ಬೆಂಗಳೂರು: ತನ್ನ ವಿರುದ್ಧ ಕೊಲೆ ಯತ್ನ ದೂರು ದಾಖಲಾಗಿದೆ ಎಂಬುದಕ್ಕೆ ಪ್ರತಿಯಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಯಡಿ ದಾಖಲಿಸಿದ್ದ ಪ್ರತಿದೂರನ್ನು ಹೈಕೋರ್ಟ್ ರದ್ದುಪಡಿಸಿದೆ.
ತಮ್ಮ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ದಾಖಲಾಗಿದ್ದ ಪ್ರಕರಣ ರದ್ದುಕೋರಿ ಬೈಲಹೊಂಗಲದ ಅತಾಹುಲ್ಲಾ, ಮೆಹಬೂಬ್ ರಫೀಕ್, ಮೊಹಮ್ಮದ್ ಸಾದಿಕ್ ಮತ್ತು ಅಲ್ಲಂಉಪ್ಪಿಡಿ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌರ ಅವರಿದ್ದ ಧಾರವಾದ ಪೀಠ ಈ ಆದೇಶ ನೀಡಿದೆ.
ಅಲ್ಲದೇ, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ, ದೂರುದಾರರ ಮಗಳನ್ನು ಸಾದಿಕ್ ಚುಡಾಯಿಸಿದ್ದ ಆರೋಪವಿತ್ತು. ಘಟನೆಗೆ ಸಂಬಂಧಿ ಸಾದಿಕ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣವೂ ದಾಖಲಾಗಿತ್ತು. ಆದರೆ, ಘಟನೆಯಲ್ಲಿ ಅರ್ಜಿದಾರರಲ್ಲಿ ಒಬ್ಬರಿಗೆ ಚಾಕುವಿನಿಂದ ಇರಿದಿದ್ದ ಆರೋಪವಿತ್ತು. ಇದಕ್ಕೆ ಸಂಬಂಧಿಸಿದಂತೆ ಅರ್ಜಿದಾರ ಅಟಾವುಲ್ಲಾ ಈ ಹಿಂದೆಯೇ ಪ್ರಕರಣ ದಾಖಲಿಸಿದ್ದರು. ಚೂರಿ ಇರಿತ ಘಟನೆಯ ನಂತರ ದೂರುದಾರರು ಬಂಧನದಿಂದ ತಪ್ಪಿಸಿಕೊಳ್ಳಲು ಪರಾರಿಯಾಗಿ ಮತ್ತು ನಾಲ್ಕು ದಿನಗಳ ಬಳಿಕ ಠಾಣೆಗೆ ಬಂದು ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ, ಚಾಕು ಇರಿತ ಮಾಡಿರುವ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವ ಬದಲಾಗಿ ಅರ್ಜಿದಾರರ ವಿರುದ್ಧ ದಾಖಲಿಸಿದ್ದ ಪ್ರತಿ ದೂರು ದಾಖಲಿಸಿರುವುದನ್ನು ಪೊಲೀಸರು ಅಂಗೀಕರಿಸಿದ್ದರು.
ಆದರೆ, ಅರ್ಜಿದಾರರು ದೂರುದಾರರಿಗೆ ಜಾತಿಗೆ ಸಂಬಂಧಿಸಿದಂತೆ ಯಾವ ರೀತಿಯಲ್ಲಿ ನಿಂದಿಸಿದ್ದಾರೆ ಎಂಬುದಕ್ಕೆ ನಿರ್ದಿಷ್ಟ ಅಂಶಗಳನ್ನು ಪ್ರಕರಣದಲ್ಲಿ ಬಹಿರಂಗ ಪಡಿಸಿಲ್ಲ. ಈ ಬೆಳವಣಿಗೆ ದೂರು ನೀಡಿದವರ ವಿರುದ್ಧ ದಾಖಲಾಗುವ ಪ್ರತಿ ದೂರು ಎಂಬ ಅಂಶ ಗೊತ್ತಾಗಲಿದೆ ಎಂದು ಪೀಠ ತಿಳಿಸಿದೆ.
