ವಾಷಿಂಗ್ಟನ್ : ಯಾವುದೇ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಕರೆನ್ಸಿಯನ್ನು ಬದಲಿಸಲು ಪ್ರಯತ್ನಿಸಿದರೆ ಶೇಕಡಾ 100 ರಷ್ಟು ತೆರಿಗೆಯನ್ನು ವಿಧಿಸಬೇಕಾಗುತ್ತದೆ ಎಂದು ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಇರುವ ಬ್ರಿಕ್ಸ್ (BRICS) ಗುಂಪಿಗೆ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದ 47 ನೇ ಅಧ್ಯಕ್ಷರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಟ್ರಂಪ್, ಬ್ರಿಕ್ಸ್ ರಾಷ್ಟ್ರಗಳು ಜಾಗತಿಕ ವಹಿವಾಟಿನಲ್ಲಿ ಡಾಲರ್ ಕರೆನ್ಸಿಯ ಬದಲಿಗೆ ತಮ್ಮದೇ ಕರೆನ್ಸಿ ಅಥವಾ ಹೊಸದಾದ ಕರೆನ್ಸಿ ರೂಪಿಸಲು ಬಯಸಿದರೆ ತಪ್ಪೇನಿಲ್ಲ. ಆದರೆ, ಅಮೆರಿಕದೊಂದಿಗೆ ಆ ರಾಷ್ಟ್ರಗಳು ನಡೆಸುವ ವಹಿವಾಟುಗಳಿಗೆ ಶೇಕಡಾ 100 ರಷ್ಟು ಸುಂಕವನ್ನು ಕಟ್ಟಬೇಕಾಗುತ್ತದೆ ಎಂದು ಹೇಳಿದ್ದಾರೆ.
ಯೋಚಿಸಿದರೂ ತೆರಿಗೆ ಹಾಕ್ತೀನಿ: ಇದಲ್ಲದೇ, ಒಂದು ಹೆಜ್ಜೆ ಮುಂದೆ ಹೋಗಿ, ಜಾಗತಿಕ ವ್ಯಾಪಾರದಲ್ಲಿ ಡಾಲರ್ ಬದಲಿಗೆ ಬೇರೆ ಕರೆನ್ಸಿಯನ್ನು ಬಳಸಲು ಕ್ರಮವಲ್ಲ, ಯೋಚಿಸುವ ರಾಷ್ಟ್ರಗಳ ಮೇಲೆ ಶೇಕಡಾ 100 ರಷ್ಟು ತೆರಿಗೆ ಹಾಕದೇ ಬಿಡುವುದಿಲ್ಲ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
ಅಮೆರಿಕವು ಡಾಲರ್ ಹೊರತಾಗಿ ಯಾವುದೇ ಕರೆನ್ಸಿಯನ್ನು ಬೆಂಬಲಿಸುವುದಿಲ್ಲ. ಅಮೆರಿಕದ ಆರ್ಥಿಕತೆಯಲ್ಲಿ ಯಾವುದೇ ರಾಷ್ಟ್ರಗಳು ಮುಂದುವರಿಯಲು ಬಯಸಿದಲ್ಲಿ ನಮ್ಮ ಕರೆನ್ಸಿಯಲ್ಲೇ ವಹಿವಾಟು ನಡೆಸಬೇಕು. ಇಲ್ಲವಾದಲ್ಲಿ ಅಂತಹ ರಾಷ್ಟ್ರಗಳ ವಿರುದ್ಧ 'ಸುಂಕ ಶಿಕ್ಷೆ' ಜಾರಿ ಖಂಡಿತ ಎಂದು ಹೇಳಿದ್ದಾರೆ. ಇದೇ ಹೇಳಿಕೆಯನ್ನು ಡಿಸೆಂಬರ್ನಲ್ಲೂ ಟ್ರಂಪ್ ನೀಡಿದ್ದರು.
ವಲಸೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಟ್ರಂಪ್, ಕಾನೂನುಬದ್ಧವಾಗಿ ಯಾವುದೇ ರಾಷ್ಟ್ರಗಳಿಂದ ಬರುವ ವಲಸಿಗರಿಗೆ ನಮ್ಮ ಸರ್ಕಾರ ಬೆಂಬಲವಾಗಿರಲಿದೆ. ಇದರಿಂದ ರಾಷ್ಟ್ರದ ಉತ್ಪಾದನೆಯೂ ಹೆಚ್ಚಲಿದೆ ಎಂದು ಹೇಳಿದ್ದಾರೆ.
ಬ್ರಿಕ್ಸ್ ರಾಷ್ಟ್ರಗಳು ಯಾವುವು?: ಬ್ರಿಕ್ಸ್ ಶೃಂಗವು ಅಮೆರಿಕದ ಹೊರತಾದ ಅಂತಾರಾಷ್ಟ್ರೀಯ ಸಂಘಟನೆಯಾಗಿದೆ. ಇದರಲ್ಲಿ ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ, ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ, ಇರಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರಗಳಿವೆ.
ಭಾರತದ ನಿಲುವೇನು?: ಜಾಗತಿಕ ವಹಿವಾಟಿನಲ್ಲಿ ಡಾಲರ್ ಅನ್ನು ನಿರ್ಲಕ್ಷಿಸುವ ಮತ್ತು ಬದಲಿಸುವ ಯಾವುದೇ ಪ್ರಸ್ತಾಪ ಭಾರತದ ಮುಂದಿಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಡಿಸೆಂಬರ್‌ನಲ್ಲಿ ಹೇಳಿದ್ದರು.