ಗಾಜಾ: ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವೆ ತಾತ್ಕಾಲಿಕ ಕದನ ವಿರಾಮ ಏರ್ಪಟ್ಟಿದೆ. ಆಶ್ರಯ ತಾಣಗಳಲ್ಲಿದ್ದ ಜನರು ಇದೀಗ, ತಮ್ಮ ತಮ್ಮ ವಾಸಸ್ಥಾನಗಳಿಗೆ ವಾಪಸ್ಸಾಗುತ್ತಿದ್ದಾರೆ. ಆದರೆ, ಅಲ್ಲಿನ ಪರಿಸ್ಥಿತಿ ಹೇಳತೀರದಾಗಿದೆ. ಇಸ್ರೇಲ್‌ನ ದಾಳಿಗೆ ಧರಾಶಾಯಿ ಆಗಿರುವ ಮನೆಗಳು, ಕಟ್ಟಡಗಳು ಥೇಟ್ 'ಸಮಾಧಿ'ಯಂತೆ ಕಾಣುತ್ತಿವೆ.
16 ತಿಂಗಳು ನಡೆದ ಯುದ್ಧದಲ್ಲಿ ಕಟ್ಟಡಗಳ ಸಮೇತ, ನಗರಗಳಿಗೆ ಸರಬರಾಜಾಗುತ್ತಿದ್ದ ನೀರು, ವಿದ್ಯುತ್ ಅಥವಾ ಇನ್ನಿತರ ಸೇವೆಗಳೆಲ್ಲವೂ ಸ್ತಬ್ಧವಾಗಿವೆ. ಇಲ್ಲಿ ನಮ್ಮ ಸುಂದರವಾದ ಮನೆ ಇತ್ತು ಎಂಬುದನ್ನೇ ಜನರು ಹುಡುಕಿ ತೆಗೆಯುವ ಸ್ಥಿತಿ ನಿರ್ಮಾಣವಾಗಿದೆ.
ವಿಶ್ವಸಂಸ್ಥೆಯ ಪ್ರಕಾರ, ಗಾಜಾದಲ್ಲಿ ಒಂದು ತಿಂಗಳು ಕದನ ವಿರಾಮ ಘೋಷಣೆಯಾಗಿದ್ದರಿಂದ ಸುಮಾರು 6 ಲಕ್ಷ ಪ್ಯಾಲೆಸ್ಟೈನಿಯನ್ನರು ಉತ್ತರ ಗಾಜಾಕ್ಕೆ ಮರಳಿದ್ದಾರೆ. ತಮ್ಮ ಮನೆಗಳಿಗೆ ಹಿಂತಿರುಗಿದ ಸಂತೋಷ ಒಂದೆಡೆಯಾದರೆ, ತೀವ್ರ ಹಾನಿ ಅಥವಾ ನಾಶವಾಗಿರುವ ಪ್ರದೇಶದಲ್ಲಿ ಅವಶೇಷಗಳ ಮಧ್ಯೆ ತಮ್ಮ ಭವಿಷ್ಯವನ್ನು ಮತ್ತೆ ಕಟ್ಟಿಕೊಳ್ಳಲು ಸಜ್ಜಾಗಿದ್ದಾರೆ.
ಪುನರ್ನಿರ್ಮಾಣಕ್ಕೆ ಬೇಕಾದ ಸೌಕರ್ಯಗಳಿಲ್ಲ: ವಿಶ್ವಬ್ಯಾಂಕ್, ವಿಶ್ವಸಂಸ್ಥೆ ಮತ್ತು ಯುರೋಪಿಯನ್ ಒಕ್ಕೂಟವು ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಇಸ್ರೇಲ್‌ನ ಬಾಂಬ್ ದಾಳಿ ಮತ್ತು ಹಮಾಸ್ ಉಗ್ರಗಾಮಿಗಳ ಪ್ರತಿರೋಧದ ದಾಳಿಯಲ್ಲಿ ನಾಶವಾದ ಗಾಜಾವನ್ನು ಪುನರ್ ನಿರ್ಮಿಸಲು ಸುಮಾರು 53 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚವಾಗುತ್ತದೆ ಎಂದು ಅಂದಾಜಿಸಿದೆ. ಇದೇ ವೇಳೆ ಇಲ್ಲಿನ ಅವಶೇಷಗಳ ತೆರವಿಗೆ ಬೇಕಾದ ಯಾವುದೇ ಸೌಕರ್ಯಗಳು ಮತ್ತು ಅಥವಾ ಅದಕ್ಕೆ ಬೇಕಾದಷ್ಟು ಹಣದ ಕೊರತೆ ಇದೆ.
