ಪ್ರಯಾಗ್ ರಾಜ್: ಸಂಗಮದಲ್ಲಿರುವ ಗಂಗಾ ನೀರಿನಲ್ಲಿ ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಬೆಳೆಯಲು ಸಾಧ್ಯವಿಲ್ಲ ಎಂದು ಪದ್ಮಶ್ರೀ ಡಾ.ಅಜಯ್ ಸೋಂಕರ್ ತಿಳಿಸಿದ್ದಾರೆ. ಕುಂಭ ಮೇಳದ ಸಮಯದಲ್ಲಿ ಗಂಗಾ ನೀರಿನ ತಾಪಮಾನವು ಕೇವಲ 10 ರಿಂದ 15 ಡಿಗ್ರಿಗಳ ನಡುವೆ ಮಾತ್ರ ಇತ್ತು. ಆದರೆ ಈ ಬ್ಯಾಕ್ಟೀರಿಯಾವು 20 ಡಿಗ್ರಿಗಿಂತ ಹೆಚ್ಚಿನ ತಾಪಮಾನದಲ್ಲಿ ಬೆಳೆಯುತ್ತದೆ ಎಂದು ಅವರು ಹೇಳಿದರು. ಗಂಗಾ ನೀರನ್ನು ಸ್ವತಃ ಕುಡಿದು ತಮ್ಮ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡರು.
ವಿಜ್ಞಾನಿ ಡಾ. ಅಜಯ್ ಸೋಂಕರ್ ಅವರು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಗಂಗಾ ನೀರನ್ನು ಕುಡಿದರು. ಈ ಮೂಲಕ ನೀರಿನಲ್ಲಿ ಯಾವುದೇ ಹಾನಿಕಾರಕ ಬ್ಯಾಕ್ಟೀರಿಯಾಗಳಿಲ್ಲ ಎಂದು ಸಾಬೀತುಪಡಿಸಲು ಅವರು ಪ್ರಯತ್ನಿಸಿದರು.
ಬ್ಯಾಕ್ಟಿರಿಯಾ ಬೆಳವಣಿಗೆಗೆ ಸೂಕ್ತವಾಗಿಲ್ಲ: ಗಂಗಾ ನೀರಿನ ಗುಣಲಕ್ಷಣಗಳು ಮತ್ತು ಪ್ರಸ್ತುತ ತಾಪಮಾನವು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸೂಕ್ತವಾಗಿಲ್ಲ. 20 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ನೀರಿನ ತಾಪಮಾನದಲ್ಲಿ ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಸಂಪೂರ್ಣವಾಗಿ ನಿಷ್ಕ್ರಿಯವಾಗಿರುತ್ತದೆ ಎಂದು ಡಾ. ಅಜಯ್ ವಿವರಿಸಿದರು. ಏತನ್ಮಧ್ಯೆ, ಇಡೀ ಕುಂಭಮೇಳದ ಸಮಯದಲ್ಲಿ ಗಂಗಾ ನೀರಿನ ತಾಪಮಾನವು ಕೇವಲ 10 ರಿಂದ 15 ಡಿಗ್ರಿಗಳ ನಡುವೆ ಇತ್ತು.
