ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಗಣರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಸಿಎಂ ಒಮರ್ ಅಬ್ದುಲ್ಲಾ ಅವರು ಭಾಗವಹಿಸಬೇಕಿದ್ದ ಧ್ವಜಾರೋಹಣ ಕಾರ್ಯಕ್ರಮಕ್ಕೆ ಹುಸಿ ಬಾಂಬ್ ಬೆದರಿಕೆ ಹಾಕಲಾಗಿತ್ತು. ಈ ಹಿನ್ನೆಲೆ ಭದ್ರತಾ ಪಡೆಗಳು ತೀವ್ರ ತಪಾಸಣೆ ನಡೆಸಿವೆ.
ಕೇಂದ್ರಾಡಳಿತ ಪ್ರದೇಶದ ಎಂಎ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ರಾಷ್ಟ್ರಧ್ವಜ ಹಾರಿಸಿ ಗೌರವ ವಂದನೆ ಸ್ವೀಕರಿಸಿದರು. ಇದಕ್ಕೂ ಮೊದಲು ಕ್ರೀಡಾಂಗಣದಲ್ಲಿ ಬಾಂಬ್ ಇಟ್ಟಿರುವ ಬೆದರಿಕೆ ಹಾಕಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಬಾಂಬ್ ಬೆದರಿಕೆಯ ಇ-ಮೇಲ್ ಅನ್ನು ಶನಿವಾರ ರಾತ್ರಿ 'ಡೈಸ್ ಲಿಶ್' ಎಂಬ ಬಳಕೆದಾರನ ಹೆಸರಿನಲ್ಲಿ ಉನ್ನತ ಶಿಕ್ಷಣ ಕಾರ್ಯದರ್ಶಿ ಮತ್ತು ಉನ್ನತ ಶಿಕ್ಷಣ ನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕೃತ ಇ-ಮೇಲ್ ಖಾತೆಗಳಿಗೆ ಕಳುಹಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Glimpses from Republic Day Parade at MA Stadium, Jammu. Let us commit ourselves to fulfill the cherished dream and vision of founding fathers of our nation. pic.twitter.com/PmqlLMPJQr
— Office of LG J&K (@OfficeOfLGJandK) January 26, 2025
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದರಿಂದಾಗಿ ಕ್ರೀಡಾಂಗಣಕ್ಕೆ ಬಿಗಿಭದ್ರತೆ ಒದಗಿಸಲಾಗಿತ್ತು. ಬಾಂಬ್ ಪತ್ತೆ ದಳವು ತೀವ್ರ ಶೋಧ ನಡೆಸಿತು. ಸ್ಥಳದಲ್ಲಿ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಇದೊಂದು ಸುಳ್ಳು ಬೆದರಿಕೆ ಸಂದೇಶವಾಗಿತ್ತು ಎಂದು ದೃಢಪಡಿಸಿದ್ದಾರೆ.
ಈ ಇ-ಮೇಲ್ ಬಂದ ನಂತರ, ಕ್ರೀಡಾಂಗಣದಲ್ಲಿ ಬಾಂಬ್ ನಿಷ್ಕ್ರಿಯ ದಳದ ಹಲವು ತಂಡಗಳು ಶೋಧ ಕಾರ್ಯ ನಡೆಸಿದವು. ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ರಾತ್ರಿಯಿಡೀ ಸ್ಥಳವನ್ನು ಪರಿಶೀಲಿಸಲಾಯಿತು. ಇ-ಮೇಲ್ ಕಳುಹಿಸಿದ ಆರೋಪಿಗಳನ್ನು ಗುರುತಿಸಿ, ಬಂಧಿಸಲು ವಿಶೇಷ ತಂಡ ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್‌ಒಸಿ ದಾಟಿ ಬಂದ ಪಾಕ್ ನುಸುಳುಕೋರನ ಬಂಧನ : ಗಣರಾಜ್ಯೋತ್ಸವಕ್ಕೆ ಬೆದರಿಕೆ ಹಿನ್ನೆಲೆ ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಆದಾಗ್ಯೂ, ಪೂಂಚ್ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ಬಂದ ಪಾಕಿಸ್ತಾನದ ನುಸುಳುಕೋರನನ್ನು ಭಾನುವಾರ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ನುಸುಳುಕೋರನನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಟೆಟ್ರಿನೋಟ್ ಗ್ರಾಮದ ನಿವಾಸಿ ಮೊಹಮ್ಮದ್ ಯಾಸಿರ್ ಫೈಜ್ ಎಂದು ಗುರುತಿಸಲಾಗಿದೆ. ಆತನನ್ನು ಶನಿವಾರ ರಾತ್ರಿ 11.30 ರ ಸುಮಾರಿಗೆ ಗಡಿ ಗ್ರಾಮವಾದ ಸಲೋತ್ರಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನುಸುಳುಕೋರ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದು, ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಓದಿ: ದೆಹಲಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಗಮನಸೆಳೆದ ಕರ್ನಾಟಕದ 'ಲಕ್ಕುಂಡಿ' ಸ್ತಬ್ಧಚಿತ್ರ
ಓದಿ: ಗಣರಾಜ್ಯೋತ್ಸವ 2025: ಕರ್ತವ್ಯ ಪಥದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು