ಹೈದರಾಬಾದ್: ಹುಬ್ಬಳಿಯಲ್ಲಿ ಡಿಸೆಂಬರ್ 22 ರಂದು ಉಣಕಲ್ನ ಅಚ್ಚವ್ವ ಕಾಲೋನಿಯ ಕಟ್ಟಡವೊಂದರಲ್ಲಿ ನಡೆದ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ 9 ಮಂದಿ ಪೈಕಿ 8 ಜನರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಅಯ್ಯಪ್ಪ ಮಾಲಾಧಾರಿಗಳು ಪೂಜೆ ಮಾಡುತ್ತಿದ್ದ ಕಟ್ಟಡದಲ್ಲಿ ತಡರಾತ್ರಿ ಈ ಸ್ಫೋಟ ಸಂಭವಿಸಿ ಭಾರಿ ಅನಾಹುತಕ್ಕೆ ಕಾರಣವಾಗಿದೆ. ಈ ಘಟನೆಯು ಎಲ್‌ಪಿಜಿ ಸಿಲಿಂಡರ್ ಸೋರಿಕೆ ಮತ್ತು ಸ್ಫೋಟದ ಕುರಿತು ಪ್ರತಿಯೊಬ್ಬರು ಮುನ್ನೆಚ್ಚರಿಕಾ ಕ್ರಮವನ್ನು ವಹಿಸಬೇಕು ಎಂಬ ಕುರಿತು ಮತ್ತೊಮ್ಮೆ ತಿಳಿಸುವಂತೆ ಮಾಡಿತು.
ಗ್ಯಾಸ್ ಸಿಲಿಂಡರ್ ಸ್ಫೋಟಕ್ಕೆ ಕಾರಣವೇನು?
ಇಂಧನ, ಆಮ್ಲಜನಕ ಮತ್ತು ದಹಿಸುವ ಶಕ್ತಿ ಸ್ಫೋಟದ ಪ್ರಮುಖ ವಸ್ತುಗಳಾಗಿವೆ. ಗ್ಯಾಸ್ ಸೋರಿಕೆಯಾದಾಗ ನಮ್ಮ ವಾತಾವರಣದಲ್ಲಿನ ಆಮ್ಲಜನಕಕ್ಕೆ ಒಂದು ಕಿಡಿ ತಗುಲಿದರೂ ಅದು ಸ್ಫೋಟವಾಗುತ್ತದೆ ಎಂಬುದನ್ನು ಮರೆಯಬಾರದು. ಇದೇ ಕಾರಣಕ್ಕೆ ಗ್ಯಾಸ್ ಸೋರಿಕೆ ಅಂಶದ ಬಗ್ಗೆ ಅಸಡ್ಡೆ ಬೇಡ.
ಗ್ಯಾಸ್ ಸೋರಿಕೆಗೆ ಹಲವು ಬಾರಿ ಇವು ಕಾರಣವಾಗುತ್ತದೆ ಎಚ್ಚರ:
- ದೋಷಯುಕ್ತ ಸಂಪರ್ಕಗಳು ಅಥವಾ ಹಳೆಯದಾದ ಸಿಲಿಂಡರ್ಗಳ ಭಾಗಗಳು ಸೋರಿಕೆಯನ್ನು ಉಂಟುಮಾಡಬಹುದು.
- ಸ್ಟೌವ್‌ಗಳು, ಓವನ್‌ಗಳು ಅಥವಾ ನೇರ ಸೂರ್ಯನ ಬೆಳಕಿನ ಬಳಿ ಸಿಲಿಂಡರ್‌ಗಳನ್ನು ಇಡುವುದು ಅಪಾಯಕಾರಿ. ಇದು ಅದರ ಮೇಲೆ ಹೆಚ್ಚಿನ ಒತ್ತಡವನ್ನು ಉಂಟು ಮಾಡುತ್ತದೆ.
- ಸಿಲಿಂಡರ್‌ಗಳನ್ನು ಬೀಳಿಸುವುದು, ಬಡಿಯುವುದು ಅಥವಾ ತಿರುಚುವುದರಿಂದ ಅದರ ಸುರಕ್ಷತಾ ಕವಾಟಕ್ಕೆ ಹಾನಿಯಾಗಿ ಇಂಧನ ಸೋರಿಕೆಯಾಗುತ್ತದೆ.
