ಮ್ಯಾಗ್ಡೆಬರ್ಗ್, ಜರ್ಮನಿ: ಪೂರ್ವ ಜರ್ಮನಿಯ ಮ್ಯಾಗ್ಡೆಬರ್ಗ್ ನಗರದಲ್ಲಿ ಶುಕ್ರವಾರ ಜನನಿಬಿಡ ಕ್ರಿಸ್‌ಮಸ್ ಮಾರುಕಟ್ಟೆಗೆ ಕಾರೊಂದು ನುಗ್ಗಿ ಅನಾಹುತ ಸೃಷ್ಟಿ ಮಾಡಿದೆ. ಉದ್ದೇಶಪೂರ್ವಕವಾಗಿ ನಡೆದ ಈ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, ಕನಿಷ್ಠ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ರಿಸ್ಮಸ್ ರಜೆ ಹಾಗೂ ಸಂಬಂಧ ಸಂಭ್ರಮಕ್ಕಾಗಿ ಮ್ಯಾಗ್ಡೆಬರ್ಗ್ ನಗರದ ಮಾರುಕಟ್ಟೆ ತುಂಬಿ ತುಳುಕುತ್ತಿತ್ತು. ಇಂತಹ ಜನನಿಬಿಡ ಮಾರುಕಟ್ಟೆಗೆ ಕಾರು ನುಗ್ಗಿ ಅನಾಹುತಕ್ಕೆ ಕಾರಣವಾಗಿದೆ.
ನಿನ್ನೆ ನಡೆದ ಹಿಂಸಾಚಾರವು ನಗರವನ್ನು ಬೆಚ್ಚಿ ಬೀಳಿಸಿದೆ. ಶತಮಾನಗಳ- ಹಳೆಯ ಜರ್ಮನ್ ಸಂಪ್ರದಾಯದ ಭಾಗವಾಗಿರುವ ಹಬ್ಬದ ಕಾರ್ಯಕ್ರಮವನ್ನು ಈ ದಾಳಿ ಹಾಳುಗೆಡವಿದೆ. ಸ್ಯಾಕ್ಸೋನಿ-ಅನ್ಹಾಲ್ಟ್ ಸಚಿವರಾದ ತಮಾರಾ ಝಿಸ್‌ಚಾಂಗ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಂಕಿತ ವ್ಯಕ್ತಿ 50 ವರ್ಷ ವಯಸ್ಸಿನ ಸೌದಿ ವೈದ್ಯರಾಗಿದ್ದು, ಈತ 2006 ರಲ್ಲಿ ಜರ್ಮನಿಗೆ ಬಂದಿದ್ದಾರೆ. ಇವರು ಬರ್ನ್‌ಬರ್ಗ್‌ನಲ್ಲಿ ವೈದ್ಯಕೀಯ ಸೇವೆ ಮಾಡುತ್ತಿದ್ದಾರೆ. ಈತ ಮಾತ್ರ ದಾಳಿ ಮಾಡಿದ್ದು, ನಗರಕ್ಕೆ ಹೆಚ್ಚಿನ ಅಪಾಯವಿಲ್ಲಎಂದು ಅವರು ತಿಳಿಸಿದ್ದಾರೆ.