ಗಂಗಾ ನದಿ ನೀರನ್ನು ಪರಿಶೀಲಿಸಿದ ಡಾ ಅಜಯ್: ಸಂಗಮದ ವಿವಿಧ ಘಾಟ್ ಗಳಲ್ಲಿ ಭಕ್ತರಲ್ಲಿ ಗಂಗಾ ನೀರಿನ ತಾಪಮಾನವನ್ನು ಡಾ. ಅಜಯ್ ಪರಿಶೀಲಿಸಿದರು. ಈ ಮೂಲಕ ಗಂಗಾ ನೀರಿನ ತಾಪಮಾನವು ಬ್ಯಾಕ್ಟೀರಿಯಾಕ್ಕೆ ಪ್ರತಿಕೂಲವಾಗಿದೆ ಎಂಬುದನ್ನು ಅವರು ಸ್ಪಷ್ಟ ಪಡಿಸಿದರು. ಬ್ಯಾಕ್ಟೀರಿಯಾಗಳು ಬೆಳೆಯಲು 35 ರಿಂದ 40 ಡಿಗ್ರಿ ತಾಪಮಾನ ಬೇಕಾಗುತ್ತದೆ. ಹೀಗಾಗಿ ಗಂಗಾನದಿಯ ಪರಿಶುದ್ಧತೆಯ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ಅವರು ಹೇಳಿದರು. ಗಂಗಾ ನೀರನ್ನು ಅದರ ವಿಶೇಷ ಗುಣಲಕ್ಷಣಗಳಿಂದಾಗಿ ಶತಮಾನಗಳಿಂದ ಶುದ್ಧ ಎಂದು ಪರಿಗಣಿಸಲಾಗಿದೆ.
ನದಿ ನೀರು ಕುಡಿಯಲು ಸಂಪೂರ್ಣ ಸೂಕ್ತವಾಗಿದೆ- ಡಾ ಅಜಯ್: ವೈಜ್ಞಾನಿಕ ಸಂಗತಿಗಳ ಆಧಾರದ ಮೇಲೆ, ಪ್ರಸ್ತುತ ತಣ್ಣೀರಿನಲ್ಲಿ ಫೆಕಲ್ ಕೋಲಿಫಾರ್ಮ್ ಬದುಕಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಡಾ.ಸೋಂಕರ್ ವಿವರಿಸಿದರು. ಗಂಗಾ ನೀರು ಸ್ನಾನ ಮಾಡಲು ಮತ್ತು ಕುಡಿಯಲು ಸಂಪೂರ್ಣವಾಗಿ ಸೂಕ್ತವಾಗಿದೆ. ಗಂಗಾ ನೀರು ನಮ್ಮ ದೇಹದಲ್ಲಿನ ವಿವಿಧ ರೋಗಕಾರಕಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.
UP ಮಾಲಿನ್ಯ ನಿಯಂತ್ರಣ ಮಂಡಳಿ ತರಾಟೆಗೆ ತೆಗೆದುಕೊಂಡ NGT: ಸಿಪಿಸಿಬಿ ಎನ್ಜಿಟಿಗೆ ಕಳುಹಿಸಿದ ವರದಿಯಲ್ಲಿ ಗಂಗಾ ನೀರಿನಲ್ಲಿ ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾವು 100 ಮಿಲಿಲೀಟರ್ ನೀರಿಗೆ 2,500 ಯೂನಿಟ್ಗಳಿಗಿಂತ ಹೆಚ್ಚಾಗಿದೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಎನ್ಜಿಟಿ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಏನಿದು ಫೆಕಲ್ ಕೋಲಿಫಾರ್ಮ್?: ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳು ಮಾನವರು ಮತ್ತು ಪ್ರಾಣಿಗಳ ಕರುಳಿನಲ್ಲಿ ಕಂಡು ಬರುತ್ತವೆ. ಇವು ನೀರಿನಲ್ಲಿ ಇದ್ದರೆ ಅಂಥ ನೀರನ್ನು ಮಾಲಿನ್ಯಕಾರಕ ಎಂದು ಪರಿಗಣಿಸಲಾಗುತ್ತದೆ. ನೀರಿನ ಗುಣಮಟ್ಟವನ್ನು ಪರೀಕ್ಷಿಸಲು ಫೆಕಲ್ ಕೋಲಿಫಾರ್ಮ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಬ್ಯಾಕ್ಟೀರಿಯಾವು ವಾಕರಿಕೆ, ವಾಂತಿ, ಅತಿಸಾರ ಮತ್ತು ಇತರ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ : ಕಾಶಿ ವಿಶ್ವನಾಥ ದೇವಾಲಯಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರ ಭೇಟಿ: 3 ದಿನ VIP ದರ್ಶನ ಸ್ಥಗಿತ - KASHI VISHWANATH TEMPLE