- ಸಿಲಿಂಡರ್ ಕ್ಯಾಪ್ನ ವಾಲ್ (ಕವಾಟ) ಅಥವಾ ಸುರಕ್ಷತಾ ಸೀಲ್ ತಿರುವುದರಿಂದ ಕೂಡ ಹಾನಿ ಸಂಭವಿಸಬಹುದು.
ಮುನ್ನೆಚ್ಚರಿಕಾ ಕ್ರಮ:
- ಈ ಕೆಲವು ಸುರಕ್ಷತಾ ಕ್ರಮ ವಹಿಸುವುದರಿಂದಾಗಿ ಸ್ಫೋಟದ ಅಪಾಯ ಕಡಿಮೆ ಮಾಡಬಹುದು.
- ಸೂರ್ಯನ ಬೆಳಕು ಮತ್ತು ಶಾಖದ ಮೂಲಗಳು ನೇರವಾಗಿ ಸಿಲಿಂಡರ್ ಮೇಲೆ ಬೀಳುವುದನ್ನು ತಪ್ಪಿಸಿ. ಚೆನ್ನಾಗಿ ಗಾಳಿ ಆಡುವ ಪ್ರದೇಶದಲ್ಲಿ ಸಿಲಿಂಡರ್ ಅನ್ನು ಇರಿಸಿ.
- ನಿಯಮಿತವಾಗಿ ಸಿಲಿಂಡರ್ ಸೋರಿಕೆ ಮತ್ತು ಅದರ ಕೊಳವೆಯನ್ನು ಪರಿಶೀಲಿಸಿ. ಇದಕ್ಕೆ ಬೇಕಾದಲ್ಲಿ ಸೋಪ್ ವಾಟರ್ ತಂತ್ರ ಬಳಸಬಹುದು.
- ಐಎಸ್ಐ ಮಾರ್ಕ್ನ ಒತ್ತಡ ನಿಯಂತ್ರಕ ಮತ್ತು ಕೊಳವೆ ಬಳಕೆ ಮಾಡಿ. ಅದರ ಶಿಫಾರಸ್ಸಿಗೆ ಅನುಗುಣವಾಗಿ ಅವುಗಳನ್ನು ನಿಯಮಿತವಾಗಿ ಬದಲಾಯಿಸಿ.
- ಸರಿಯಾದ ಪರೀಕ್ಷೆ ಮತ್ತು ಪ್ರಮಾಣೀಕರಣವನ್ನು ಖಚಿತಪಡಿಸಿಕೊಳ್ಳುವ ಅಧಿಕೃತ ಡೀಲರ್‌ಗಳಿಂದ ಯಾವಾಗಲೂ ಎಲ್‌ಪಿಜಿ ಸಿಲಿಂಡರ್‌ಗಳನ್ನು ಖರೀದಿಸಿ.
- ಸೋರಿಕೆ ಅನುಮಾನ ವ್ಯಕ್ತವಾದರೆ, ತಕ್ಷಣವೇ ಸಿಲಿಂಡರ್ ಕವಾಟವನ್ನು ಬಂದ್ ಮಾಡಿ ಮತ್ತು ಗಾಳಿಯಾಡಲು ಕಿಟಕಿಗಳನ್ನು ತೆರೆಯಿರಿ. ಸ್ವಿಚ್‌ಗಳು, ಲೈಟರ್‌ಗಳು ಅಥವಾ ಸಿಗರೇಟ್‌ಗಳನ್ನು ಈ ಸಂದರ್ಭದಲ್ಲಿ ಬಳಸಬೇಡಿ. ಈ ವೇಳೆ ತಕ್ಷಣಕ್ಕೆ ಗ್ಯಾಸ್ ಪೂರೈಕೆದಾರರನ್ನು ಸಂಪರ್ಕಿಸಿ.
- ಉಪಕರಣವನ್ನು ಆನ್ ಮಾಡುವ ಮೊದಲು, ಸಿಲಿಂಡರ್ ಮತ್ತು ಸಂಪರ್ಕಗಳ ಸುತ್ತಲೂ ಸ್ನಿಫ್ ಪರೀಕ್ಷೆಯನ್ನು ಮಾಡಿ. ಇದು ತಕ್ಷಣಕ್ಕೆ ಸೋರಿಕೆಯನ್ನು ತಿಳಿಸುತ್ತದೆ.
