ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಬಣ ಬಡಿದಾಟ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬಣ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ನಾಯಕರು ಪರಸ್ಪರ ಹೇಳಿಕೆಗಳನ್ನು ನೀಡುವ ಮೂಲಕ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ.
ಇಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ತಮ್ಮ ನಿವಾಸದಲ್ಲಿ ಮಾತನಾಡಿ, "ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಮ್ಮ ಬಣದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರದಿಂದ ನಾವು ಹಿಂದೆ ಸರಿದಿಲ್ಲ. ಒಂದು ವೇಳೆ ಚುನಾವಣೆ ನಡೆದರೆ ನಾವು ಅಭ್ಯರ್ಥಿಯನ್ನು ಹಾಕುತ್ತೇವೆ. ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಆಗಿಯೇ ಆಗುತ್ತದೆ. ರಾಜ್ಯದ ವಿದ್ಯಮಾನಗಳ ಬಗ್ಗೆ ನಾವು ಹೈಕಮಾಂಡ್ಗೆ ಮಾಹಿತಿ ಕೊಟ್ಡಿದ್ದೇವೆ. ನಮ್ಮ ನಿರ್ಧಾರದಿಂದ ನಾವು ಹಿಂದೆ ಸರಿಯಲ್ಲ. ರಾಜ್ಯಾಧ್ಯಕ್ಷರ ಚುನಾವಣೆಗೆ ನಾವು ಸ್ಪರ್ಧೆ ಮಾಡುತ್ತೇವೆ" ಎಂದು ತಿಳಿಸಿದ್ದಾರೆ.
"ಚುನಾವಣೆ ಉಸ್ತುವಾರಿ ಶಿವರಾಜ್ ಸಿಂಗ್ ಚೌಹಾಣ್ ರಾಜ್ಯಕ್ಕೆ ಬರುವ ದಿನ ಇನ್ನೂ ಅಂತಿಮವಾಗಿಲ್ಲ. ಚುನಾವಣೆ ವೇಳಾಪಟ್ಟಿ ಸಿದ್ಧವಾಗಬೇಕು. ದೆಹಲಿ ಚುನಾವಣೆಯಾದ ನಂತರ ದೆಹಲಿ ವರಿಷ್ಠರು ನಮ್ಮ ಜೊತೆ ಮಾತನಾಡುವುದಾಗಿ ಹೇಳಿದ್ದಾರೆ. ಕರ್ನಾಟಕಕ್ಕೆ ನೂರಕ್ಕೆ ನೂರು ಬದಲಾವಣೆ ಆಗೇ ಆಗುತ್ತದೆ. ಚುನಾವಣೆ ನಡೆಯುವ ಸನ್ನಿವೇಶ ಬಂದರೆ ನಾಮಪತ್ರ ಸಲ್ಲಿಸುವ ಅವಶ್ಯಕತೆ ಬಂದರೆ ನಾವು ನಾಮಪತ್ರ ಸಲ್ಲಿಸುತ್ತೇವೆ" ಎಂದು ಹೇಳಿದರು.
ವಿಚಲಿತರಾಗಿಲ್ಲ : "ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೋಟಿಸ್ ರಾಜಕೀಯವಾಗಿ ಕೊಟ್ಟಿಲ್ಲ. ಅವರು ನೋಟಿಸ್‌ಗೆ ಉತ್ತರ ಕೊಟ್ಟಿದ್ದಾರೆ. ನಾವು ಯತ್ನಾಳ್ ಜೊತೆ ಇದ್ದೇವೆ. ಹೈಕಮಾಂಡ್ ನೋಟಿಸ್‌ನಿಂದ ನಾವು ಯಾರೂ ವಿಚಲಿತರಾಗಿಲ್ಲ. ಚುನಾವಣೆ ಆಗುವವರೆಗೂ ನಮ್ಮ ವಾದ ಇದ್ದೇ ಇರುತ್ತದೆ. ನಮ್ಮ ವಾದ ತಿಳಿಸುವುದಕ್ಕೆ ಮಾತನಾಡುವುದು ನಮಗೆ ಇರುವ ಮಾರ್ಗ. ರಾಜ್ಯಾಧ್ಯಕ್ಷರ ಬದಲಾವಣೆ ಬೇಕೆಂದು ಶೇ.90 ರಷ್ಟು ಜನ ಇದ್ದಾರೆ. ಸಂಘ ಮತ್ತು ವರಿಷ್ಠರು ಸರಿಯಾದ ತೀರ್ಮಾನ ಮಾಡುತ್ತಾರೆ ಎಂಬ ನಂಬಿಕೆ ಇದೆ" ಎಂದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ನಡೆಸಲು ಉದ್ದೇಶಿಸಿರುವ ಜನಾಂದೋಲನ ಕಾರ್ಯಕ್ರಮವನ್ನು ಲೇವಡಿ ಮಾಡಿದ ಅವರು, "ಈಗ ಜನಾಂದೋಲನ ಅಂತ ಹೇಳುತ್ತಾರೆ. ಹಿಂದೆ ಅನೇಕ ವಿಷಯಗಳ ಬಗ್ಗೆ ಆಂದೋಲನ ಮಾಡುವುದಕ್ಕೆ ಅವಕಾಶ ಇತ್ತು, ಆಗ ಅದನ್ನು ಮಾಡಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರು ನಮ್ಮ ಮಾಧ್ಯಮಗೋಷ್ಟಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾವಣೆ ಮಾಡಿ ಅಂತ ಮಾತನಾಡುತ್ತಾರೆ. ಅದು ಯಾಕೆ ಬೇಕು ಅವರಿಗೆ. ಅದಕ್ಕೆ ಈಗ ನಾವು ನಿಮ್ಮನ್ನು ಬದಲಾವಣೆ ಮಾಡಿ ಅಂತಿದ್ದೇವೆ. ಆಂದೋಲನ ಅನ್ನುವ ಪದದ ಅರ್ಥ ಅವರಿಗೆ ಗೊತ್ತಿದೆಯೋ, ಇಲ್ಲವೋ ಗೊತ್ತಿಲ್ಲ" ಎಂದು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
"ನಾವು ಯಾರೂ ಸಹ ಯಡಿಯೂರಪ್ಪ ವಿರುದ್ಧ ಮಾತಾಡಿಲ್ಲ. ಜಿಲ್ಲಾ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ. ಅವರಿಗೆ ಬೇಕಾದವರನ್ನು ಆಯ್ಕೆ ಮಾಡುತ್ತಿದ್ದಾರೆ. ಅದಕ್ಕೆ ಇದೆಲ್ಲ ಆಗಿದೆ. ಬಿಜೆಪಿಯಲ್ಲಿ ಕೆಜೆಪಿ ಟೀಂ ಆಗಿದೆ. ಕೆಜೆಪಿಯವರನ್ನೇ ನೇಮಕ ಮಾಡಿದ್ದಾರೆ. ಚುನಾವಣೆ ಪ್ರಕ್ರಿಯೆ ಸರಿಯಾಗಿ ಆಗಿಲ್ಲ. ಅದಕ್ಕೆ ಚಿತ್ರದುರ್ಗ, ದಾವಣಗೆರೆ ಹಲವು ಕಡೆ ವಿರೋಧ ಬಂದಿದೆ" ಎಂದು ಹೇಳಿದರು.