ಢಾಕಾ: ಬಾಂಗ್ಲಾದೇಶದಲ್ಲಿ ಅರಾಜಕತೆ ಮತ್ತು ಹಿಂಸಾಚಾರದ ಘಟನೆಗಳು ಮುಂದುವರೆಯುತ್ತಿರುವ ಮಧ್ಯೆ ಹಲವಾರು ದುಷ್ಕರ್ಮಿಗಳು ದೇಶದ ಆಗ್ನೇಯ ಕರಾವಳಿಯ ಕಾಕ್ಸ್ ಬಜಾರ್‌ನಲ್ಲಿರುವ ವಾಯುಪಡೆಯ ನೆಲೆಯ ಮೇಲೆ ದಾಳಿ ನಡೆಸಿದ್ದಾರೆ.
ಕಾಕ್ಸ್ ಬಜಾರ್ನ ವಾಯುಪಡೆಯ ನೆಲೆಗೆ ಹೊಂದಿಕೊಂಡಿರುವ ಸಮಿತಿ ಪಾರಾ ಪ್ರದೇಶದ ಮೇಲೆ ಕೆಲ ದುಷ್ಕರ್ಮಿಗಳು ಈ ದಾಳಿ ನಡೆಸಿದ್ದಾರೆ ಮತ್ತು ಬಾಂಗ್ಲಾದೇಶ ವಾಯುಪಡೆ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಬಾಂಗ್ಲಾದೇಶ ಸಶಸ್ತ್ರ ಪಡೆಗಳ ಮಾಧ್ಯಮ ವಿಭಾಗ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್ಪಿಆರ್) ಹೇಳಿದೆ.
ವಿಮಾನ ನಿಲ್ದಾಣದ ವಿಸ್ತರಣೆಗಾಗಿ ಸುತ್ತಮುತ್ತಲಿನ ಜನರನ್ನು ಸ್ಥಳಾಂತರಿಸುವ ಯೋಜನೆಯಿಂದಾಗಿ ಈ ಘಟನೆ ನಡೆದಿದೆ ಕೆಲ ಮಾಧ್ಯಮ ವರದಿಗಳು ಹೇಳಿವೆ.
ಸಮಿತಿ ಪಾರಾನಲ್ಲಿರುವ ನೆಲೆಯ ಮೇಲೆ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಹಿಂಸಾಚಾರದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಘಟನೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನ ಗಾಯಗೊಂಡಿದ್ದಾರೆ ಎಂದು ಕಾಕ್ಸ್ ಬಜಾರ್ ಉಪ ಆಯುಕ್ತ ಮೊಹಮ್ಮದ್ ಸಲಾಹುದ್ದೀನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬಂಗಾಳಿ ಭಾಷೆಯ ಪ್ರೊಥೋಮ್ ಅಲೋ ಪತ್ರಿಕೆಯ ಪ್ರಕಾರ, ಹೆಲ್ಮೆಟ್ ಹಾಕದೆ ಮೋಟಾರ್ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಸೈನಿಕರು ತಡೆದು ಪ್ರಶ್ನಿಸಿದ ನಂತರ ಹಿಂಸಾಚಾರ ಭುಗಿಲೆದ್ದಿದೆ. ವಾಗ್ವಾದದ ನಂತರ ವ್ಯಕ್ತಿಯ ಸಂಬಂಧಿಕರು ಮತ್ತು ನೆರೆಹೊರೆಯವರು ಜಮಾಯಿಸಿ ಸೇನಾ ನೆಲೆಯ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು ಎಂದು ವರದಿ ತಿಳಿಸಿದೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರ್ಕಾರವನ್ನು ಆಗಸ್ಟ್ 2024ರಲ್ಲಿ ಪದಚ್ಯುತಗೊಳಿಸಿದ ಬಾಂಗ್ಲಾದೇಶದಲ್ಲಿ ನಿರಂತರವಾಗಿ ಹಿಂಸಾಚಾರದ ಘಟನೆಗಳು ನಡೆಯುತ್ತಿವೆ. ಕಳೆದ ವಾರ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಮುಖಂಡ ಮೊಹಮ್ಮದ್ ಬಾಬುಲ್ ಮಿಯಾ ಅವರನ್ನು ಕ್ರೂರವಾಗಿ ಥಳಿಸಿ ಹತ್ಯೆ ಮಾಡಲಾಗಿತ್ತು.
ಈ ತಿಂಗಳ ಆರಂಭದಲ್ಲಿ ಬಾಂಗ್ಲಾದೇಶದ ಖುಲ್ನಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ (ಕೆಯುಇಟಿ) ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಈ ಘಟನೆಯ ನಂತರ ದೇಶದಲ್ಲಿನ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ. ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರದ ಘಟನೆಗಳು ಹೆಚ್ಚುತ್ತಿರುವುದರಿಂದ ಯೂನುಸ್ ರಾಜೀನಾಮೆ ನೀಡಬೇಕೆಂಬ ಕೂಗು ಬಲವಾಗುತ್ತಿದೆ. ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರವು ದೇಶದಲ್ಲಿ ಶಾಂತಿ ಸುವ್ಯವಸ್ಥೆ ಮರಳಿ ಸ್ಥಾಪಿಸಲು ಹೆಣಗಾಡುತ್ತಿದೆ.
ಇದನ್ನೂ ಓದಿ: NATOದಲ್ಲಿ ಉಕ್ರೇನ್ಗೆ ಸ್ಥಾನ ನೀಡಿದರೆ, ಅಧ್ಯಕ್ಷ ಸ್ಥಾನ ತ್ಯಜಿಸಲು ಸಿದ್ಧ: ಝೆಲೆನ್ಸ್ಕಿ - NATO MEMBERSHIP