- ಗ್ಯಾಸ್ ಬಳಕೆ ಮಾಡದಿದ್ದಾಗ ಸಿಲಿಂಡರ್ ಕವಾಟವನ್ನು ಬಂದ್ ಮಾಡಿ.
- ಸಿಲಿಂಡರ್ ಸಂಪರ್ಕಗಳನ್ನು ಬದಲಾಯಿಸುವಾಗ ಅಥವಾ ಸೋರಿಕೆಯನ್ನು ಪರಿಶೀಲಿಸುವಾಗ ಸಿಲಿಂಡರ್ ಬಳಿ ವಿದ್ಯುತ್ ಉಪಕರಣಗಳು ಅಥವಾ ಬೆಂಕಿ ಬಳಕೆ ತಪ್ಪಿಸಿ.
ಅನೇಕ ಬಾರಿ ಅನಿಶ್ಚಿತ ಸಂಬಂಧದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದ ಸಂದರ್ಭದಲ್ಲಿ ಈ ಕ್ರಮಕ್ಕೆ ಮುಂದಾಗಿ
- ಸ್ಥಳಾಂತರ: ತಕ್ಷಣವೇ ಪ್ರದೇಶದಿಂದ ಹೊರಹೋಗಿ. ಯಾರಿಗೂ ಹಾನಿಯಾಗದಂತೆ ನೋಡಿಕೊಳ್ಳಿ.
- ಎಚ್ಚರಿಸಿ: ತಕ್ಷಣಕ್ಕೆ ಕೂಗಿ ಸ್ಥಳ ತೊರೆಯುವಂತೆ ನೆರೆಹೊರೆಯವರನ್ನು ಎಚ್ಚರಿಸಿ.
- ಸಹಾಯಕ್ಕಾಗಿ ಕರೆ ಮಾಡಿ: ಅಗ್ನಿಶಾಮಕ ಇಲಾಖೆ ಮತ್ತು ಅನಿಲ ಪೂರೈಕೆದಾರರಿಗೆ ಕರೆ ಮಾಡಿ.
- ಮತ್ತೆ ಪ್ರವೇಶಿಸಬೇಡಿ: ತುರ್ತು ಸಿಬ್ಬಂದಿ ಸ್ಥಳ ಸುರಕ್ಷಿತವೆಂದು ಘೋಷಿಸುವವರೆಗೆ ಕಟ್ಟಡವನ್ನು ಎಂದಿಗೂ ಮರುಪ್ರವೇಶಿಸಬೇಡಿ.
ಎಲ್‌ಪಿಜಿ ಕೊಳ್ಳುವಾಗ ಈ ವಿಷಯ ನೆನಪಿನಲ್ಲಿರಲಿ:
- ಅಧಿಕೃತ ಫ್ರಾಂಚೈಸಿಯಿಂದ ಖರೀದಿಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ವಿತರಣೆಯ ಸಮಯದಲ್ಲಿ ಸಿಲಿಂಡರ್‌ನಲ್ಲಿ ಕಂಪನಿಯ ಮುದ್ರೆ ಮತ್ತು ಸುರಕ್ಷತಾ ಕ್ಯಾಪ್ ಅನ್ನು ಪರೀಕ್ಷಿಸಲು ಮರೆಯಬೇಡಿ.
- ಸೀಲ್ ಹಾನಿಗೊಂಡಿದ್ದರೆ, ಸಿಲಿಂಡರ್ ಅನ್ನು ಸ್ವೀಕರಿಸಬೇಡಿ.
- ಸಿಲಿಂಡರ್ ಸ್ಟೇ ಪ್ಲೇಟ್ ಒಳಭಾಗದಲ್ಲಿನ ಅಂತಿಮ ದಿನಾಂಕವನ್ನು ತಪ್ಪದೇ ಪರೀಕ್ಷಿಸಿ. ಇವುಗಳನ್ನು ತ್ರೈಮಾಸಿಕ (ಎ - ಮಾರ್ಚ್, ಬಿ - ಜೂನ್, ಸಿ - ಸೆಪ್ಟೆಂಬರ್, ಡಿ - ಡಿಸೆಂಬರ್) ದ ಮೂಲಕ ಗುರುತಿಸಲಾಗುವುದು. ಉದಾಹರಣೆಗೆ ಡಿಎಫ್ಟಿ ಎ-22 ಆಗಿದ್ದರೆ, ಸಿಲಿಂಡರ್ ಅನ್ನು ಮಾರ್ಚ್ 2022 ರೊಳಗೆ ಪರೀಕ್ಷಿಸಬೇಕಾಗಿದೆ ಎಂದರ್ಥ.
