ನವದೆಹಲಿ: ಜೋ ಬೈಡನ್ ಅವರು ಎರಡನೇ ಅವಧಿಗೆ ಅಧ್ಯಕ್ಷರಾಗುವ ಸಾಧ್ಯತೆಯ ಕುರಿತು ಅಮೆರಿಕದಲ್ಲಿ ಡೆಮಾಕ್ರಟ್‌ಗಳ ನಡುವೆ ಚರ್ಚೆ ಮುಂದುವರೆದಿದೆ. ಈ ಮಧ್ಯೆ ಅಧ್ಯಕ್ಷೀಯ ಚುನಾವಣೆಯನ್ನು ನಿಖರವಾಗಿ ಭವಿಷ್ಯ ನುಡಿಯುವ ಅಲ್ಲಿನ ರಾಜಕೀಯ ತಜ್ಞರೊಬ್ಬರು, ಭಾರತೀಯ ಮೂಲದ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಡೆಮಾಕ್ರಟಿಕ್ ಪಕ್ಷದ ಬಲ ಹೆಚ್ಚಿಸಬಹುದು ಹಾಗೂ ಈ ಪಕ್ಷ ಮತ್ತೆ ಅಧಿಕಾರದ ಗದ್ದುಗೆ ಏರುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.
"ಜೋ ಬೈಡನ್ ಅವರು ಪ್ಲಾನ್ ಬಿ ಅನುಸರಿಸಬೇಕು. ಕಮಲಾ ಹ್ಯಾರಿಸ್ ಅವರು ಅಧ್ಯಕ್ಷರಾಗಲು ಮತ್ತು ಒಮ್ಮತದ ಅಭ್ಯರ್ಥಿಯಾಗಲು ಅವಕಾಶ ಮಾಡಿಕೊಡಬೇಕು. ಈ ನಿರ್ಧಾರವನ್ನು ಬೈಡನ್ ಕೈಗೊಂಡಿದ್ದೇ ಆದಲ್ಲಿ ಡೆಮಾಕ್ರಟಿಕ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ" ಎಂದು ಅಲನ್ ಲಿಚ್ಟ್‌ಮ್ಯಾನ್ ಗುರುವಾರ ಸಂಜೆ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಕಳೆದ ಶನಿವಾರ ಪೆನ್ಸಿಲ್ವೇನಿಯಾದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಲೆ ಯತ್ನ ನಡೆದಿತ್ತು. ಇದರಿಂದ ರಿಪಬ್ಲಿಕನ್ ಪ್ರತಿಸ್ಪರ್ಧಿ ಮತ್ತು ಟ್ರಂಪ್ ಪರವಾಗಿ ಪಾಸಿಟಿವ್ ಜನಾಭಿಪ್ರಾಯವೂ ಮೂಡುತ್ತಿದೆ.