ಕೊಪ್ಪಳ: ಗವಿಸಿದ್ದೇಶ್ವರ ಮಠ ವಿಶೇಷ ಚೇತನ ಯುವಕ - ಯುವತಿಯರಿಗೆ ಮದುವೆ ಮಾಡಿಸುವುದರ ಜೊತೆಗೆ ಕೌಶಲ್ಯ ಕಲಿಸಿ, ಅವರು ಸ್ವಾವಲಂಬಿಯಾಗಿ ಜೀವನ ನಡೆಸುವಂತೆ ಮಾಡಿದೆ. ಹೌದು, ಅನ್ನ, ಅರಿವು, ಅಕ್ಷರ ಎಂಬ ತ್ರಿವಿಧ ದಾಸೋಹಕ್ಕೆ ಹೆಸರುವಾಸಿಯಾಗಿರುವ ಕೊಪ್ಪಳದ ಗವಿಮಠ, ಜಾತ್ರೆಯ ನಿಮಿತ್ತ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಅದರಂತೆ 2023 ರಲ್ಲಿ 21 ವಿಶೇಷ ಚೇತನ ಜೋಡಿಗಳಿಗೆ ಸಾಮೂಹಿಕ ವಿವಾಹ ಮಾಡಿಸುವುದರ ಜೊತೆಗೆ ಅವರ ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟಿತ್ತು.
ವಿಶೇಷ ಚೇತನರಾದ ಮಂಜುಳಾ, "2023ರಲ್ಲಿ ಗವಿಮಠದಲ್ಲಿ ಮದುವೆಯಾಗಿರುವ ದಂಪತಿಗಳು ಈಗ ತಮ್ಮ ಸ್ವಗ್ರಾಮಗಳಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಅವರಿಗೆ ಪೆಟ್ಟಿ ಅಂಗಡಿ ಹಾಗೂ ಸೋಲಾರ್ ವಿದ್ಯುತ್ ಸಂಪರ್ಕ, ಕೆಲವರಿಗೆ ಜೆರಾಕ್ಸ್ ಮಿಷನ್ ಸೇರಿದಂತೆ ವಿವಿಧ ವಸ್ತುಗಳನ್ನು ಸಹ ಒದಗಿಸಲಾಗಿತ್ತು. ಮಠದೊಂದಿಗೆ ಖಾಸಗಿ ಸಂಸ್ಥೆಯಾದ ಸೆಲ್ಕೋ ಕೈ ಜೋಡಿಸಿ ನೆರವು ನೀಡಿದ್ದರಿಂದ ಅಂಗಡಿ ನಡೆಸುತ್ತಾ ನಿತ್ಯ ಸಾವಿರಾರು ರೂಪಾಯಿ ದುಡಿಯುತ್ತಿದ್ದಾರೆ. ಇದರಿಂದಾಗಿ ನಮ್ಮ ಜೀವನ ನಡೆಯುತ್ತಿದೆ" ಎಂದು ಹೇಳಿದರು.
"ಖಾಸಗಿ ಸಂಸ್ಥೆಯಾದ ಸೆಲ್ಕೋ ಕಳೆದ ವರ್ಷ 21 ಜನ ವಿಕಲಚೇತನರಿಗೆ ವಿವಿಧ ಸೌಲಭ್ಯ ನೀಡಿದೆ. ಈ ಬಾರಿ 60 ಜನರಿಗೆ ಸೌಲಭ್ಯಗಳನ್ನು ನೀಡಲು ಮುಂದಾಗಿದ್ದು, ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಗವಿಮಠದೊಂದಿಗೆ ಕೈಜೋಡಿಸುತ್ತೇವೆ" ಎಂದು ಸೆಲ್ಕೋ ಕಂಪನಿ ಅಧಿಕಾರಿ ಪ್ರಕಾಶ ಮೇಟಿ ತಿಳಿಸಿದರು.
ಗವಿಮಠವು ಕೇವಲ ಧಾರ್ಮಿಕ ಕಾರ್ಯಕಗಳಿಗೆ ಮಾತ್ರ ಸೀಮಿತವಾಗದೇ. ಸಾಮಾಜಿಕ ಜಾಗೃತಿಯನ್ನು ಮೂಡಿಸುತ್ತಿದೆ. ಈ ವರ್ಷ ವಿಕಲಚೇತನರ ನಡಿಗೆ ಸಕಲಚೇತನರ ಕಡೆಗೆ ಎಂಬ ಅಭಿಯಾನ ಆರಂಭಿಸಿದೆ. ಅಭಿಯಾನ ಫಲಶೃತಿ ಬಗ್ಗೆ ಮಠದ ಸ್ವಾಮೀಜಿ ನಿಗಾ ವಹಿಸಿ, ವಿಶೇಷ ಚೇತನರಿಗೆ ನೆರವು ನೀಡುವ ಸಂಸ್ಥೆಯನ್ನು ಗುರುತಿಸಿದ್ದು ವಿಶೇಷವಾಗಿದೆ.
ಇದನ್ನೂ ಓದಿ: ಗವಿಸಿದ್ದೇಶ್ವರ ಜಾತ್ರೆಯಲ್ಲಿ ಗಾಳಿಪಟ ಉತ್ಸವ: ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ
ಇದನ್ನೂ ಓದಿ: ಬಂಕಾಪುರ ಧಾಮ: 8 ಮರಿಗಳಿಗೆ ಜನ್ಮ ನೀಡಿದ ತೋಳ