ಗಾಜಾವನ್ನು ತಕ್ಷಣ ವಾಸಯೋಗ್ಯಕ್ಕೆ ಅನುಮತಿಸಬೇಕು. ಜನರಿಗೆ ಡೇರೆಗಳು ಮತ್ತು ತಾತ್ಕಾಲಿಕ ಆಶ್ರಯ ತಾಣಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಹಮಾಸ್ ಉಗ್ರರು ಬೇಡಿಕೆ ಇಟ್ಟಿದ್ದರು. ಇದಕ್ಕೆ ಅನುಮತಿಸಿದಲ್ಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಷರತ್ತು ವಿಧಿಸಿತ್ತು. ಇಸ್ರೇಲ್ ಮೊಬೈಲ್ ಮನೆಗಳು ಮತ್ತು ನಿರ್ಮಾಣ ವಸ್ತುಗಳನ್ನು ಗಾಜಾದೊಳಕ್ಕೆ ಬಿಡಲು ಒಪ್ಪಿಕೊಂಡಿದೆ.
ಗಾಜಾದ ಸ್ಥಳೀಯ ಆಡಳಿತವು, ನೀರಿನ ಸಂಪರ್ಕಗಳ ಪುನಾರಂಭ, ಅವಶೇಷಗಳ ತೆರವು ಪ್ರಾರಂಭಿಸಿದೆ. ಆದರೆ, ಅವಶೇಷಗಳ ತೆರವಿಗೆ ಭಾರೀ ಉಪಕರಣಗಳ ಕೊರತೆಯಿದೆ. 40 ಬುಲ್ಡೋಜರ್‌ಗಳು ಮತ್ತು 5 ಡಂಪ್ ಟ್ರಕ್‌ಗಳಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ. ಗಾಜಾವು 50 ಮಿಲಿಯನ್ ಟನ್‌ಗಳಿಗೂ ಹೆಚ್ಚು ಅವಶೇಷಗಳಿಂದ ತುಂಬಿದೆ. ಇದೆಲ್ಲವೂ ತೆರವಾಗಲು 100 ಟ್ರಕ್‌ಗಳು 15 ವರ್ಷಗಳ ಕಾಲ ಅವಿರತವಾಗಿ ಕೆಲಸ ಮಾಡಬೇಕು ಎಂದು ವಿಶ್ವಸಂಸ್ಥೆ ಹೇಳಿದೆ.
ಬದುಕು ಕಟ್ಟಿಕೊಳ್ಳಲು ಹೆಣಗಾಟ: ಕೆಲ ಮನೆಗಳು ಭಾಗಶಃ, ಇನ್ನು ಕೆಲವು ಸಂಪೂರ್ಣ ನೆಲಸಮವಾಗಿವೆ. ಅಳಿದುಳಿದ ಕೋಣೆಗಳಲ್ಲಿ ಜನರು ಬದುಕು ಆರಂಭಿಸುತ್ತಿದ್ದಾರೆ. ನೀರಿಗಾಗಿ ಆಶ್ರಯ ತಾಣಗಳನ್ನೇ ಅವಲಂಬಿಸಬೇಕಿದೆ. ಕಿಮೀ ದೂರ ಇರುವ ಅಲ್ಲಿಂದಲೇ ನೀರು ಹೊತ್ತು ತರಬೇಕು. ವಿದ್ಯುತ್ ಸಂಪರ್ಕ ಕಡಿತವಾಗಿರುವ ಕಾರಣ, ಆಸ್ಪತ್ರೆಗಳಲ್ಲಿನ ಜನರೇಟರ್ ಬಳಸಿ ಫೋನ್‌ಗಳ ಚಾರ್ಜ್ ಮಾಡಿಕೊಳ್ಳುತ್ತಿದ್ದಾರೆ.
ನಾಶ ಕಂಡು ಹತಾಶೆಯಲ್ಲಿ ಜನ: ಒಂದು ತಿಂಗಳು ಕದನ ವಿರಾಮ ನೀಡಲಾಗಿದೆ. ಯುದ್ಧ ಪುನಾರಂಭವಾದಲ್ಲಿ ಬದುಕು ಮತ್ತೆ ಸಂಕಷ್ಟಕ್ಕೆ ಗುರಿಯಾಗಲಿದೆ. ಇದರಿಂದ ಜನರು ಹತಾಶ ಭಾವದಲ್ಲಿ ಬದುಕುವಂತಾಗಿದೆ. 'ಯುದ್ಧ ಮುಗಿಯದೇ ಹೋದಲ್ಲಿ ಸಾವೇ ಲೇಸು' ಎಂದು ತಂಬೋರಾ ಎಂಬಾತ ಕಣ್ಣೀರು ಸುರಿಸಿದರು.
ಇದನ್ನೂ ಓದಿ: ಝೆಲನ್ಸ್ಕಿ ವಿರುದ್ದ ಮತ ಹಾಕಿದ ಅಮೆರಿಕ ; ವಿಶ್ವಸಂಸ್ಥೆಯಲ್ಲಿ ರಷ್ಯಾ ಪರ ನಿಂತ ಟ್ರಂಪ್