ಕರ್ನಾಟಕ

karnataka

ETV Bharat / international

ಪಾಕಿಸ್ತಾನದ ಜಿಡಿಪಿ ಮೀರಿ ಬೆಳೆಯುತ್ತಿದೆ ಸಾಲದ ಪ್ರಮಾಣ: ಅಧ್ಯಯನ ವರದಿ

ಪಾಕಿಸ್ತಾನದ ಸಾಲದ ಪ್ರಮಾಣವು ದೇಶದ ಆರ್ಥಿಕತೆಯ ಉತ್ಪಾದನೆಯನ್ನು ಮೀರಿ ಬೆಳೆಯುತ್ತಿದೆ ಎಂದು ವರದಿ ಹೇಳಿದೆ.

By ETV Bharat Karnataka Team

Published : Feb 18, 2024, 5:44 PM IST

Pakistan headed towards an inevitable debt default, warns think tank
Pakistan headed towards an inevitable debt default, warns think tank

ನವದೆಹಲಿ: "ಪಾಕಿಸ್ತಾನಕ್ಕೆ ಅಗತ್ಯವಿರುವ ಸಾಲದ ಪ್ರಮಾಣವು ದೇಶದ ಆರ್ಥಿಕತೆಯ ನಿವ್ವಳ ಉತ್ಪಾದನೆಗಿಂತ (ಜಿಡಿಪಿ) ವೇಗವಾಗಿ ಬೆಳೆಯುತ್ತಿದೆ. ಇದರಿಂದ ಆರ್ಥಿಕತೆಯ ಬೆಳವಣಿಗೆಯಾಗುವ ಸಾಮರ್ಥ್ಯವೇ ಸ್ಥಗಿತವಾಗಲಿದೆ" ಎಂದು ಇಸ್ಲಾಮಾಬಾದ್ ಮೂಲದ ಥಿಂಕ್ ಟ್ಯಾಂಕ್ ತಬಾಡ್​ ಲ್ಯಾಬ್ ವರದಿ ತಿಳಿಸಿದೆ.

"ಪಾಕಿಸ್ತಾನದ ಆರ್ಥಿಕತೆಗೆ ದೊಡ್ಡ ಪ್ರಮಾಣದ ಬದಲಾವಣೆ ಇಂದಿನ ಅಗತ್ಯವಾಗಿದೆ. ವ್ಯಾಪಕ ಸುಧಾರಣೆಗಳನ್ನು ತರದಿದ್ದರೆ ಮತ್ತು ಈಗಿನ ಪರಿಸ್ಥಿತಿಗಳನ್ನು ಬದಲಾಯಿಸದಿದ್ದರೆ ಪಾಕಿಸ್ತಾನದ ಆರ್ಥಿಕತೆ ನಿರಂತರವಾಗಿ ಕುಸಿಯುತ್ತ ಸಾಗಲಿದೆ. ಅಲ್ಲಿಗೆ ದೇಶವು ಸಾಲ ತೀರಿಸಲಾಗದ ಪರಿಸ್ಥಿತಿಗೆ ತಲುಪಲಿದೆ ಮತ್ತು ಈ ಸುಳಿ ಮತ್ತಷ್ಟು ಆಳವಾಗಲಿದೆ" ಎಂದು ವರದಿ ಹೇಳಿದೆ.

"ಪಾಕಿಸ್ತಾನದ ಸಾಲವು ಅಸಾಧಾರಣವಾಗಿದ್ದು, ಅಸ್ತಿತ್ವಕ್ಕೆ ಸಂಬಂಧಿಸಿದ ಸವಾಲಾಗಿದೆ. ಈ ಸಮಸ್ಯೆಯ ನಿವಾರಣೆಗೆ ತಕ್ಷಣದ ಮತ್ತು ಕಾರ್ಯತಂತ್ರದ ಅಗತ್ಯವಿದೆ. ಸಾಲ ಮರುಪಾವತಿ ಐತಿಹಾಸಿಕ ಗರಿಷ್ಠ ಮಟ್ಟದಲ್ಲಿದೆ. ಇದರಿಂದ ಸಾಮಾಜಿಕ ರಕ್ಷಣೆ, ಶಿಕ್ಷಣ, ಆರೋಗ್ಯ ಮತ್ತು ಮುಖ್ಯವಾಗಿ ಹವಾಮಾನ ಬದಲಾವಣೆಯಂತಹ ಬೆಳೆಯುತ್ತಿರುವ ಜನಸಂಖ್ಯೆಯ ಅಗತ್ಯಗಳನ್ನು ಪೂರೈಸಲಾಗುತ್ತಿಲ್ಲ" ಎಂದು ಅದು ಹೇಳಿದೆ.