ನಿಗದಿತ ದಿನಾಂಕ ಮುಗಿದ ಸಿಲಿಂಡರ್ ಸ್ವೀಕರಿಸಬೇಡಿ; ಹೊಸ ಸಿಲಿಂಡರ್ ಅನ್ನು ಬಳಕೆಗೆ ತರುವ ಸಮಯದಲ್ಲಿ ಸಿಲಿಂಡರ್ ಜಾಯಿಂಟ್ಸ್ ಮತ್ತು ಸುರಕ್ಷತಾ ಪೈಪ್‌ಗಳಿಗೆ ಸೋಪ್ ವಾಟರ್ ಪರೀಕ್ಷೆ ನಡೆಸುವ ಮೂಲಕ ಅನಿಲ ಸೋರಿಕೆಯನ್ನು ಪರಿಶೀಲಿಸಿ.
ಎಲ್‌ಪಿಜಿ ವಿಮೆ ಕ್ಲೈಮ್ ಪ್ರಕ್ರಿಯೆ; ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುತ್ತಿದ್ರೆ, ಬಳಕೆಯಲ್ಲಿ ಬಹಳ ಜಾಗರೂಕರಾಗಿರಬೇಕು. ಗ್ಯಾಸ್ ಸಿಲಿಂಡರ್ ಅನಾಹುತಕ್ಕೆ ಗೊತ್ತಿದ್ದೋ ಅಥವಾ ತಿಳಿಯದೆಯೋ ಬಲಿಯಾದರೆ, ಅಂತಹ ಸಮಯದಲ್ಲಿ ಏನು ಮಾಡಬೇಕು? ಅಪಘಾತದಲ್ಲಿ ಗಾಯಗೊಂಡವರು ವಿಮೆ ಪರಿಹಾರವನ್ನು ಹೇಗೆ ಪಡೆಯಬಹುದು? ತೈಲ ಕಂಪನಿಯಿಂದ ನಷ್ಟಕ್ಕೆ ಪರಿಹಾರವನ್ನು ನೀವು ಪಡೆಯಬಹುದೇ? ಎಂಬ ಬಗ್ಗೆ ಅರಿವಿರಬೇಕು. ಸಿಲಿಂಡರ್ ಸಂಪರ್ಕದ ವೇಳೆ ವಿಮೆ ಪಡೆಯುತ್ತಿದ್ದೀರಾ ಎಂಬ ಬಗ್ಗೆ ತಿಳಿದಿರಬೇಕು. ಇದನ್ನು ಎಲ್‌ಪಿಜಿ ವಿಮಾ ಕವರ್ ಪಾಲಿಸಿ ಎನ್ನಲಾಗುತ್ತೆ.
ಯಾರು ವಿಮೆ ನೀಡುತ್ತಾರೆ? ಸಣ್ಣ ತಪ್ಪು ಕೂಡ ನಿಮಗೆ ದೊಡ್ಡ ಅನಾಹುತ ತರುತ್ತದೆ. ಇಂತಹ ಸಂದರ್ಭದಲ್ಲಿ ಅಪಘಾತವಾದರೆ, ಸರ್ಕಾರ ಅಪಾಘಾತ ವಿಮೆಯಲ್ಲಿ 40 ಲಕ್ಷ ರೂ. ನೀಡುತ್ತದೆ. ಪೆಟ್ರೋಲಿಯಂ ಕಂಪನಿಗಳು ಎಲ್‌ಪಿಜಿ ಸಂಪರ್ಕ ಪಡೆಯುವಾಗ ಗ್ರಾಹಕರಿಗೆ ವೈಯಕ್ತಿಕ ಅಪಘಾತ ರಕ್ಷಣೆಯನ್ನು ಒದಗಿಸುತ್ತವೆ. ಎಲ್‌ಪಿಜಿ ಸಿಲಿಂಡರ್‌ನಿಂದ ಅನಿಲ ಸೋರಿಕೆ ಅಥವಾ ಸ್ಫೋಟದ ಸಂದರ್ಭದಲ್ಲಿ ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತದೆ. ಪೆಟ್ರೋಲಿಯಂ ಕಂಪನಿಗಳು ಈ ವಿಮೆಗಾಗಿ ವಿಮಾ ಕಂಪನಿಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿವೆ.
