ಬೆಂಗಳೂರು: ಬೆನ್ನು ಮೂಳೆ ಸಂಬಂಧಿತ ಆರೋಗ್ಯ ಸಮಸ್ಯೆಗಳಿಗೆ ಇನ್ಮುಂದೆ ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ದೊರೆಯಲಿದೆ. ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಈ ಸಂಬಂಧ ಆದೇಶ ಹೊರಡಿಸಿದೆ.
ಬೆನ್ನು ಮೂಳೆ ಸಂಬಂಧಿತ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನಿರ್ದಿಷ್ಟವಲ್ಲದ ಸರ್ಜಿಕಲ್ ಪ್ಯಾಕೇಜ್ ಅಡಿಯಲ್ಲಿ ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸಾ ವಿಧಾನಗಳನ್ನು ಸೇರ್ಪಡೆ ಮಾಡಲಾಗಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮುಖಾಂತರ ಬೆನ್ನುಮೂಳೆ ಆರೋಗ್ಯ ಸಮಸ್ಯೆ ಇರುವವರಿಗೆ ಚಿಕಿತ್ಸಾತ್ಮಕ ಸೇವೆಗಳನ್ನು ಒದಗಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಯೋಜನೆಯಡಿ ಬೆನ್ನು ಹುರಿ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಕೆಲವು ಷರತ್ತುಗಳನ್ನು ವಿಧಿಸಲಾಗಿದ್ದು, ಚಿಕಿತ್ಸೆಗೆ ಗರಿಷ್ಠ ಮಿತಿಯನ್ನು 1.50 ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ನಿರ್ದಿಷ್ಟವಲ್ಲದ ಸರ್ಜಿಕಲ್ ಪ್ಯಾಕೇಜ್ ಅಡಿಯಲ್ಲಿ ಚಿಕಿತ್ಸೆ ಪಡೆಯಲು ರೋಗಿಯು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ 1.50 ಲಕ್ಷ ರೂಪಾಯಿ ಮಿತಿಗೊಳಪಟ್ಟು ಉಚಿತ ಚಿಕಿತ್ಸೆ ಪಡೆಯಬುದಾಗಿದೆ.
ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಯೋಜನೆಗೆ ಯಾವುದೇ ಆರ್ಥಿಕ ಹೊಣೆ ಇಲ್ಲದಂತೆ 36 ಚಿಕಿತ್ಸಾ ವಿಧಾನಗಳನ್ನು ಸೇರಿ ಒಟ್ಟು 1650 ಚಿಕಿತ್ಸಾ ವಿಧಾನಗಳಲ್ಲಿ '' ನಿರ್ದಿಷ್ಟವಲ್ಲದ ಸರ್ಜಿಕಲ್ ಪ್ಯಾಕೇಜ್ '' ಅನ್ನು ಸೇರಿಸಲಾಗಿತ್ತು. ಆದರೆ ಈ ಯೋಜನೆಯಲ್ಲಿ ಬೆನ್ನು ಮೂಳೆ ಸಂಬಂಧಿತ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಅವಕಾಶವಿದ್ದಿಲ್ಲ. ಮಕ್ಕಳೂ ಸೇರಿದಂತೆ ಜನರಲ್ಲಿ ಬೆನ್ನು ಹುರಿ ಆರೋಗ್ಯ ಸಮಸ್ಯೆಗೆ ಈ ಆದೇಶ ಜಾರಿ ಬಳಿಕ ಚಿಕಿತ್ಸಾ ಸೌಲಭ್ಯ ಲಭ್ಯವಿರುತ್ತದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: ಸ್ಟೆರಿಲಿಟಿ ಟೆಸ್ಟ್ನಲ್ಲಿ ಫೇಲ್: 9 ಔಷಧಗಳ ನಿರ್ಬಂಧಿಸುವಂತೆ ಕೇಂದ್ರಕ್ಕೆ ಸಚಿವ ಗುಂಡೂರಾವ್ ಪತ್ರ