ಅಲ್ಲದೇ, ಅರ್ಜಿಯ ಸಂಬಂಧ ಈ ಹಿಂದೆ ನಡೆದ ವಿಚಾರಣೆ ವೇಳೆ ಎಫ್‌ಐಆರ್‌ಗೆ ತಡೆ ನೀಡಲಾಗಿದೆ. ಆದಾಗ್ಯೂ ಈ ಆದೇಶಕ್ಕೂ ಮುನ್ನವೇ ಪೊಲೀಸರು ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಆದರೆ, ಶೈಲೇಶ್ ಭಾಯ್ ರಾಂಚೋಡ್ ಭಾಯ್ ಪಟೇಲ್ ಮತ್ತಿರರ ವಿರುದ್ಧದ ಪಂಜಾಬ್ ರಾಜ್ಯ ಸರ್ಕಾರದ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾದ ಬಳಿಕವೂ ಎಫ್‌ಐಆರ್‌ನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಬಹುದಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಹೀಗಾಗಿ ಪ್ರಕರಣ ಮುಂದುವರೆದಲ್ಲಿ ಕಾನೂನು ಪ್ರಕ್ರಿಯೆ ದುರುಪಯೋಗ ಆಗಲಿದೆ. ಆದ್ದರಿಂದ ಅರ್ಜಿದಾರರ ವಿರುದ್ಧ ದಾಖಲಾಗಿರುವ ಐಪಿಸಿ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಅಡಿಯ ಪ್ರಕರಣ ರದ್ದು ಮಾಡುತ್ತಿರುವುದಾಗಿ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ : 2022ರ ನವೆಂಬರ್ 8ರಂದು ತನ್ನ ಮಗಳು ಬಸ್‌ನಲ್ಲಿ ಶಾಲೆಗೆ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಸಾದಿಕ್ ಎಂಬುವವರು ಗೇಲಿ ಮಾಡಿದ್ದಾರೆ ಎಂದು ದೂರುದಾರ ಆರೋಪಿಸಿದ್ದರು. ಈ ಸಂಬಂಧ ಸಾದಿಕ್ ಮನೆ ಮುಂದೆ ದೂರುದಾರರು ಮತ್ತಿತರರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದರು ಎಂದು ದೂರುದಾರ ಆರೋಪಿಸಿ ಪ್ರಕರಣ ದಾಖಲಿಸಿದ್ದರು.
ಘಟನೆಯಲ್ಲಿ ಒಬ್ಬರಿಗೆ ಚಾಕುವಿನಿಂದ ಇರಿದಿದ್ದ ಕೊಲೆ ಯತ್ನ ನಡೆಸಲಾದ ಆರೋಪ ಸಂಬಂಧ ದೂರುದಾರರ ವಿರುದ್ಧ ಅರ್ಜಿದಾರರು ಪ್ರಕರಣ ದಾಖಲಿಸಿದ್ದರು. ಇದಕ್ಕೆ ಪ್ರತಿಜಾತಿ ಜಾತಿ ನಿಂದನೆ ಆರೋಪದಲ್ಲಿ ದೂರುದಾರರು ಅರ್ಜಿದಾರರ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ಅನ್ವರ್ ಆಲಿ ನದಾಫ್ ವಾದ ಮಂಡಿಸಿ, ದೂರುದಾರರ ವಿರುದ್ಧ ಕೊಲೆ ಯತ್ನ ಆರೋಪದಲ್ಲಿ ದಾಖಲಾಗಿರುವ ಪ್ರಕರಣಲ್ಲಿ ಬಂಧನದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ದೂರುದಾರರು ಅರ್ಜಿದಾರರ ವಿರುದ್ಧ ಪ್ರತಿ ದೂರು ದಾಖಲಿಸಿದ್ದರು. 2022ರ ನವೆಂಬರ್ 8 ರಂದು ಘಟನೆ ನಡೆದಿದೆ. ಆದರೆ, ನವೆಂಬರ್ 12ರಂದು ದೂರು ದಾಖಲಿಸಿದ್ದಾರೆ. ಅಲ್ಲದೆ, ವಿಳಂಬಕ್ಕೆ ಯಾವುದೇ ಸಮರ್ಥನೆ ನೀಡಿಲ್ಲ ಎಂಬುದಾಗಿ ಪೀಠಕ್ಕೆ ತಿಳಿಸಿದ್ದರು.
ಇದಕ್ಕೆ ಆಕ್ಷೇಪಿಸಿದ ಸರ್ಕಾರಿ ವಕೀಲರು, ಎಫ್‌ಐಆರ್‌ನಲ್ಲಿ ಆರೋಪಗಳು ಅರ್ಜಿದಾರರ ವಿರುದ್ಧ ಆರೋಪಿಸಲಾದ ಅಪರಾಧಗಳನ್ನು ಬಹಿರಂಗ ಪಡಿಸುತ್ತಿವೆ. ಈ ಎಲ್ಲ ಆರೋಪಗಳ ಸತ್ಯಾಸತ್ಯತೆ ಹೊರಬರಬೇಕಾದರೆ ತನಿಖೆ ನಡೆಯಬೇಕಾದ ಅಗತ್ಯವಿದೆ. ಹೀಗಾಗಿ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹಸ್ತಕ್ಷೇಪ ಮಾಡಬಾರದು. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು.
ಇದನ್ನೂ ಓದಿ: ಇನ್ಫೋಸಿಸ್ ಸಹ ಸಂಸ್ಥಾಪಕರ ವಿರುದ್ಧದ ಜಾತಿ ನಿಂದನೆ ಆರೋಪ : ಎಫ್‌ಐಆರ್‌ಗೆ ಹೈಕೋರ್ಟ್ ತಡೆ