40 ರಿಂದ 50 ಲಕ್ಷ ಅಪಘಾತ ವಿಮೆ : ಎಲ್ಪಿಸಿ ವಿಮೆಗಳು 50 ಲಕ್ಷದವರೆಗೆ ಅಪಘಾತ ವಿಮೆಯನ್ನು ಭರಿಸುತ್ತದೆ. ಯಾವುದೇ ಗ್ಯಾಸ್ ಸ್ಫೋಟದಿಂದ ಜೀವ ಅಥವಾ ಆಸ್ತಿ ನಷ್ಟವಾದರೆ, ಇದು ಸಿಗಲಿದೆ. ಇದರ ಜೊತೆಗೆ ಗ್ಯಾಸ್ ಸಂಪರ್ಕದಿಂದ 40 ಲಕ್ಷದವರೆಗೆ ಕ್ಲೈಮ್ ಮಾಡಬಹುದಾಗಿದೆ. ಜೀವ ಹಾನಿ ಸಂದರ್ಭದಲ್ಲಿ 50 ಲಕ್ಷ ಕ್ಲೈಮ್ ಮಾಡಬಹುದು. ಅಪಘಾತದಲ್ಲಿ ಗ್ರಾಹಕರ ಆಸ್ತಿ ಅಥವಾ ಮನೆ ಹಾನಿಯಾದರೆ, 2 ಲಕ್ಷ ಸಿಗಲಿದೆ. ಇದು ಸಿಲಿಂಡರ್ ಆ ವ್ಯಕ್ತಿಯ ಹೆಸರಿಗೆ ನೋಂದಣಿಯಾಗಿದ್ದಾಗ ಮಾತ್ರ. ಇದರಲ್ಲಿ ನಾಮಿನಿ ಮಾಡುವ ಯಾವುದೇ ಸೌಲಭ್ಯವಿಲ್ಲ.
ಈ ವಿಚಾರ ಗಮನದಲ್ಲಿರಲಿ : ಗ್ಯಾಸ್ ಸಿಲಿಂಡರ್ ತೆಗೆದುಕೊಳ್ಳಲು ಹೋದಾಗ ಈ ವಿಚಾರ ಗಮನದಲ್ಲಿರಲಿದೆ. ನಿಮ್ಮ ವಿಮೆ ಕವರ್ ಆದರೂ ಬಿಟ್ಟರೂ, ಸಿಲಿಂಡರ್ ಅವಧಿ ಮುಕ್ತಾಯದ ದಿನ ತಪ್ಪದೇ ಪರಿಶೀಲಿಸಿ. ಇದನ್ನು ಪರಿಶೀಲಿಸದ ಬಳಿಕವೇ ಅದನ್ನು ಖರೀದಿಸಿ. ಕಾರಣ ಸಿಲಿಂಡರ್ ಅವಧಿ ಮುಕ್ತಾಯದ ದಿನ ಕೂಡ ವಿಮೆಯೊಂದಿಗೆ ಸಂಪರ್ಕ ಹೊಂದಿದೆ. ಹಾಗೇ ಐಎಸ್ಐ ಮಾರ್ಕ್ ಹೊಂದಿರುವ ಸಿಲಿಂಡರ್ ಪೈಪ್, ಗ್ಯಾಸ್ ಸ್ಟೌವ್ ಮತ್ತು ರೆಗ್ಯೂಲೇಟರ್ ಹೊಂದಿದಾಗ ಮಾತ್ರ ಈ ಪ್ರಯೋಜನ ಪಡೆಯಬಹುದು.
