ಬೆಂಗಳೂರು: ಎಟಿಎಂ ದರೋಡೆ ಪ್ರಕರಣಗಳು ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಪ್ರಕರಣಗಳ ನಡುವೆ ಹಾಡಹಗಲೇ ಮನೆಗೆ ನುಗ್ಗಿದ ದುಷ್ಕರ್ಮಿಗಳ ಗುಂಪೊಂದು ಗನ್ ಪಾಯಿಂಟ್‌ನಲ್ಲಿ ಮನೆಯವರನ್ನು ಬೆದರಿಸಿ ದರೋಡೆಗೈದ ಘಟನೆ ಶುಕ್ರವಾರ ಮಧ್ಯಾಹ್ನ ಸಿಟಿ ಮಾರ್ಕೆಟ್ ಬಳಿಯ ಆರ್. ಟಿ. ಸ್ಟ್ರೀಟ್‌ನಲ್ಲಿ ನಡೆದಿದೆ.
ಮನೆ ಮಾಲೀಕ ನಾಗರಾಜ್ ಹಾಗೂ ಅವರ ತಾಯಿ ಮನೆಯಲ್ಲಿದ್ದಾಗ ನಾಲ್ಕೈದು ಜನರಿದ್ದ ದುಷ್ಕರ್ಮಿಗಳ ಗುಂಪು ಮನೆಗೆ ನುಗ್ಗಿ ಬೆದರಿಸಿ, ಗನ್ ತೋರಿಸಿ ತಾಯಿ ಮಗನ ಕೈಕಾಲು ಕಟ್ಟಿ ಹಾಕಿದ್ದಾರೆ. ಬಳಿಕ ಆರೋಪಿಗಳು 25 ಗ್ರಾಂ. ಚಿನ್ನಾಭರಣ ಹಾಗೂ 30 ಸಾವಿರ ರೂ. ನಗದು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಸ್ಕ್ ಇಲ್ಲ, ಹಿಂದಿ ಭಾಷೆ : " ಮಧ್ಯಾಹ್ನ 3:30ರಿಂದ 4 ಗಂಟೆ ಸುಮಾರಿಗೆ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು, ಯಾವುದೇ ರೀತಿಯ ಮಾಸ್ಕ್ ಧರಿಸಿರಲಿಲ್ಲ. ಆದರೆ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು. ಭಯದಿಂದ ನಮ್ಮ ಬಳಿಯಿದ್ದದನ್ನು ಕೊಡಬೇಕಾಯಿತು ಎಂದು ನಾಗರಾಜ್ ತಿಳಿಸಿದ್ದಾರೆ".
ಘಟನೆಯ ಕುರಿತು ಸಿ. ಟಿ. ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಯುವತಿ ವಿಚಾರ: ಮಾಜಿ ಪ್ರಿಯಕರನ ಮೇಲೆ ಮಾರಣಾಂತಿಕ ಹಲ್ಲೆ, ಹಾಲಿ ಪ್ರಿಯಕರನ ಬಂಧನ