ನವದೆಹಲಿ:ಅಮೆರಿಕದಲ್ಲಿ ಜನರ ಆವಾಸಸ್ಥಾನಗಳ ಸುತ್ತಮುತ್ತ ಕಂಡುಬರುವ ಆರು ಪ್ರಾಣಿಗಳಲ್ಲಿ ಕೋವಿಡ್-19ಗೆ ಕಾರಣವಾದ ಸಾರ್ಸ್-ಕೋವ್-2 ವೈರಸ್ ಪತ್ತೆಯಾಗಿದ್ದು, ಐದು ಪ್ರಭೇದಗಳಿಗೆ ಈ ಮೊದಲೇ ಸಾರ್ಸ್-ಕೋವ್-2 ವೈರಸ್ ಸೋಂಕು ತಗುಲಿತ್ತು ಎಂಬುದನ್ನು ಇವುಗಳಲ್ಲಿನ ಪ್ರತಿಕಾಯಗಳು ಸೂಚಿಸುತ್ತವೆ ಎಂದು ಹೊಸ ಅಧ್ಯಯನವೊಂದು ಸೋಮವಾರ ಕಂಡುಹಿಡಿದಿದೆ.
ಜಿಂಕೆ ಇಲಿಗಳು (Deer Mice), ವರ್ಜೀನಿಯಾ ಒಪೊಸಮ್ಗಳು (ಇಲಿ ರೀತಿಯ ಪ್ರಾಣಿ), ರಕೂನ್ಗಳು (ನಾಯಿಯ ರೀತಿಯ ಪ್ರಾಣಿ), ನೆಲಹಾಗ್ಗಳು (ಅಳಿಲು ರೀತಿಯ ಪ್ರಾಣಿ), ಪೂರ್ವ ಕಾಟನ್ ಟೈಲ್ ಮೊಲಗಳು ಮತ್ತು ಪೂರ್ವ ಕೆಂಪು ಬಾವಲಿಗಳು ಈ ಆರು ಪ್ರಭೇದಗಳ ಪ್ರಾಣಿಗಳಲ್ಲಿ ಸಾರ್ಸ್-ಕೋವ್-2 ವೈರಸ್ ಪತ್ತೆಯಾಗಿದೆ.
ಒಂದು ಒಪೊಸಮ್ನಲ್ಲಿ ಕಂಡುಬಂದಿರುವ ವೈರಸ್ ಈ ಹಿಂದೆ ತಿಳಿಯದ ವೈರಲ್ ರೂಪಾಂತರಗಳನ್ನು ಹೊಂದಿದೆ ಮತ್ತು ಈ ವೈರಸ್ ಮಾನವರು ಮತ್ತು ಅವರ ರೋಗನಿರೋಧಕ ಪ್ರತಿಕ್ರಿಯೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ವರ್ಜೀನಿಯಾ ಟೆಕ್ ಯೂನಿವರ್ಸಿಟಿ ನಡೆಸಿದ ಅಧ್ಯಯನದ ಪ್ರಕಾರ, ಪ್ರಭೇದಗಳನ್ನು ಅವಲಂಬಿಸಿ ಸೋಂಕು ತಗಲುವ ಪ್ರಮಾಣ ಶೇಕಡಾ 40 ರಿಂದ 60 ರಷ್ಟಿದೆ.
ನೇಚರ್ ಕಮ್ಯುನಿಕೇಷನ್ಸ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಜನರು ನಡೆದಾಡುವ ದಾರಿಗಳು ಮತ್ತು ಹೆಚ್ಚಿನ ದಟ್ಟಣೆಯ ಸಾರ್ವಜನಿಕ ಪ್ರದೇಶಗಳ ಬಳಿ ವಾಸಿಸುವ ಪ್ರಾಣಿಗಳಲ್ಲಿ ಸಾರ್ಸ್-ಕೋವ್-2 ಸೋಂಕು ಹೆಚ್ಚಾಗಿ ಕಂಡು ಬಂದಿದೆ. ಅಂದರೆ ಈ ಪ್ರಾಣಿಗಳಿಗೆ ಮಾನವರಿಂದಲೇ ಸೋಂಕು ತಗುಲಿದೆ.