ವಿಮೆ ಪಡೆಯುವುದೇಗೆ? ಎಲ್‌ಪಿಜಿ ವಿಮಾ ಯೋಜನೆ ಅಡಿ ಇದನ್ನು ಕ್ಲೈಮ್ ಮಾಡಬಹುದು. ಗ್ಯಾಸ್ ಸ್ಫೋಟ ಮತ್ತು ಅನಾಹುತದಿಂದ ಸಾವು ಸಂಭವಿಸಿದರೆ ಈ ವಿಮೆ ಲಭ್ಯವಿದೆ. ಗ್ರಾಹಕರು ಇದರಲ್ಲಿ 40 ಲಕ್ಷ ವಿಮೆಯನ್ನು ಪಡೆಯಬಹುದು. ಇದನ್ನು ಪೂರೈಕೆದಾರ ಎಲ್‌ಪಿಜಿ ಸಿಲಿಂಡರ್ ಕಂಪನಿ ನೀಡಲಿದ್ದು, ಈ ಕುರಿತು ಹೆಚ್ಚಿನ ಮಾಹಿತಿಗೆ ಸರ್ಕಾರದ MyLPG.in ಜಾಲತಾಣಕ್ಕೆ ಭೇಟಿ ನೀಡಿ.
ಯಾವಾಗ ಕ್ಲೈಮ್ ಮಾಡಬಹುದು : ಅಪಘಾತ ಸಂಭವಿಸಿದ 30 ದಿನದೊಳಗೆ ವಿತರಣಾದಾರರು ಮತ್ತು ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬಹುದು. ಗ್ರಾಹಕರು ಎಫ್ಐಆರ್ ಕಾಪಿ, ವೈದ್ಯಕೀಯ ವರದಿ, ಆಸ್ಪತ್ರೆ ಬಿಲ್, ಮರಣೋತ್ತರ ವರದಿ, ಸಾವಿನ ಪ್ರಮಾಣ ಪತ್ರವನ್ನು ಕೂಡ ಸಲ್ಲಿಸಿ ಇದನ್ನು ಪಡೆಯಬಹುದು. ಈ ವೇಳೆ ಗ್ರಾಹಕರು ವಿಮಾ ಕಂಪನಿಯನ್ನು ನೇರವಾಗಿ ಸಂಪರ್ಕಿಸುವ ಅವಶ್ಯಕತೆ ಇಲ್ಲ. ಇಂಧನ ಸಂಸ್ಥೆಗಳೇ ಸ್ವಯಂ ಕ್ಲೈಮ್ ಮಾಡಿ, ಪರಿಹಾರ ನೀಡುತ್ತವೆ.
ವಿಮೆ ಮಾಹಿತಿ ಮತ್ತು ಕವರ್ :
- ಸಾರ್ವಜನಿಕ ಹೊಣೆಗಾರಿಕೆ ವಿಮಾ ಪಾಲಿಸಿಯು ಎಲ್‌ಪಿಜಿಯು ಬೆಂಕಿಗೆ ಪ್ರಾಥಮಿಕ ಕಾರಣವಾಗಿರುವ ಅಪಘಾತಗಳಿಂದ ಉಂಟಾಗುವ ನಷ್ಟಗಳನ್ನು ಮಾತ್ರ ಒಳಗೊಂಡಿರುತ್ತದೆ ಮತ್ತು ಇತರ ಮೂಲಗಳಿಂದ ಬೆಂಕಿ ಉಂಟಾದ ಘಟನೆಗಳಿಗೆ ಅಲ್ಲ.
- ವೈಯಕ್ತಿಕ ಅಪಘಾತಗಳು ಥರ್ಡ್ ಪಾರ್ಟಿ ಮತ್ತು ಎಲ್‌ಪಿಜಿ ಗ್ರಾಹಕರು ಮತ್ತು ಅಧಿಕೃತ ಗ್ರಾಹಕರಿಂದ ನೋಂದಾಯಿತ ಆಸ್ತಿಯಲ್ಲಿ ನಡೆದರೆ ಮಾತ್ರ ಲಭ್ಯವಾಗುತ್ತದೆ.
- ಪ್ರಾಥಮಿಕವಾಗಿ ಬೆಂಕಿ ಅನಾಹುತ ಹೊರತಾಗಿ ಯಾರಾದರೂ ಇತರೆ ಉದ್ದೇಶದಿಂದ ಬೆಂಕಿ ಇಟ್ಟು ಸ್ಫೋಟಗೊಂಡಾಗ ಈ ವಿಮೆ ಸಿಗುವುದಿಲ್ಲ.
