಸಿದ ಕೇರಳ ಸರ್ಕಾರ - KAWACHAM