2011 ರಿಂದ ನಾಮಮಾತ್ರದ ಪರಿಭಾಷೆಯಲ್ಲಿ ಪಾಕಿಸ್ತಾನದ ಬಾಹ್ಯ ಸಾಲವು ದ್ವಿಗುಣಗೊಂಡಿದೆ ಮತ್ತು ದೇಶೀಯ ಸಾಲವು ಆರು ಪಟ್ಟು ಹೆಚ್ಚಾಗಿದೆ. ಹಣಕಾಸು ವರ್ಷ-2024 ರಲ್ಲಿ, ಪಾಕಿಸ್ತಾನವು ಅಂದಾಜು 49.5 ಬಿಲಿಯನ್ ಡಾಲರ್​ನಷ್ಟು ಅವಧಿ ಮೀರಿದ ಸಾಲವನ್ನು ಮರುಪಾವತಿಸಬೇಕಾಗುತ್ತದೆ. ಇದರಲ್ಲಿ ಶೇ 30ರಷ್ಟು ಬಡ್ಡಿಯೇ ಆಗಿದ್ದು, ಈ ಸಾಲಗಳು ದ್ವಿಪಕ್ಷೀಯ ಅಥವಾ ಐಎಂಎಫ್ ಸಾಲವಲ್ಲ ಎಂದು ವರದಿ ತಿಳಿಸಿದೆ.

ಉತ್ಪಾದಕ ವಲಯಗಳು ಅಥವಾ ಕೈಗಾರಿಕೆಗಳಲ್ಲಿ ಹೂಡಿಕೆ ಮಾಡದೆ ಬಳಕೆ ಕೇಂದ್ರಿತ, ಆಮದು ಕೇಂದ್ರಿತ ಆರ್ಥಿಕತೆಯನ್ನು ಬೆಳೆಸಲು ಸಾಲದ ಮೊತ್ತವನ್ನು ದೇಶದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಪಾಕಿಸ್ತಾನದ ಸಾಲದ ಪರಿಸ್ಥಿತಿ ಆತಂಕಕಾರಿಯಾಗಿದೆ ಮತ್ತು ಅದರ ಸಾಲ ಮತ್ತು ಖರ್ಚು ಮಾಡುವ ಅಭ್ಯಾಸವು ಸಮರ್ಥನೀಯವಲ್ಲ ಎಂದು ವರದಿ ತಿಳಿಸಿದೆ.

ಬೆಳೆಯುತ್ತಿರುವ ಜನಸಂಖ್ಯೆಯ ಹೆಚ್ಚುತ್ತಿರುವ ಬೇಡಿಕೆಗಳಾದ ಸಾಮಾಜಿಕ ರಕ್ಷಣೆ, ಆರೋಗ್ಯ, ಶಿಕ್ಷಣ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದ ವಿಪತ್ತುಗಳು ಮತ್ತು ಹಸಿರು ಹವಾಮಾನ ಪರಿವರ್ತನೆಗೆ ಹೆಚ್ಚಿನ ಹಣದ ಅಗತ್ಯವಿದೆ. ಪಾಕಿಸ್ತಾನದ ಹವಾಮಾನ ಮತ್ತು ಸಾಲದ ಸಮಸ್ಯೆಗಳು ಪರಸ್ಪರ ಉಲ್ಬಣಗೊಳಿಸುತ್ತವೆ. ಆದರೆ ಒಂದೇ ಸಮಯದಲ್ಲಿ ಎರಡೂ ಬಿಕ್ಕಟ್ಟುಗಳನ್ನು ಸಮನ್ವಯಗೊಳಿಸಲು ಮತ್ತು ತಗ್ಗಿಸಲು ಅವಕಾಶವಿದೆ ಎಂದು ಥಿಂಕ್ ಟ್ಯಾಂಕ್ ತಬಾಡ್​ ಲ್ಯಾಬ್ ವರದಿ ಹೇಳಿದೆ.

ಇದನ್ನೂ ಓದಿ : ಬೇಡಿಕೆ ಕುಸಿತ: ಮಧ್ಯ ಪ್ರಾಚ್ಯ ಬಿಕ್ಕಟ್ಟಿನ ಹೊರತಾಗಿಯೂ ಏರದ ಕಚ್ಚಾತೈಲ ಬೆಲೆ

ABOUT THE AUTHOR

...view details