- 2019 ರಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ನೀಡಿದ ಮಾಹಿತಿಯ ಪ್ರಕಾರ ವಿಮೆ ಒದಗಿಸಲಾಗುವುದು.
- ಪಾಲಿಸಿಯ ಅಡಿಯಲ್ಲಿ ಸಾವಿನ ಸಂದರ್ಭದಲ್ಲಿ ಪ್ರತಿ ವ್ಯಕ್ತಿಗೆ ರೂ. 6,00,000 ವೈಯಕ್ತಿಕ ಅಪಘಾತ ರಕ್ಷಣೆಯನ್ನು ಒದಗಿಸಲಾಗಿದೆ.
- ಈ ಪಾಲಿಸಿಯು ಪ್ರತಿ ಎಲ್‌ಪಿಜಿ ಸಿಲಿಂಡರ್ ಅಪಘಾತಕ್ಕೆ ಗರಿಷ್ಠ 30 ಲಕ್ಷ ರೂ.ವರೆಗೆ ವೈದ್ಯಕೀಯ ವೆಚ್ಚವನ್ನು ಒಳಗೊಂಡಿರುತ್ತದೆ ಮತ್ತು ಪ್ರತಿ ವ್ಯಕ್ತಿಗೆ ಗರಿಷ್ಠ 2,00,000 ರೂ. ಪ್ರತಿ ವ್ಯಕ್ತಿಗೆ ತಕ್ಷಣದ ವೈದ್ಯಕೀಯ ವೆಚ್ಚಕ್ಕಾಗಿ ರೂ. 25,000 ನೀಡಲಾಗುತ್ತದೆ.
- ಅಧಿಕೃತ ಗ್ರಾಹಕರ ನೋಂದಾಯಿತ ಆವರಣದಲ್ಲಿ ಆಸ್ತಿ ಹಾನಿಯ ಸಂದರ್ಭದಲ್ಲಿ, ಪಾಲಿಸಿಯು 2 ಲಕ್ಷದವರೆಗೆ ಪರಿಹಾರ ನೀಡುತ್ತದೆ.
ವಿಮೆ ಪ್ರಕ್ರಿಯೆ
- ಗ್ರಾಹಕರು ಸಂಭವಿಸಿದ ಅಪಘಾತದಲ್ಲಿ ಎಲ್‌ಪಿಜಿ ಅಳವಡಿಕೆ ಮತ್ತು ಗ್ರಾಹಕರು ವಿತರಣೆದಾರರಿಂದ ಪಡೆಯುವ ಪೂರೈಕೆ ಕುರಿತು ತಕ್ಷಣಕ್ಕೆ ಮಾಹಿತಿ ನೀಡಬೇಕು.
- ಅನಧಿಕೃತ ವಿತರಣಾದಾರರು ಮತ್ತು ಕಚೇರಿ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದರೆ, ಸ್ಥಳೀಯ ಅಧಿಕಾರಿಗಳಿಗೆ ತಿಳಿಸಬೇಕು. ಈ ಸಂಬಂಧ ಸಂಬಂಧಿಸಿದ ವಿಮಾ ಕಂಪನಿ ಕಾರ್ಯಾಚರಣೆ ನಡೆಸಿ, ವಿಮಾ ಪಾಲಿಸಿ ಪ್ರಕ್ರಿಯೆ ನಡೆಸಲಿದೆ.
- ಗ್ರಾಹಕರು ವಿಮಾ ಕಂಪನಿಗೆ ಅರ್ಜಿ ಅಥವಾ ನೇರವಾಗಿ ಸಂಪರ್ಕಿಸುವ ಅವಶ್ಯಕತೆ ಇಲ್ಲ.
- ಗ್ರಾಹಕರು ಇಂಧನ ಕಂಪನಿಗಳಿಗೆ ಸಾವಿನ ಪ್ರಮಾಣಪತ್ರ, ವೈದ್ಯಕೀಯ ಬಿಲ್ ಸೇರಿದಂತೆ ಅಗತ್ಯ ದಾಖಲಾತಿ ಪ್ರಮಾಣಪತ್ರವನ್ನು ಸಲ್ಲಿಸಬೇಕು.
