ತುಮಕೂರು: "ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಮತ್ತು ಕಿರುಕುಳದಲ್ಲಿ ಸಿಕ್ಕಿಹಾಕಿಕೊಂಡಿರುವವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರ ಬಗ್ಗೆ ಕ್ರಮವನ್ನು ಪೊಲೀಸರು ತೆಗೆದುಕೊಂಡಿದ್ದಾರೆ" ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, "ತುಮಕೂರು ಜಿಲ್ಲೆಯಲ್ಲಿ ಅಂತಹ ಕಿರುಕುಳ ಆಗಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು. ತಿಪಟೂರಿನಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತಪ್ಪಿತಸ್ಥರ ವಿರುದ್ಧ ಕ್ರಮ ಈಗಾಗಲೇ ತೆಗೆದುಕೊಳ್ಳಲಾಗಿದೆ" ಎಂದು ತಿಳಿಸಿದರು.
ಮುಂದುವರೆದು, ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಗೃಹ ಸಚಿವರು "ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರಾಗಿದ್ದವರು ಅನೇಕ ಮಂದಿ ತಮ್ಮ ಆಸ್ತಿಯನ್ನೇ ಬರೆದುಕೊಟ್ಟಿದ್ದರು. ಬಲಿದಾನಗಳು ಆಗಿದ್ದವು. ಆದರೆ, ಪ್ರಸ್ತುತ ಸಮಾಜದಲ್ಲಿ ಅಂತಹ ಮನೋಭಾವ ಜನರಲ್ಲಿ ಕಡಿಮೆಯಾಗಿವೆ ಎಂದು ಅರ್ಥ ಮಾಡಿಕೊಂಡಿದ್ದೇನೆ" ಎಂದರು.
ಶಿವಕುಮಾರ ಸ್ವಾಮೀಜಿ ಪ್ರತಿಮೆಗೆ ಸಿಎಂ ಜತೆ ಚರ್ಚೆ: "ಶ್ರೀ ಶಿವಕುಮಾರ ಸ್ವಾಮೀಜಿ ದೇಶದಲ್ಲಿಯೇ ಹೊಸ ರೂಪದ ಸಮಾಜ ಸೇವೆಗೆ ದಾರಿ ಹಾಕಿಕೊಟ್ಟವಂತಹವರು. ಅನ್ನ, ವಿದ್ಯಾ ದಾಸೋಹವನ್ನು ಜೊತೆಯಲ್ಲಿಯೇ ತೆಗೆದುಕೊಂಡು ಹೋಗಿ, ಭವಿಷ್ಯದ ಪ್ರಜೆಗಳನ್ನು ತಯಾರು ಮಾಡುವಲ್ಲಿ ಮತ್ತು ಪರಂಪರೆ, ಸಂಸ್ಕೃತಿ, ಧರ್ಮದ ಬಗ್ಗೆ ಚಿಕ್ಕಂದಿನಲ್ಲಿಯೇ ಶಿಕ್ಷಣ ಕೊಟ್ಟರೆ ಸತ್ಪ್ರಜೆಗಳಾಗುತ್ತಾರೆ ಎಂದು ನಂಬಿದವರಾಗಿದ್ದರು. ಅವರ ಸೇವೆ ಅನನ್ಯ, ನಾವು ಯಾವತ್ತೂ ಸ್ಮರಿಸಿಕೊಳ್ಳಬೇಕಿದೆ" ಎಂದ ಗೃಹ ಸಚಿವರು ದಾಸೋಹದ ದಿನವನ್ನು ಸರಕಾರದ ಹಂತದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀಮಾನ ತೆಗೆದುಕೊಳ್ಳುತ್ತೇವೆ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜನ್ಮ ಸ್ಥಳದಲ್ಲಿ ಪ್ರತಿಮೆ ಸ್ಥಾಪಿಸಲು ಅಗತ್ಯವಿರುವ ಹಣದ ಅವಶ್ಯಕತೆ ಕುರಿತು ಮುಂದಿನ ಬಜೆಟ್ ಹಣ ಮೀಸಲಿಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚಚಿಸುವುದಾಗಿ ತಿಳಿಸಿದರು.
ಶ್ರೀ ಶಿವಕುಮಾರ ಸ್ವಾಮೀಜಿ ಗದ್ದಿಗೆ ದರ್ಶನ: ಇದಕ್ಕೂ ಮುನ್ನ ಜಿ. ಪರಮೇಶ್ವರ್ ಅವರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೇ ಧ್ಯಾನ ಮಂದಿರದಲ್ಲಿ ಕೆಲಕಾಲ ಕುಳಿತು ಪ್ರಾರ್ಥನೆ ಸಲ್ಲಿಸಿದರು. ನಂತರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಇದೇ ಸಂದಭದಲ್ಲಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಹಾಜರಿದ್ದರು.
ಇದನ್ನೂ ಓದಿ: ED ವಿರುದ್ಧ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದೇವೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್