ಮಾಸ್ಕೋ (ರಷ್ಯಾ):ಯುದ್ಧದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್ಗೆ ಬೆಂಬಲವಾಗಿ ನಿಂತಿವೆ. ಇದು ರಷ್ಯಾದ ಸಾರ್ವಭೌಮತೆಗೆ ಧಕ್ಕೆ ತಂದಲ್ಲಿ ಪರಮಾಣು ಬಾಂಬ್ಗಳನ್ನು ಬಳಕೆ ಮಾಡಲು ಹಿಂಜರಿಯುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.
ಉಕ್ರೇನ್ ಯುದ್ಧದಲ್ಲಿ ರಷ್ಯಾ ಅಣ್ವಸ್ತ್ರ ದಾಳಿಗೆ ಮುಂದಾಗಿದೆ ಎಂಬ ಮಾತುಗಳು ಪದೇ ಪದೆ ಕೇಳಿ ಬರುತ್ತಿದ್ದು, ಈ ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳೂ ಅನುಮಾನ ವ್ಯಕ್ತಪಡಿಸಿವೆ. ಇದರ ಬೆನ್ನಲ್ಲೇ ಪುಟಿನ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ದೊಡ್ಡ ನಿರ್ಧಾರಕ್ಕೆ ಹಿಂಜರಿಯಲ್ಲ:ರಷ್ಯಾ ಅಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ರಷ್ಯಾದ ಸಾರ್ವಭೌಮತ್ವ ಅಥವಾ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದರೆ ಎಂತಹ ನಿರ್ಣಯಕ್ಕೂ ಸಿದ್ಧವಾಗಿದ್ದೇವೆ. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಇತರ ರಾಷ್ಟ್ರಗಳು ಮೂಗು ತೂರಿಸುವುದು ನಿಲ್ಲಿಸಬೇಕು ಎಂದು ಹೇಳುವ ಮೂಲಕ ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಹಲವು ರಾಷ್ಟ್ರಗಳಿಗೆ ನೇರ ಎಚ್ಚರಿಕೆ ರವಾನಿಸಿದ್ದಾರೆ.
ಸದ್ಯಕ್ಕೆ ಪರಮಾಣು ಬಾಂಬ್ಗಳನ್ನು ಬಳಸುವ ಅಗತ್ಯವಿಲ್ಲ. ಜಗತ್ತು ಅಪಾಯಕಾರಿ ಶಸ್ತ್ರಾಸ್ತ್ರಗಳ ಬಳಕೆಯತ್ತ ಸಾಗುತ್ತಿದೆ ಎಂದು ನಾನು ಭಾವಿಸುವುದಿಲ್ಲ. ಆದರೆ, ಎಲ್ಲದಕ್ಕೂ ಒಂದು ಗಡಿ ಇರುತ್ತದೆ. ಅದನ್ನು ಮೀರಿದಾಗ ದೊಡ್ಡ ನಿರ್ಣಯಗಳನ್ನು ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಹೇಳುವ ಮೂಲಕ ಅಣ್ವಸ್ತ್ರಗಳ ಬಳಕೆಗೆ ಹಿಂಜರಿಯುವುದಿಲ್ಲ ಎಂದು ಸೂಚನೆ ನೀಡಿದ್ದಾರೆ.