- ಆಸ್ತಿ ನಷ್ಟ- ವಿಮಾ ಕಂಪನಿಯು ನಷ್ಟದ ಅಂದಾಜಿಗೆ ಸಮೀಕ್ಷೆಕಾರರನ್ನು ನೇಮಿಸಲಿದೆ.
2024ರಲ್ಲಿ ನಡೆದ ಕರ್ನಾಟಕದಲ್ಲಿ ನಡೆದ ಪ್ರಮುಖ ಸಿಲಿಂಡರ್ ಸ್ಫೋಟ ಪ್ರಕರಣಗಳಿವು;
ಜನವರಿ 17, 2024: ಬೆಂಗಳೂರಿನಲ್ಲಿ ನಡೆದ ಎಲ್‌ಪಿಜಿ ಸಿಲಿಂಡರ್ ಸ್ಫೋಟದಲ್ಲಿ ಆರು ಜನ ಗಾಯಗೊಂಡಿದ್ದರು. ಯಲಹಂಕ ಪೊಲೀಸ್ ಠಾಣೆ ಮಿತಿಯ ಲಾಲ್ ಬಹದ್ದೂರ್ ಶಾಸ್ತ್ರಿ ಲೇಔಟ್ನಲ್ಲಿ ಎಲ್‌ಪಿಜಿ ಸಿಲಿಂಡರ್ ಸೋರಿಕೆ ಸ್ಫೋಟಕ್ಕೆ ಕಾರಣವಾಯಿತು.
ಜೂನ್ 21, 2024: ಕಲಬುರಗಿಯ ಎಸ್ಬಿ ಲೇಕ್ನಲ್ಲಿ ನಡೆದ ಎಲ್‌ಪಿಜಿ ಸಿಲಿಂಡರ್ ಸ್ಫೋಟದಲ್ಲಿ 14 ಮಂದಿ ಗಾಯಗೊಂಡಿದ್ದರು. ಇದರಲ್ಲಿ 12 ಮಂದಿ ಪುರುಷರು ಮತ್ತು ಇಬ್ಬರು ಮಹಿಳೆಯರು.
ಸೆಪ್ಟೆಂಬರ್ 17, 2024: ಬೆಂಗಳೂರಿನ ಹಳೆ ಬೈಯಪ್ಪನಹಳ್ಳಿಯ ಸಂಜಯ್ ಗಾಂಧಿ ನಗರ್ನಲ್ಲಿ ನಡೆದ ಸ್ಫೋಟದಲ್ಲಿ 12 ಮನೆಗಳಿಗೆ ಹಾನಿಯಾಗಿತ್ತು. ಅಣ್ಣದುರೈ ಎಂಬುವರ ಮನೆಯಲ್ಲಿ ಬೆಳಗ್ಗೆ 6.50ಕ್ಕೆ ನಡೆದ ಭಾರೀ ಸ್ಫೋಟ ನೆರೆಹೊರೆಯವರ ಮನೆ ಹಾನಿಗೂ ಕಾರಣವಾಗಿತ್ತು.
5 ಅಕ್ಟೋಬರ್ 2024: ದಾವಣಗೆರೆ ತಾಲೂಕಿನ ತುರಚಗಟ್ಟದಲ್ಲಿನ ನಡೆದ ಎಲ್‌ಪಿಜಿ ಸಿಲಿಂಟರ್ ಸ್ಫೋಟದಲ್ಲಿ ಆರು ಮಂದಿ ಗಾಯಗೊಂಡಿದ್ದರು. ರಾತ್ರಿ ರೆಗ್ಯೂಲೇಟರ್ ಆಫ್ ಮಾಡದ ಹಿನ್ನೆಲೆ ಮನೆಯಲ್ಲಿ ಇಂಧನ ಸೋರಿಕೆಯಾಗಿ ಈ ಅನಾಹುತ ಸಂಭವಿಸಿತ್ತು.
ಇದನ್ನೂ ಓದಿ: ಹುಬ್ಬಳ್ಳಿ ಗ್ಯಾಸ್ ಸಿಲಿಂಡರ್ ಸ್ಫೋಟ: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು; ಸಾವಿನ ಸಂಖ್ಯೆ 8ಕ್ಕೇರಿಕೆ